ಕಾರಟಗಿ: ಪಟ್ಟಣದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಸಂಬಂ ಧಿಸಿದಂತೆ ಏಪಕ್ಷೀಯವಾಗಿ ಅಸ್ತಿತ್ವಕ್ಕೆ ಬಂದ ಟ್ರಸ್ಟ್‌ನ ವಿವಾದ ಕೊನೆಗೂ ಎರಡೂ ಬಣಗಳ ಹಿರಿಯರ ನಡುವೆ ಮಾತುಕತೆ ಮೂಲಕ ಶುಕ್ರವಾರ ಸುಖಾಂತ್ಯವಾಗಿದೆ.
ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಏಕಾಏಕಿ ಒಂದು ಸಮುದಾಯದ ಬಣವೊಂದು ಕಳೆದ ವರ್ಷ ಹುಟ್ಟು ಹಾಕಿದ್ದ ಟ್ರಸ್ಟ್ ವಿವಾದಕ್ಕೆ ಕಾರಣವಾಗಿ ಒಂದೇ ಸಮುದಾಯಕ್ಕೆ ಸೀಮಿತಗೊಳಿಸಿಕೊಂಡು ರಚಿಸಿದ ಕಾರಣಕ್ಕೆ ಪಟ್ಟಣದ ವಿವಿಧ ಹಿಂದುಳಿದ ಸಮುದಾಯಗಳ ಅಸಂಖ್ಯಾತ ಭಕ್ತರಲ್ಲಿ ಹತಾಶೆ, ನೋವು, ಆಕ್ರೋಶ ಹಾಗೂ ಸ್ವಾಭಿಮಾನ ಹುಟ್ಟು ಹಾಕಿತ್ತು.
ಕಳೆದ ವರ್ಷವೇ ಎಲ್ಲ ಸಮುದಾಯ ಟ್ರಸ್ಟ್‌ನಲ್ಲಿ ಸೇರಿಸಿಕೊಳ್ಳುವ ಭರವಸೆ ನೀಡಿ ಜಾತ್ರೆ ಸಾಂಗವಾಗಿ ನೆರವೇರಿಸಿಕೊಳ್ಳುವಲ್ಲಿ ಟ್ರಸ್ಟ್ ಯಶಸ್ವಿಯಾಗಿತ್ತು. ಆದರೆ ಈ ಬಾರಿಯೂ ಟ್ರಸ್ಟ್ ರದ್ದುಗೊಳಿಸದೇ ಮುಂದುವರಿಸಿ ಜಾತ್ರೆಯ ಸಂಭ್ರಮದಲ್ಲಿ ತೊಡಗಿಸಿಕೊಂಡಿತ್ತು. ಆದರೆ ಟ್ರಸ್ಟ್‌ನ ವಿಚಾರ ಮತ್ತೂಮ್ಮೆ ಭುಗಿಲೆದ್ದು ಎರಡೂ ಬಣಗಳ ನಡುವೆ ದ್ವೇಷದ ವಾತಾವರಣ ಉಂಟು ಮಾಡಿತ್ತು. ಜಾತ್ರೆ, ಜೋಡು ರಥೋತ್ಸವದ ಸಂಭ್ರಮದ ಮೇಲೆ ಕರಿ ನೆರಳು ಮೂಡಿಸಿತ್ತು.
