Advertisement

ಸತ್ಯ ಶೋಧನೆ, ಸೇವೆ ಪತ್ರಿಕೋದ್ಯಮದ ಗುರಿ

11:48 AM Aug 06, 2017 | |

ಬೆಂಗಳೂರು: “ಸತ್ಯ ಶೋಧನೆ ಮತ್ತು ಸೇವೆ ಪತ್ರಿಕೋದ್ಯಮದ ಪರಮ ಗುರಿ. ಇದಕ್ಕೆ ಚ್ಯುತಿ ಬಂದರೆ ಘೋರ ಅಪರಾಧ’ ಎಂದು ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಹೇಳಿದ್ದಾರೆ. ಅದೇ ಹಾದಿಯಲ್ಲಿ ಈಗಿನ ಪತ್ರಿಕೋದ್ಯಮ ಸಾಗಬೇಕು ಅನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

Advertisement

ಪ್ರಸ್‌ಕ್ಲಬ್‌ ಆಫ್ ಬೆಂಗಳೂರು ಇದರ ವತಿಯಿಂದ ಶನಿವಾರ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಸ್‌ಕ್ಲಬ್‌ ಆಫ್ ಬೆಂಗಳೂರು ಇದರ ಸುವರ್ಣ ವರ್ಷಾಚರಣೆಯ ಉದ್ಘಾಟನೆ ಮತ್ತು ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

ಸಂವಿಧಾನದ ಆಶಯಗಳ ಈಡೇರಿಕೆ ಮತ್ತು ಪ್ರಜಾಪ್ರಭುತ್ವದ ಯಶಸ್ಸಿಗೆ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಜೊತೆಗೆ ಮಾಧ್ಯಮದ ಸಹಕಾರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಉಳಿದ ರಂಗಗಳಂತೆ ಮಾಧ್ಯಮ ರಂಗ ಸಹ ಸಮಾಜದ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು.

ಸಮಾಜ ಮಾಧ್ಯಮ ರಂಗದ ಮೇಲೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ ಅನ್ನುವುದನ್ನು ಸದಾ ನೆನಪಿಟ್ಟುಕೊಳ್ಳಬೇಕು. ಆಗ ಸಮಾಜದ ಗೌರವ ಗಳಿಸಲು ಸಾಧ್ಯ. ಮಾಧ್ಯಮಗಳ ಸುದ್ದಿಗಳು ಸಮಾಜದ ಒಳಿತಿಗಾಗಿ ಇರಬೇಕು. ಸುದ್ದಿಯ ಮೌಲ್ಯಗಳ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. 

ದೇಶದಲ್ಲಿ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯದ ನಂತರದಲ್ಲಿನ ಪತ್ರಿಕೋದ್ಯಮದ ಕಾರ್ಯ ಮತ್ತು ಕೊಡುಗೆಯನ್ನು ಬಹಳ ಸೂಕ್ಷ್ಮವಾಗಿ ನೋಡಬೇಕಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚುವ ಮೂಲಕ ಪತ್ರಿಕೋದ್ಯಮ ಮತ್ತು ಪತ್ರಕರ್ತರು ದೊಡ್ಡ ಪ್ರೇರಣೆ ನೀಡಿದರು.

Advertisement

ಸ್ವಾತಂತ್ರ್ಯದ ನಂತರ, ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರ ಕನಸಿನ ದೇಶ ಕಟ್ಟುವ ಜವಾಬ್ದಾರಿಯನ್ನು ಪತ್ರಿಕೋದ್ಯಮ ನಿರ್ವಹಿಸಿತು. ಪ್ರಜಾಪ್ರಭುತ್ವದ ತಳಹದಿ ಮತ್ತು ಸಂವಿಧಾನದ ಆಶಯಗಳ ಆಧಾರದಲ್ಲಿ ಚುನಾಯಿತ ಸರ್ಕಾರಗಳ ಸಫ‌ಲತೆ ಮತ್ತು ವಿಫ‌ಲತೆಯನ್ನು ಜನರಿಗೆ ಆಗಾಗ ತಿಳಿಸಿಕೊಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರ ತನ್ನ ಜವಾಬ್ದಾರಿಯನ್ನು ಪ್ರಜ್ಞಾಪೂರ್ವಕವಾಗಿ ನಿಭಾಯಿಸಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. 

