Advertisement

ಟ್ರಸ್ಟ್‌ ನಿಯಂತ್ರಣಕ್ಕೆ ಕಾಯ್ದೆ, ಸ್ವಾಗತಾರ್ಹ ನಿರ್ಣಯ

09:09 AM Jan 30, 2020 | sudhir |

ಟ್ರಸ್ಟಿಗೆ ಸಾಮಾನ್ಯವಾಗಿ ಹೆಚ್ಚಿನ ಅಧಿಕಾರ ಇರುವುದರಿಂದ ಪ್ರಮುಖ ನಿರ್ಣಯ ತೀರ್ಮಾನ ಕೈಗೊಳ್ಳಲು ಯಾರದೂ ಅಡ್ಡಿ ಇರುವುದಿಲ್ಲ. ಇದನ್ನು ದುರುಪಯೋಗಪಡಿಸಿಕೊಂಡು ಕೆಲವರು ಟ್ರಸ್ಟ್‌ನ ಭೂಮಿ ಪರಭಾರೆ, ಮಾರಾಟ ಮಾಡುವ ಪ್ರಕರಣಗಳು ನಡೆದಿವೆ.

Advertisement

ಶಿಕ್ಷಣ, ಧಾರ್ಮಿಕ, ಚಾರಿಟಬಲ್‌ ಟ್ರಸ್ಟ್‌, ದತ್ತಿಗಳಿಗೆ ಸಂಬಂಧಿಸಿದಂತೆ ಟ್ರಸ್ಟಿ ಆಸ್ತಿ ಪರಭಾರೆ ಮಾಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಕಾಯ್ದೆ ಜಾರಿಗೆ ಮುಂದಾಗಿರುವುದು ಒಂದು ರೀತಿಯಲ್ಲಿ ಒಳ್ಳೆಯ ಬೆಳವಣಿಗೆ.
ಧಾರ್ಮಿಕ ಸಂಸ್ಥೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಚಾರಿಟಬಲ್‌ ಟ್ರಸ್ಟ್‌ಗಳಲ್ಲಿರುವ ಟ್ರಸ್ಟಿಗಳು ಜಮೀನು ಪರಭಾರೆ ಮಾಡುವುದರಿಂದ ಕೆಲವೆಡೆ ಅವ್ಯವಹಾರ ಆರೋಪ, ಭೂ ವ್ಯಾಜ್ಯ ಸೃಷ್ಟಿಯಾಗಿ ವರ್ಷಗಟ್ಟಲೆ ನ್ಯಾಯಾಲಯಗಳಲ್ಲಿ ಪ್ರಕರಣ ನಡೆದು ಅದು ಇತ್ಯರ್ಥವಾಗುವವರೆಗೂ ಟ್ರಸ್ಟ್‌ನ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡು ಟ್ರಸ್ಟ್‌ ಸ್ಥಾಪನೆಯ ಮೂಲ ಉದ್ದೇಶವೇ ಸಾಕಾರವಾಗದ ಪ್ರಕರಣಗಳೂ ಸಾಕಷ್ಟಿವೆ.

ಟ್ರಸ್ಟಿಗೆ ಸಾಮಾನ್ಯವಾಗಿ ಹೆಚ್ಚಿನ ಅಧಿಕಾರ ಇರುವುದರಿಂದ ಸಂಬಂಧಪಟ್ಟ ಟ್ರಸ್ಟ್‌ಗೆ ಸಂಬಂಧಿಸಿದಂತೆ ಪ್ರಮುಖ ನಿರ್ಣಯ ತೀರ್ಮಾನ ಕೈಗೊಳ್ಳಲು ಯಾರದೂ ಅಡ್ಡಿ ಇರುವುದಿಲ್ಲ. ಇದನ್ನು ದುರುಪಯೋಗ ಪಡಿಸಿಕೊಂಡು ಕೆಲವರು ಟ್ರಸ್ಟ್‌ನ ಭೂಮಿ ಪರಭಾರೆ, ಮಾರಾಟ ಮಾಡುವ ಪ್ರಕರಣಗಳು ನಡೆದಿವೆ.

ಇಂತಹ ಪ್ರಕರಣಗಳಲ್ಲಿ ಸಾಕಷ್ಟು ವಿವಾದ ಉಂಟಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವುದರ ಜತೆಗೆ ಸಾರ್ವಜನಿಕ ಹಿತಾಸಕ್ತಿ ಹಾಗೂ ಸಮುದಾಯದ ಹಿತಾಕಸ್ತಿಗಾಗಿ ಸ್ಥಾಪನೆಯಾದ ಟ್ರಸ್ಟ್‌ನಲ್ಲಿ ಎಲ್ಲ ಚಟು ವಟಿಕೆಗಳು ಸ್ಥಗಿತಗೊಂಡು ಅಂತಿಮವಾಗಿ ಅದನ್ನು ಆಶ್ರಯಿಸಿರುವ ಸಮುದಾಯ ಅಥವಾ ಜನರಿಗೆ ಸಮಸ್ಯೆ ಉಂಟಾಗುವುದು ಸಾಮಾನ್ಯವಾಗಿದೆ.

