Advertisement

ವ್ಯಾಪಾರ ಒಪ್ಪಂದದ ಸುಳಿವು ಕೊಟ್ಟ ಟ್ರಂಪ್‌

10:19 AM Feb 23, 2020 | Sriram |

ವಾಷಿಂಗ್ಟನ್‌/ನವದೆಹಲಿ:ಹಲವಾರು ವರ್ಷಗಳಿಂದ ಭಾರತವು ಅಧಿಕ ಶುಲ್ಕ ಹೇರುವ ಮೂಲಕ ಅಮೆರಿಕಕ್ಕೆ ಭಾರೀ ಹೊಡೆತ ನೀಡುತ್ತಿದೆ. ಆದರೂ, ನಾನು ಪ್ರಧಾನಿ ಮೋದಿಯವರೊಂದಿಗೆ ವ್ಯಾಪಾರ ಸಂಬಂಧ ವೃದ್ಧಿಗೆ ಸಂಬಂಧಿಸಿ ಮಾತುಕತೆ ನಡೆಸುತ್ತೇನೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

Advertisement

“ಭಾರತ ನಮ್ಮನ್ನು ಚೆನ್ನಾಗಿ ನಡೆಸಿಕೊಂಡಿಲ್ಲ, ಹಾಗಾಗಿ ದೊಡ್ಡ ಮಟ್ಟದ ಒಪ್ಪಂದಗಳನ್ನು ಸದ್ಯಕ್ಕೆ ಮಾಡಿಕೊಳ್ಳುವುದಿಲ್ಲ’ ಎಂದು ಇತ್ತೀಚೆಗೆ ಹೇಳಿದ್ದ ಟ್ರಂಪ್‌, ಶುಕ್ರವಾರ ಕೊಲೊರಾಡೋದಲ್ಲಿ ನಡೆದ “ಕೀಪ್‌ ಅಮೆರಿಕ ಗ್ರೇಟ್‌’ ರ್ಯಾಲಿಯಲ್ಲಿ ತಮ್ಮ ನಿಲುವನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿದಂತೆ ಕಂಡುಬಂತು.

ಮುಂದಿನ ವಾರ ನಾವು ಭಾರತಕ್ಕೆ ಭೇಟಿ ನೀಡಲಿದ್ದೇವೆ. ಹಲವು ವರ್ಷಗಳಿಂದ ಭಾರತ ನಮಗೆ ಹೊಡೆತ ನೀಡುತ್ತಲೇ ಬಂದಿದೆ. ಆದರೆ, ನಾನು ಪ್ರಧಾನಿ ಮೋದಿಯನ್ನು ಬಹಳ ಇಷ್ಟಪಡುತ್ತೇನೆ. ಹಾಗಾಗಿ ವ್ಯಾಪಾರ ಕುರಿತೂ ಮಾತುಕತೆ ನಡೆಸುತ್ತೇನೆ. ಅಮೆರಿಕದ ಉತ್ಪನ್ನಗಳಿಗೆ ಉತ್ತೇಜನ ನೀಡುವ ಕೆಲಸವನ್ನೂ ಮಾಡುತ್ತೇನೆ ಎಂದು ಟ್ರಂಪ್‌ ಹೇಳಿದ್ದಾರೆ. ಈ ಮೂಲಕ ಭಾರತದೊಂದಿಗೆ ವ್ಯಾಪಾರ-ವಹಿವಾಟಿಗೆ ಸಂಬಂಧಿಸಿ ಒಪ್ಪಂದ ನಡೆಯಲಿದೆ ಎಂಬ ಸುಳಿವನ್ನು ನೀಡಿದ್ದಾರೆ.