ಸ್ಪೂರ್ತಿಯ ಕೇಂದ್ರ: ಪ್ರಸ್‌ಕ್ಲಬ್‌ ಆಫ್ ಬೆಂಗಳೂರು ಮನರಂಜನೆಗೆ ಇರುವಂತಹ ಕ್ಲಬ್‌ ಅಲ್ಲ. ಹಾಗಾಂತ ಮನರಂಜನೆ ಇರಬಾರದು ಎಂದು ನಾನು ಹೇಳುವುದಿಲ್ಲ. ದಿನವಿಡಿ ಕೆಲಸ ಮಾಡಿದ ಪತ್ರಕರ್ತರಿಗೆ ಒಂದಿಷ್ಟು ಮನರಂಜನೆ ಬೇಕು. ಆದರೆ, ಮಜನರಂಜನೆಯ ಜತೆಗೆ ಈ ಪ್ರಸ್‌ಕ್ಲಬ್‌ ಒಂದು ಸ್ಪೂರ್ತಿಯ ಕೇಂದ್ರ ಇದ್ದಂತೆ. ಇಲ್ಲಿ ಪತ್ರಕರ್ತರು ಒಟ್ಟಿಗೆ ಸೇರಿ ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಅಲ್ಲ ರಾಜ್ಯ ಮತ್ತು ಸಮಾಜದ ಒಳಿತನ ಬಗ್ಗೆ ಚರ್ಚೆ ನಡೆಸುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದರು. 

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಮಾತನಾಡಿ, ನನ್ನ ರಾಜಕೀಯ ಬೆಳವಣಿಗೆಗೆ ಪತ್ರಕರ್ತರ ಸಹಕಾರ ಅಪಾರ. ರಾಜಕಾರಣಿಗಳಿಂದ ತಪ್ಪುಗಳಾಗಿದ್ದರೆ ಕಟು ಟೀಕೆ ಮಾಡಿ, ತಪ್ಪನ್ನು ತಿದ್ದಿಕೊಳ್ಳಲು ಅದು ನೆರವಾಗುತ್ತದೆ ಆದರೆ, ಟೀಕಿಸುವ ಮತ್ತು ಅಪಾದನೆ ಮಾಡುವಾಗ ತೀರ್ಪು ನೀಡಬೇಡಿ. ಯಾವುದೇ ವಿಷಯ, ವ್ಯಕ್ತಿ ಅಥವಾ ಘಟನೆ ಬಗ್ಗೆ ಅಭಿಪ್ರಾಯ ಮೂಡಿಸುವ ಮತ್ತು ಮಾಹಿತಿ ನೀಡುವ ಕೆಲಸ ಮಾಡಿ ತೀರ್ಪು ನೀಡಬೇಡಿ ಎಂದು ಹೇಳಿದರು.

ಈ ವೇಳೆ ಪ್ರಸ್‌ಕ್ಲಬ್‌ ಆಫ್ ಬೆಂಗಳೂರಿನ ಸಂಸ್ಥಾಪಕರಾದ ವೈ. ನೆಟ್ಟಕಲ್ಲಪ್ಪ ಹಾಗೂ ಟಿ.ಎಸ್‌. ರಾಮಚಂದ್ರರಾವ್‌ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸ್ಮರಣೆ ಮಾಡಲಾಯಿತು. ಅದೇ ರೀತಿ ಸಂಸ್ಥಾಪಕ ಸದಸ್ಯರಾದ ಕೆ. ಸತ್ಯನಾರಾಯಣ ಮತ್ತು ಟಿ.ಎಲ್‌. ರಾಮಸ್ವಾಮಿ ಸೇರಿದಂತೆ ಮಾಜಿ ಹಾಗೂ ಹಾಲಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು. 

ಕ್ಲಬ್‌ಗ ಜಾಗ ಕೊಡಿ: ಶೈಣೈ
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಸ್‌ಕ್ಲಬ್‌ ಆಫ್ ಬೆಂಗಳೂರು ಅಧ್ಯಕ್ಷ ಸದಾಶಿವ ಶೈಣೈ ಕ್ಲಬ್‌ನ ಬೇಡಿಕೆಗಳಿಗೆ ಆಯಾ ಕಾಲದ ಎಲ್ಲ ಸರ್ಕಾಗಳು ಸ್ಪಂದಿಸಿವೆ. ಈಗಿನ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿದೆ. ನಮ್ಮ ಬಹುತೇಕ ಬೇಡಿಕೆಗಳು ಈಡೇರಿವೆ. ಆದರೆ, ಕ್ಲಬ್‌ಗ ಒಂದು ಸ್ವಂತ ನೆಲೆ ಬೇಕು. ಅದಕ್ಕಾಗಿ ಜಮೀನು ಮತ್ತು ಕಟ್ಟಡದ ಅವಶ್ಯಕತೆ ಇದೆ. ಸರ್ಕಾರಗಳ ಮೇಲೆ ಅವಲಂಬಿತ ಆಗುವುದನ್ನು ತಪ್ಪಿಸಲು, ಸರ್ಕಾರ ಕ್ಲಬ್‌ಗ ಸ್ವಂತ ಜಾಗ ಒದಗಿಸಬೇಕು ಎಂದು ಮನವಿ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next