ಹೀಗಾಗಿ, ರಾಜ್ಯ ಸರ್ಕಾರ ಇಂಥದ್ದೊಂದು ಕ್ರಮಕ್ಕೆ ಮುಂದಾಗಿರಬಹುದು. ಆದರೆ, ಕಾಯ್ದೆ ಜಾರಿಗೆ ಮುನ್ನ ಒಂದಷ್ಟು ಅಧ್ಯಯನ ನಡೆಸಿದರೆ ಕಾಯ್ದೆಯಲ್ಲಿ ನಿಯಮಾವಳಿ ರೂಪಿಸುವುದು ಸೂಕ್ತ.

Advertisement

ಯಾವುದೇ ಒಂದು ಟ್ರಸ್ಟ್‌ನಲ್ಲಿ ಟ್ರಸ್ಟಿ ಅಲ್ಲದೆ ಇತರೆ ಸದಸ್ಯರು ಇರುತ್ತಾರೆ. ನಿರ್ದೇಶಕರು ಅಥವಾ ಪದಾಧಿಕಾರಿಗಳು ಇರುತ್ತಾರೆ. ಹೀಗಾಗಿ, ಟ್ರಸ್ಟ್‌ ಆಸ್ತಿ ಹಾಗೂ ಇತರೆ ಸಂಪನ್ಮೂಲ ಕಾಪಾಡುವ ನಿಟ್ಟಿನಲ್ಲಿ ಎಲ್ಲರಿಗೂ ಹೊಣೆಗಾರಿಕೆ ಇರುವುದು ಸೂಕ್ತ.

ಟ್ರಸ್ಟ್‌ ಜಮೀನು ಪರಭಾರೆ ಅಥವಾ ಮಾರಾಟ, ಲೀಸ್‌, ಒಪ್ಪಂದ ನೀಡುವ ಸಂಬಂಧವೂ ಸ್ಪಷ್ಟ ನಿಯಮಾವಳಿ ಅಗತ್ಯ. ಇದರಿಂದ ಟ್ರಸ್ಟ್‌ಗಳು ಪಾರದರ್ಶಕತೆಯಿಂದ ಕೆಲಸ ಮಾಡಲು ಸಾಧ್ಯ.

ಟ್ರಸ್ಟ್‌ಗಳ ಬಗ್ಗೆ ಜನರಿಗೂ ನಂಬಿಕೆ ಹಾಗೂ ವಿಶ್ವಾಸ ಬರಲು ಸಾಧ್ಯ.
ಟ್ರಸ್ಟ್‌ಗಳ ಹೆಸರಿನಲ್ಲಿ ಸರ್ಕಾರಕ್ಕೆ ಜಮೀನು ಮಂಜೂರು, ಅನುದಾನ ಮಂಜೂರಿಗೂ ಮನವಿ ಮಾಡಲಾಗುತ್ತಿದೆ. ಆದರೆ, ಸರ್ಕಾರದಿಂದ ಪಡೆದ
ಭೂಮಿ ಅಥವಾ ಅನುದಾನದ ದುರುಪಯೋಗವಾಗಿರುವ ಪ್ರಕರಣಗಳು ಹಲವೆಡೆ ವರದಿಯಾಗಿವೆ. ಹೀಗಾಗಿ, ಸರ್ಕಾರದ ಮೂಲ ಉದ್ದೇಶ ಇಂತಹ ಪ್ರಕರಣಗಳ ಕಡಿವಾಣವೂ ಇರಬಹುದು.

ಇದಲ್ಲದೆ ಖಾಸಗಿಯಾಗಿಯೂ ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ ಧಾರ್ಮಿಕ, ಶಿಕ್ಷಣ ಸಂಸ್ಥೆಗಳನ್ನು ಟ್ರಸ್ಟ್‌ ಹೆಸರಿನಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಸಮುದಾಯ ದಿಂದಲೇ ಸಹಾಯ ಪಡೆದು ಜಮೀನು ಖರೀದಿ ಕಟ್ಟಡ ನಿರ್ಮಾಣವೂ ಆಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ಟ್ರಸ್ಟಿ, ಜಮೀನು ಬೇರೊಬ್ಬರಿಗೆ ಪರಭಾರೆ, ಮಾರಾಟ ಮಾಡಿದರೆ ಅದು ವಾಜ್ಯದ ಸ್ವರೂಪ ಪಡೆಯುತ್ತದೆ.

ಹೀಗಾಗಿ, ಇಂತಹ ಎಲ್ಲದಕ್ಕೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಟ್ರಸ್ಟ್‌ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸಿರುವುದು ಸ್ವಾಗತಾರ್ಹ.

Advertisement

Udayavani is now on Telegram. Click here to join our channel and stay updated with the latest news.

Next