ದಾವಣಗೆರೆ: ಜಿಲ್ಲೆ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ತರುವ ವಿಶ್ವಾಸವಿತ್ತು. ಕೋವಿಡ್ ಕಾರಣದಿಂದ ಅದು ಸಾಧ್ಯವಾಗಿಲ್ಲ. ಆದರೂ ಡಿಸೆಂಬರ್ ಬಳಿಕ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಭರವಸೆ ನೀಡಿದರು.
ಮಹಾನಗರ ಪಾಲಿಕೆ ವತಿಯಿಂದ ಮ್ಯಾನ್ಯು ಯಲ್ ಸ್ಕ್ಯಾವೆಂಜರ್ ಹಾಗೂ ವಿಶೇಷಚೇತನ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲು ಶುಕ್ರವಾರ ಪಾಲಿಕೆಯ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಾನಗರ ಪಾಲಿಕೆ ಸ್ವಚ್ಛತೆಯಲ್ಲಿ ಹಿಂದಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬಂದಿದೆ. ಈ ಬಗ್ಗೆ ಮಹಾಪೌರರ ಬಳಿ ವಿಚಾರಿಸಿದಾಗ ಅದು ಡಿಸೆಂಬರ್ ವೇಳೆಯ ವರದಿ ಎಂಬುದು ಗೊತ್ತಾಯಿತು. ಮಹಾನಗರದ ಎಲ್ಲ ಸದಸ್ಯರು ಪಕ್ಷಾತೀತವಾಗಿ ಸ್ವಚ್ಛತೆ ಕಡೆಗೆ ಗಮನ ಹರಿಸಬೇಕು. ಪಾಲಿಕೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಒತ್ತು ನೀಡಬೇಕು ಎಂದರು.
ಕೇಂದ್ರ ಸರ್ಕಾರದ ಆತ್ಮ ನಿರ್ಭರ ನಿಧಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ನಿಯಮಾನುಸಾರ ಸಾಲ ಕೊಡುವ ವ್ಯವಸ್ಥೆಯನ್ನು ಪಾಲಿಕೆಯ ಅಧಿಕಾರಿಗಳು ಮಾಡಬೇಕು. ಬೀದಿ ಬದಿ ವ್ಯಾಪಾರಿಗಳ ಸಾಲಕ್ಕಾಗಿ ಇದುವರೆಗೆ 1200 ಅರ್ಜಿಗಳನ್ನು ಬ್ಯಾಂಕ್‌ಗೆ ಕಳುಹಿಸಲಾಗಿದೆ. ಆದರೆ, 115 ಮಂದಿಗೆ ಮಾತ್ರ ಸಾಲ ಮಂಜೂರಾಗಿದೆ. ಇದು ಸರಿಯಲ್ಲ. ಬಾಕಿ ಉಳಿದ ಎಲ್ಲರಿಗೂ ಸಾಲ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮ್ಯಾನ್ಯುಯಲ್ ಸ್ಕಾ ವೆಂಜರ್ಗೆ ಸ್ವಯಂ ಉದ್ಯೋಗ ಕೈಗೊಳ್ಳಲು 20 ಲಕ್ಷ ರೂ. ವೆಚ್ಚದಲ್ಲಿ 55 ಹೊಲಿಗೆ ಯಂತ್ರ, 46 ಜೆರಾಕ್ಸ್ ಯಂತ್ರ ಮತ್ತು 20 ತಳ್ಳುವ ಗಾಡಿ ಸಾಮಗ್ರಿವಿತರಿಸಲಾಗುತ್ತಿದ್ದು, ಫಲಾನುಭವಿಗಳು ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಪಾಲಿಕೆ ಮಹಾಪೌರ ಬಿ.ಜಿ. ಅಜಯ್ ಕುಮಾರ್ ಮಾತನಾಡಿ, ಕಳೆದ ಜುಲೈತಿಂಗಳಲ್ಲಿ 12 ಕೋಟಿ ರೂ. ತೆರಿಗೆ ವಸೂಲಿಯಾಗಿತ್ತು. ಕೋವಿಡ್ ಸಂದರ್ಭದಲ್ಲೂ ಜುಲೈ ಅಂತ್ಯಕ್ಕೆ 15 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. ಇನ್ನೂ ಹೆಚ್ಚಿನ ಹಣ ಬರುವ ನಿರೀಕ್ಷೆ ಇದೆ. ಇದನ್ನು ವಿಶೇಷವಾಗಿ ವಿದ್ಯುತ್, ಚರಂಡಿ ,ರಸ್ತೆ ದುರಸ್ತಿಗೆ ಬಳಸಲಾಗುವುದು ಎಂದರು.
ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಯಮ್ಮ ಗೋಪಿನಾಯ್ಕ, ವೀರೇಶ್, ಪ್ರಸನ್ನ ಕುಮಾರ್, ಗೌರಮ್ಮ ಗಿರಿರಾಜ್, ಆಯುಕ್ತ ವಿಶ್ವನಾಥ್ ಮುದಜ್ಜಿ, ಪಾಲಿಕೆ ಸದಸ್ಯರು, ಸಿಬ್ಬಂದಿ ಇದ್ದರು.