ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮಾಜಿ ಮ್ಯಾನೇಜರ್ ದಿಶಾ ಸಾಲ್ಯಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಂಚಿನ ಮಾಹಿತಿ ಬಹಿರಂಗಗೊಂಡಿದೆ. ದಿಶಾ ಸಾಯುವ ಮುನ್ನ ತನ್ನ ಮೊಬೈಲ್ ನಿಂದ ಪೊಲೀಸರ “100” ಸಂಖ್ಯೆಗೆ ಕರೆ ಮಾಡಿರುವುದಾಗಿ ವರದಿ ತಿಳಿಸಿದೆ.
ದಿಶಾ ಸಾಲ್ಯಾನ್ ಸಾಯುವ ಮುನ್ನ ಮುಂಬೈ ಪೊಲೀಸ್ ಕಂಟ್ರೋಲ್ ರೂಂನ ದೂರವಾಣಿ ಸಂಖ್ಯೆ “100” ಕರೆ ಮಾಡಿದ್ದಳು, ನಂತರ ಆಕೆ ಸುಶಾಂತ್ ಸಿಂಗ್ ಗೆ ಕರೆ ಮಾಡಿರುವುದಾಗಿ ಬಿಜೆಪಿ ಶಾಸಕ ನಿತೇಶ್ ರಾಣೆ ತಿಳಿಸಿದ್ದಾರೆ.
ತನ್ನ ಜೀವ ಅಪಾಯದಲ್ಲಿದೆ ಎಂದು ತಿಳಿಸಲು ದಿಶಾ ಪೊಲೀಸರು ಮತ್ತು ಸುಶಾಂತ್ ಸಿಂಗ್ ಗೆ ಕರೆ ಮಾಡಿದ್ದರು. ಆದರೆ ಈ ಊಹಾಪೋಹದ ಜಾಡು ಹಿಡಿದು ಹೊರಟ ಇಂಡಿಯಾ ಟುಡೇ ಇದೊಂದು ಸುಳ್ಳು ಮತ್ತು ಆಧಾರ ರಹಿತ ಆರೋಪವಾಗಿದೆ ಎಂದು ವರದಿ ಮಾಡಿದೆ.
“ಜೂನ್ 1ರಿಂದ 8ರವರೆಗೆ ದಿಶಾ ಸಾಲ್ಯಾನ್ ಮೊಬೈಲ್ ಫೋನ್ ನಿಂದ ಸುಶಾಂತ್ ಸಿಂಗ್ ಗಾಗಲಿ ಅಥವಾ 100ಕ್ಕಾಗಲಿ ಯಾವುದೇ ಕರೆ ಹೋಗಿಲ್ಲ ಎಂಬುದು ತಮ್ಮ ತನಿಖೆಯಿಂದ ಪತ್ತೆಯಾಗಿದೆ ಎಂದು ಇಂಡಿಯಾ ಟುಡೇ ವಿವರಿಸಿದೆ. ದಿಶಾ ಸಾಲ್ಯಾನ್ ಜೂನ್ 8ರಂದು ರಾತ್ರಿ ಸಾವನ್ನಪ್ಪಿದ್ದರು.
ಆದರೆ ದಿಶಾ ಸಾಲ್ಯಾನ್ ಸಾಯುವ ಒಂದು ತಿಂಗಳು ಮೊದಲು ಮೇ 10ರಂದು ಆಕೆಯ ಮೊಬೈಲ್ ನಿಂದ “100”ಕ್ಕೆ ದೂರವಾಣಿ ಕರೆ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ. ಈ ಬಗ್ಗೆ ದಿಶಾ ತಂದೆ ಮಾಹಿತಿ ನೀಡಿದ್ದು, ಮಲಾಡ್ ನಲ್ಲಿರುವ ತಮ್ಮ ಮನೆಯನ್ನು ಸ್ವಚ್ಛಗೊಳಿಸಲು ತೆರಳಬೇಕಿದ್ದರಿಂದ ತಮಗೆ ಇ ಪಾಸ್ ಬೇಕೆಂದು ಕೇಳಲು 100ಕ್ಕೆ ಕರೆ ಮಾಡಿರುವುದಾಗಿ ವಿವರಿಸಿದ್ದಾರೆ.