ಆದರೆ ಗುರುವಾರ ಸಂಜೆ ಮತ್ತು ಶುಕ್ರವಾರ ಬೆಳಗ್ಗೆ ಎರಡೂ ಬಣಗಳ ನಡುವೆ ಸು ದೀರ್ಘ ಮಾತುಕತೆ ನಡೆಯಿತು. ಈ ವೇಳೆ ಹಿಂದುಳಿದ ವರ್ಗಗಳ ಒಕ್ಕೂಟದ ಬಣವು ಕಳೆದ ಬಾರಿ ಮಾತು ಕೊಟ್ಟಂತೆ ಈಗಿರುವ ಟ್ರಸ್ಟ್ ಕೂಡಲೇ ರದ್ದುಗೊಳಿಸಬೇಕು. ಜೊತೆಗೆ ನೂತನ ಟ್ರಸ್ಟ್ ಆಸ್ತಿತ್ವಕ್ಕೆ ತಂದು ಅದರಲ್ಲಿ ಪಟ್ಟಣದ ಸರ್ವ ಸಮುದಾಯ ಒಳಗೊಂಡಂತೆ ಪ್ರಾತಿನಿಧಿ ತ್ವ ಒದಗಿಸಿಕೊಡಲೇಬೇಕೆಂದು ಪಟ್ಟು ಹಿಡಿದರು. ಒಂದು ವೇಳೆ ಟ್ರಸ್ಟ್‌ನಲ್ಲಿ ಎಲ್ಲರಿಗೂ ಅವಕಾಶ ನೀಡದಿದ್ದರೆ ಈ ಬಾರಿ ಜಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದೇ ಇದಕ್ಕೆ ಪ್ರತಿಯಾಗಿ ಎರಡು ದಿನಗಳ ಕಾಲ ಮೀನಮೇಷ ಎಣಿಸುತ್ತ ಕುಳಿತಿದ್ದ ಮತ್ತೂಂದು ಬಣ ಹಿಂದುಳಿದ ಸಮುದಾಯಗಳ ಒಕ್ಕೂರಲಿನ ಬೇಡಿಕೆಗೆ ತಲೆ ಬಾಗಿತು.
ಕೊನೆಗೂ ಸಭೆಯಲ್ಲಿ ಈಗಿರುವ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಗುಂಡಪ್ಪ ಕುಳಗಿ ಮಾತನಾಡಿ, ಈಗಿರುವ ಟ್ರಸ್ಟ್ ರದ್ದುಗೊಳಿಸಿ ಮತ್ತೂಂದು ಸರ್ವ ಸಮುದಾಯ ಒಳಗೊಂಡಂತೆ ನೂತನ ಟ್ರಸ್ಟ್ ಅಸ್ತಿತ್ವಕ್ಕೆ ತರುವುದಾಗಿ ವಾಗ್ಧಾನ ಮಾಡಿದರು. ಇದಕ್ಕೆ ಸಭೆಯ ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಮರುಳಸಿದ್ದಯ್ಯ ಸ್ವಾಮೀಜಿಗಳು ಸಾಕ್ಷಿಯಾದರು.
ಹಿಂದುಳಿದ ವರ್ಗಗಳ ಒಕ್ಕೂಟದ ಪರವಾಗಿ ಶಿವರೆಡ್ಡಿ ನಾಯಕ ಮಾತನಾಡಿ, ಕಳೆದೆರಡು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿದ್ದ ಟ್ರಸ್ಟ್ ರಚನೆ ಪಟ್ಟಣದ ಹಿಂದುಳಿದ ಸಮುದಾಯಗಳ ಭಕ್ತರಲ್ಲಿ ಅಸಮಾಧಾನ ಹುಟ್ಟು ಹಾಕಿತ್ತು. ಕೊನೆಗೂ ಈಗಿರುವ ಟ್ರಸ್ಟ್ ರದ್ದುಗೊಳಿಸಿ ನೂತನ ಟ್ರಸ್ಟ್ ಆಸ್ತಿತ್ವಕ್ಕೆ ತಂದು ಸರ್ವ ಜನಾಂಗ ಒಳಗೊಂಡಂತೆ ಸಮಿತಿ ರಚಿಸುವುದಾಗಿ ಮಾತು ಕೊಟ್ಟಿರುವುದಕ್ಕೆ ಸಂತಸವಾಗುತ್ತಿದೆ. ಸೆ.4 ಮತ್ತು 5ರಂದು ನಡೆಯುವ ಜಾತ್ರೆ, ರಥೋತ್ಸವದಲ್ಲಿ ಸಂಭ್ರಮದಿಂದ ಭಾಗವಹಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಮುಖಂಡರು, ಸಮಾಜ ಬಾಂಧವರು ಇದ್ದರು.