ಹಿರಿಯ ನಿರ್ದೇಶಕ-ನಿರ್ಮಾಪಕ ದಿವಂಗತ ಜಿ.ವಿ.ಅಯ್ಯರ್ ಅವರ ಮೊಮ್ಮಗಳು ರಿಷಿಕಾ ಶರ್ಮ ಗೊತ್ತಲ್ವಾ? ಅದೇ ಈ ಹಿಂದೆ ಅವರು ಸದ್ದಿಲ್ಲದೆಯೇ ‘ಟ್ರಂಕ್’ ಎಂಬ ಚಿತ್ರ ನಿರ್ದೇಶನ ಮಾಡುವ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ ಎಂಬ ಸುದ್ದಿಯನ್ನು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಈಗ ಹೊಸ ಸುದ್ದಿಯೆಂದರೆ, ಆ ಚಿತ್ರದ ಚಿತ್ರೀಕರಣ ಬಹುತೇಕ ಮುಗಿಸಿ, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ ನಿರ್ದೇಶಕಿ ರಿಷಿಕಾ ಶರ್ಮ.
ಅದಷ್ಟೇ ಅಲ್ಲ, ಹೊಸ ವರ್ಷಕ್ಕೆ ತಮ್ಮ ಚಿತ್ರದ ಹೊಸ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದ್ದಾರೆ. ಇಲ್ಲಿ ಪ್ರಕಟಿಸಿರುವ ಪೋಸ್ಟರ್ ನೋಡಿದರೆ, ಹಾರರ್ ಸಿನಿಮಾದ ಫೀಲ್ ಬರುವುದು ದಿಟ. ಬರುವುದೇನು, ರಿಷಿಕಾ ಶರ್ಮ ನಿರ್ದೇಶಿಸಿರುವುದು ಹಾರರ್ ಸಿನಿಮಾನೇ. ನಿರ್ದೇಶಕಿ ರಿಷಿಕಾ ಶರ್ಮ ಅವರಿಗೆ ನಿರ್ದೇಶನ ಮಾಡಬೇಕು ಅಂತ ಯೋಚನೆ ಬಂದಾಗ, ಅವರು ಮೊದಲು ಆಯ್ಕೆ ಮಾಡಿಕೊಂಡಿದ್ದು ಹಾರರ್ ಕಥೆ.
ಹಾಗಂತ, ಕಲ್ಪನೆಯ ಕಥೆಯಲ್ಲ ಅದು. ಉತ್ತರ ಕರ್ನಾಟಕದಲ್ಲಿ ನಡೆದಂತಹ ನೈಜ ಘಟನೆ ಇಟ್ಟುಕೊಂಡು ಮಾಡಿದ ಚಿತ್ರವಂತೆ. ಉತ್ತರ ಕರ್ನಾಟಕದ ಊರೊಂದರ ಮನೆಯಲ್ಲಿ ನಡೆದ ಒಂದು ಕಥೆ ಚಿತ್ರದ ಹೈಲೈಟ್ ಅಂತೆ. ಅದು ಒಂದು ಟ್ರಂಕ್‌ನಿಂದ ಶುರುವಾಗುವ ಕಥೆ. ಎರಡು ಜನರೇಷನ್ ಹಿಂದೆ ಇದ್ದಂತಹ ಕಥೆಯನ್ನು ಈಗ ಚಿತ್ರ ಮಾಡಲಾಗಿದೆ. ಒಂದು ಟ್ರಂಕ್ ಸುತ್ತ ನಡೆಯೋ ಕಥೆಯೇ ಚಿತ್ರದ ಜೀವಾಳ.
ಟ್ರಂಕ್ ಚಿತ್ರದ ಕೇಂದ್ರಬಿಂದು. ಅದರೊಳಗೊಂದು ವಿಚಿತ್ರ ಘಟನೆ ನಡೆಯುತ್ತೆ. ಅದನ್ನೇ ಇಟ್ಟುಕೊಂಡು ಕಥೆ ವಿಸ್ತರಿಸಿ ಸಿನಿಮಾ ಮಾಡಿದ್ದಾರೆ ರಿಷಿಕಾ ಶರ್ಮ. ರಿಷಿಕಾ ಶರ್ಮ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರವಾದರೂ, ಈ ಹಿಂದೆ “ಬಿಟೆಕ್’ ಎಂಬ ಚಿತ್ರದಲ್ಲಿ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಆ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ತೆರೆಕಂಡಿದೆ.
ತುಳು ಭಾಷೆಯಲ್ಲಿ ಬಂದ “ಶಟರ್ ದುಲೈ’ ಚಿತ್ರದಲ್ಲೊಂದು ಪಾತ್ರ ನಿರ್ವಹಿಸಿ, ಅಲ್ಲೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇದರ ಜತೆಗೆ “ಸೈಕೋ ಶಂಕ್ರ’ ಹಾಗು ‘ನಡುವೆ ಅಂತರವಿರಲಿ’ ಚಿತ್ರದಲ್ಲೂ ನಟಿಸಿದ್ದಾರೆ. ಇಷ್ಟಕ್ಕೂ ರಿಷಿಕಾ ಶರ್ಮ ಅವರಿಗೆ ಈ ದೆವ್ವದ ಚಿತ್ರ ಮಾಡೋಕೆ ಕಾರಣ, ಅವರಿಗಾದ ಒಂದು ಅನುಭವ.
ಅದರ ಮೇಲೆಯೇ ದೆವ್ವದ ಚಿತ್ರ ಮಾಡಿದ್ದಾರಂತೆ. ಚಿತ್ರಕ್ಕೆ ರಂಗಶಂಕರದ ಸುಖೇಶ್ ಶೆಟ್ಟಿ ಸಂಭಾಷಣೆ ಬರೆದಿದ್ದಾರೆ. ಇಲ್ಲಿ ಮಾತುಗಳಿಗೆ ಹೆಚ್ಚು ಅವಕಾಶವಿಲ್ಲ. ಕೇವಲ ನಿಶ್ಯಬ್ಧದಲ್ಲೇ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ ಅವರು. ಚಿತ್ರವನ್ನು ರಾಜೇಶ್ ಭಟ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ನಿಹಾಲ್ ನಾಯಕರಾದರೆ, ವೈಶಾಲಿ ದೀಪಕ್ ನಾಯಕಿ.
ಉಳಿದಂತೆ ಅರುಣ ಬಾಲರಾಜ್, ರಂಗಭೂಮಿಯ ಹಿರಿಯ ಕಲಾವಿದೆ ಸುಂದರಶ್ರೀ ಸೇರಿದಂತೆ ಅನೇಕರು ನಟಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಭಜರಂಗ್, ಸಂದೀಪ್ ಕ್ಯಾಮೆರಾ ಹಿಡಿದಿದ್ದಾರೆ. ಕಾರ್ತಿಕ್ ರಮನ್ ಮತ್ತು ಬೀಟ್ ಗುರು ಬ್ಯಾಂಡ್‌ನ ಗಣೇಶನ್ ಸಂಗೀತವಿದೆ. ಅಲ್ವಿನ್ ಹಿನ್ನೆಲೆ ಸಂಗೀತವಿದೆ.