Advertisement

“NIA ತನಿಖೆಯಿಂದ ಸತ್ಯಾಸತ್ಯ ಹೊರಕ್ಕೆ’: ಸಚಿವೆ ಶೋಭಾ ಕರಂದ್ಲಾಜೆ

11:27 PM Feb 28, 2024 | Team Udayavani |

ಉಡುಪಿ: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಒಳಗೆ ಪಾಕಿಸ್ಥಾನ ಜಿಂದಾಬಾದ್‌ಎಂದು ಘೋಷಣೆ ಕೂಗಿದವರ ಮೇಲೆ ಕಠಿನ ಕ್ರಮ ತೆಗೆದುಕೊಳ್ಳಬೇಕು. ಎನ್‌ಐಎ ಈ ಪ್ರಕರಣದ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರ ಬೀಳಲಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಆದಿಉಡುಪಿಯಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಧಾನಸೌಧಕ್ಕೆ ರಕ್ಷಣೆ ಇದೆ, ರಕ್ಷಣೆಯ ನಡುವೆ ಒಂದು ಸಾವಿರ ಜನ ಪಾಸ್‌ ಇಲ್ಲದೆ ಹೇಗೆ ವಿಧಾನಸೌಧದ ಒಳಗೆ ಬಂದರು? ಪಾಕಿಸ್ಥಾನ ಜಿಂದಾಬಾದ್‌ ಎಂದು ಕೂಗುವ ಮಾನಸಿಕತೆ ಇದ್ದವರನ್ನು ಪೊಲೀಸರು ಹೇಗೆ ಒಳಗೆ ಬಿಟ್ಟರು? ಈ ಪ್ರಕರಣದಲ್ಲಿ ನಾಸಿರ್‌ ಹುಸೇನ್‌ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ನಾಸಿರ್‌ ಬೆಂಬಲಿಗರು, ನಾಸಿರ್‌ ಸಂಪರ್ಕ ಯಾರ ಜತೆ ಇದೆ, ಅಲ್ಲಿ ಬಂದಿರುವ ಯುವಕರ ಸಂಪರ್ಕ ಯಾರ ಜತೆ ಇದೆ ಎಂಬುದನ್ನು ತಿಳಿಯಬೇಕು. ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಇದರ ಹಿಂದೆ ಬಹಳ ದೊಡ್ಡ ಷಡ್ಯಂತ್ರದ ಗುಮಾನಿ ಇದೆ ಎಂದು ಹೇಳಿದರು.

ಭಾರತವನ್ನು ವಿಭಜನೆ ಮಾಡುವ ಮಾತನ್ನು ಕಾಂಗ್ರೆಸ್‌ ಆಡುತ್ತಿದೆ. ದೇಶದಲ್ಲಿ ಗೊಂದಲ ನಿರ್ಮಾಣ ಮಾಡುವ ವ್ಯವಸ್ಥಿತ ಪ್ರಯತ್ನ ಕಾಂಗ್ರೆಸ್‌ನಿಂದ ನಡೆಯಿತ್ತಿದೆ. ಓಲೈಕೆ ಮಾಡುವ ಉದ್ದೇಶದಿಂದ ಕಚೇರಿ ಮನೆಯೊಳಗೆ ಸಿಎಂ ಸಿದ್ದರಾಮಯ್ಯ ಅವರು ಯಾರನ್ನು ಬೇಕಾದರೂ ಬಿಟ್ಟುಕೊಳ್ಳುತ್ತಿದ್ದಾರೆ. ಪ್ರಕರಣದ ಹಿಂದಿರುವ ಶಕ್ತಿಯನ್ನು ಪೊಲೀಸರು ಪತ್ತೆ ಮಾಡಬೇಕು. ರಾಜ್ಯದ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಆರೋಪಿಯನ್ನು ಬಂಧಿಸುವಂತೆ ಕೇಳಿಕೊಂಡಿದ್ದೇವೆ. ಯಾವುದೇ ಸರಕಾರಗಳು, ಅಧಿಕಾರ ಶಾಶ್ವತವಲ್ಲ. ಘೋಷಣೆ ಕೂಗಿದ್ದ ಆರೋಪಿಗಳ ಬಂಧನವಾಗಿಲ್ಲ, ನಾಸಿರ್‌ ಅವರ ವಿಚಾರಣೆ ನಡೆದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಚುನಾವಣೆಗೆ ಸಿದ್ಧತೆ
ಲೋಕಸಭೆ ಚುನಾವಣೆಗೆ ಚೆನ್ನಾಗಿ ತಯಾರಿ ನಡೆಯುತ್ತಿವೆ. ಯಾರು ಅಭ್ಯರ್ಥಿ ಎನ್ನುವುದು ಮುಖ್ಯವಲ್ಲ. ಅಭ್ಯರ್ಥಿ ಯಾರು ಎಂಬ ಬಗ್ಗೆ ಪಕ್ಷದ ರಾಷ್ಟ್ರೀಯ ವರಿಷ್ಠರು ನಿರ್ಧರಿಸಲಿದ್ದಾರೆ. ಕಾರ್ಯಕರ್ತರು, ಮತದಾರರು ಬಿಜೆಪಿ ಜತೆಗೆ ಇದ್ದಾರೆ ಎಂದು ಹೇಳಿದರು.

ರಾಜಕೀಯ ವ್ಯಭಿಚಾರ
ರಾಜ್ಯಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ಅಡ್ಡ ಮತದಾನ ಮಾಡಿದವರ ಮೇಲೆ ಜನ ಕ್ರಮ ತೆಗೆದುಕೊಳ್ಳುತ್ತಾರೆ. ಚುನಾವಣ ಆಯೋಗ, ಪಕ್ಷ ಏನು ಕ್ರಮ ತೆಗೆದುಕೊಳ್ಳಲಿದೆ ಎಂಬ ಚರ್ಚೆ ನಡೆಯುತ್ತಿದೆ. ಎಸ್‌.ಟಿ. ಸೋಮಶೇಖರ್‌ ನಡೆದುಕೊಂಡ ರೀತಿ ನಿಜಕ್ಕೂ ದುಃಖ ತಂದಿದೆ. ರಾಜಕೀಯದಲ್ಲಿ ಯಾವ ರೀತಿಯ ವ್ಯಭಿಚಾರ ಆಗಬಹುದು ಎಂಬುದಕ್ಕೆ ಇದು ಸಾಕ್ಷಿ ಎಂದರು.ಈ ವೇಳೆ ಶಾಸಕ ಯಶ್‌ಪಾಲ್‌ ಸುವರ್ಣ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next