ಕಾರವಾರ: ಇಂದಿನ ಮಹಿಳಾ ಸಮುದಾಯಕ್ಕೆ ಹೇಮರೆಡ್ಡಿ ಮಲ್ಲಮ್ಮ ಆದರ್ಶಳಾಗಿದ್ದಾಳೆ. ಮಹಾ ತಾಳ್ಮೆಯ ಮಲ್ಲಮ್ಮ ಸಹನೆ, ಸತ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕುಟುಂಬ ಮತ್ತು ಸಮಾಜವನ್ನು ಗೆದ್ದಳು. ಮೈದುನ ವೇಮನನನ್ನು ಬದಲಿಸಿದ ಹೇಮರೆಡ್ಡಿ ಮಲ್ಲಮ್ಮ ಭಾರತೀಯ ಕೌಟುಂಬಿಕ ಚೌಕಟ್ಟಿಗೆ ಆದರ್ಶಗಳನ್ನು ತನ್ನ ಸನ್ನಡತೆಗಳ ಮೂಲಕ ನೀಡಿದಳು ಎಂದರು.
ಜಿಲ್ಲಾಧಿಕಾರಿ ಸಭಾ ಭವನದಲ್ಲಿ ಗುರುವಾರ ನಡೆದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದ ವಚನಕಾರರ ಕಟ್ಟಿದ ಸಮ ಸಮಾಜ ಮತ್ತು ಭಕ್ತಿ ಮಾರ್ಗದ ದಾಸರ ಆದರ್ಶಗಳ ತಿರುಳು ಒಂದೇ ಆಗಿದ್ದು ಅದು ಮನುಷ್ಯ ಕುಲಕ್ಕೆ ಸನ್ನಡತೆಯ ಮಾರ್ಗದರ್ಶನ, ಸುಂದರ ಬದುಕಿಗೆ ದಾರಿದೀಪವಾಗಿದೆ. ಈ ಹಿನ್ನೆಲೆಯಲ್ಲಿ ಅಂತಹ ಮಹಾತ್ಮರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಹಿಮಂತರಾಜು ಪ್ರಾಸ್ತಾವಿಕ ಮಾತನಾಡಿ, ಶಿವಶರಣೆ ಅಕ್ಕ ಮಹಾದೇವಿ ಹಾಗೂ ಹೇಮರೆಡ್ಡಿ ಮಲ್ಲಮ್ಮರ ಭಕ್ತಿಮಾರ್ಗ ಒಂದೇ ಆದರೂ ಸಂಸಾರಿಯಾಗಿದ್ದುಕೊಂಡೇ ಶ್ರೀಶೈಲ ಮಲ್ಲಿಕಾರ್ಜುನನ್ನು ಒಲಿಸಿಕೊಂಡ ಮಹಾಸಾದ್ವಿ ಮಲ್ಲಮ್ಮ ಎಂದರು. ಅಲ್ಲದೆ ವಿಷಲಂಪಟನಾಗಿದ್ದ ಮೈದುನ ವೇಮನ ಅವರು ಮಹಾಯೋಗಿಯನ್ನಾಗಿ ಮಾಡಿದ ಕೀರ್ತಿ ಹೇಮರೆಡ್ಡಿ ಮಲ್ಲಮ್ಮ ಅವರಿಗೆ ಸಲ್ಲುತ್ತದೆ. ಮಲ್ಲಮ್ಮನ ಭಕ್ತಿಮಾರ್ಗ ಅನನ್ಯ ಎಂದರು. ಅಪರ ಜಿಲ್ಲಾಧಿಕಾರಿ ಡಾ| ಸುರೇಶ್ ಇಟ್ನಾಳ್ ಉಪಸ್ಥಿತರಿದ್ದರು. ಜಿಲ್ಲಾಡಳಿತ, ಜಿಪಂ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ
ಮಲ್ಲಮ್ಮ ಜಯಂತಿ ಆಯೋಜಿಸಲಾಗಿತ್ತು.