10 ದಶಲಕ್ಷ ಮಂದಿ: ಇದೇ ವೇಳೆ, ಅಹಮದಾಬಾದ್‌ನಲ್ಲಿ ನನ್ನನ್ನು ಒಂದು ಕೋಟಿ ಮಂದಿ ಸ್ವಾಗತಿಸಲಿದ್ದಾರೆ ಎಂದು ಟ್ರಂಪ್‌ ಹೇಳಿದ್ದಾರೆ. ಮೊನ್ನೆಯಷ್ಟೇ ರೋಡ್‌ಶೋದಲ್ಲಿ 70 ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸ್ಥಳೀಯಾಡಳಿತ, 70 ಅಲ್ಲ 7 ಲಕ್ಷ ಮಂದಿ ಎಂದಿದ್ದರು. ಇದೀಗ ಟ್ರಂಪ್‌ ಮತ್ತೆ ಹೊಸ ಅಂಕಿಸಂಖ್ಯೆ ನೀಡಿದ್ದಾರೆ!

ತಾಜ್‌ಮಹಲ್‌ಗಿಲ್ಲ ಪ್ರವೇಶ:ಟ್ರಂಪ್‌ ದಂಪತಿ ಆಗ್ರಾದ ತಾಜ್‌ಮಹಲ್‌ಗ‌ೂ ಭೇಟಿ ನೀಡಲಿರುವ ಕಾರಣ ಫೆ.24ರಂದು ಪ್ರೇಮಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಭದ್ರತಾ ಕಾರಣಗಳಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಇವಾಂಕಾ ಕೂಡ ಭಾರತಕ್ಕೆ
ಟ್ರಂಪ್‌ ಪುತ್ರಿ ಇವಾಂಕಾ ಟ್ರಂಪ್‌ ಮತ್ತು ಅಳಿಯ ಜೇರ್ಡ್‌ ಕೂಡ ಭಾರತಕ್ಕೆ ಆಗಮಿಸಲಿದ್ದಾರೆ. ಟ್ರಂಪ್‌ ಜತೆ ಬರಲಿರುವ ಉನ್ನತಮಟ್ಟದ ನಿಯೋಗ ದಲ್ಲಿ ಇವರೂ ಇರಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇನ್ನು ಟ್ರಂಪ್‌ ದಂಪತಿ ಸಾಬರಮತಿ ಆಶ್ರಮ ಕ್ಕೆ ಭೇಟಿ ನೀಡುತ್ತಾರೋ, ಇಲ್ಲವೋ ಎನ್ನುವುದನ್ನು ಶ್ವೇತಭವನವೇ ನಿರ್ಧರಿಸ ಲಿದೆ ಎಂದು ಹೇಳಲಾಗಿದೆ.

3 ಗಂಟೆ ಬೇಗ ಬನ್ನಿ
ಫೆ.24ರಂದು ಅಹಮದಾಬಾದ್‌ ಏರ್‌ಪೋರ್ಟ್‌ ಮೂಲಕ ಪ್ರಯಾಣಿಸಲಿರುವ ಎಲ್ಲ ಪ್ರಯಾಣಿಕರೂ ನಿಗದಿಗಿಂತ 3 ಗಂಟೆ ಬೇಗ ಬರುವಂತೆ ವಿಮಾನನಿಲ್ದಾಣದ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಟ್ರಂಪ್‌ ಭೇಟಿ ಹಿನ್ನೆಲೆ ಭದ್ರತಾ ತಪಾಸಣೆ ಹೆಚ್ಚಿರುವ ಕಾರಣ ಈ ಸಲಹೆ ನೀಡಲಾಗಿದೆ. ಜತೆಗೆ, ಟಿಕೆಟ್‌ಗಳ ಹಾರ್ಡ್‌ ಕಾಪಿಯನ್ನೇ ತಮ್ಮೊಂದಿಗೆ ತರಬೇಕು ಎಂದೂ ಸೂಚಿಸಲಾಗಿದೆ. ಅಲ್ಲದೆ, ಅಂದು ಏರ್‌ಪೋರ್ಟ್‌ನ ಎಲ್ಲ ಸಿಬ್ಬಂದಿಯೂ ಪೊಲೀಸರ ಹೆಚ್ಚುವರಿ ತಪಾಸಣೆಗೆ ಒಳಗಾಗಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next