Advertisement

ಟ್ರಂಪ್‌ ಖಾತೆ ರದ್ದು ದ್ವಂದ್ವ ನಿಲುವೇಕೆ?

01:36 AM Jan 11, 2021 | Team Udayavani |

ಟ್ವಿಟರ್‌ ಸಂಸ್ಥೆಯು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಾತೆಯನ್ನು ಶಾಶ್ವತವಾಗಿ ತೆಗೆದುಹಾಕಿದ ವಿಚಾರ, ಈಗ ಜಾಗತಿಕ ಚರ್ಚೆಯ ವಿಷಯವಾಗಿ ಬದಲಾಗಿದೆ. ಟ್ರಂಪ್‌ ತಮ್ಮ ಎಗ್ಗಿಲ್ಲದ ಹೇಳಿಕೆಗಳಿಂದ ನಿರಂತರವಾಗಿ ಟೀಕೆಗಳನ್ನು ಎದುರಿಸುತ್ತಲೇ ಬಂದಿರುವುದು ನಿಜವಾದರೂ ಅವರ ವಿಷಯದಲ್ಲಿ ಟ್ವಿಟರ್‌, ಫೇಸ್‌ಬುಕ್‌, ಗೂಗಲ್‌ನಂಥ ಡಿಜಿಟಲ್‌ ದೈತ್ಯ ಕಂಪೆನಿಗಳು ತೆಗೆದುಕೊಳ್ಳುವ ನಿರ್ಧಾರ ಅಭಿವ್ಯಕ್ತಿ ಸ್ವಾತಂತ್ರ್ಯ, ಟೆಕ್‌ ಕಂಪೆನಿಗಳ ಸೈದ್ಧಾಂತಿಕ ವಾಲಿಕೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

Advertisement

ಒಂದು ವೇಳೆ ಟ್ರಂಪ್‌ ಇನ್ನೂ ನಾಲ್ಕು ವರ್ಷ ಅಧಿಕಾರದಲ್ಲೇ ಇರುತ್ತಾರೆ ಎಂದಾಗಿದ್ದರೆ, ಟ್ವಿಟರ್‌ ಅವರ ಖಾತೆಯನ್ನು ರದ್ದು ಮಾಡುತ್ತಿತ್ತೇ? ಎನ್ನುವ ಪ್ರಶ್ನೆಯ ಜತೆಗೆ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ರಿಗೆ ಹತ್ತಿರವಾಗಲು ಈ ಕಂಪೆನಿಗಳು ಹೀಗೆ ವರ್ತಿಸುತ್ತಿವೆ ಎನ್ನುವ ಆರೋಪವೂ ಎದುರಾಗಿದೆ. ಆದಾಗ್ಯೂ ಯಾವುದೇ ಖಾತೆದಾರರಾಗಲಿ ದ್ವೇಷ ಹರಡುವಂಥ, ಸುಳ್ಳು ಸುದ್ದಿಗಳನ್ನು ಹಬ್ಬಿಸುವಂಥ ಟ್ವೀಟ್‌ ಮಾಡುತ್ತಾರೆ ಎಂದರೆ ಅವರ ಮೇಲೆ ಕ್ರಮ ಕೈಗೊಳ್ಳುವ ಹಕ್ಕು ಖಾಸಗಿ ಸಂಸ್ಥೆಯೊಂದಕ್ಕೆ ಇರುತ್ತದೆ. ಆದರೆ ಇಂಥ ನಿಯಮ ಎಲ್ಲರಿಗೂ ಅನ್ವಯವಾಗಬೇಕಲ್ಲವೇ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ಡಿಜಿಟಲ್‌ ವೇದಿಕೆಗಳ ಮೇಲೆ ನಿಯಂತ್ರಣ ಅಗತ್ಯ ಎನ್ನುವ ಚರ್ಚೆ ಬಂದಾಗ ಈ ಕಂಪೆನಿಗಳು “ಅಭಿವ್ಯಕ್ತಿ ಸ್ವಾತಂತ್ರ್ಯ’ದ ಅನಿವಾರ್ಯದ ಬಗ್ಗೆ ಮಾತನಾಡುತ್ತವೆ. ಆದರೆ ಅವೂ ಈ ನಿಯಮಗಳಿಗೆ ಬದ್ಧವಾಗದೇ ಇದ್ದರೆ ಹೇಗೆ? ಇಂದಿಗೂ ಟ್ವಿಟರ್‌ನಲ್ಲಿ ತಾಲಿಬಾನ್‌ ಪರ ವಕ್ತಾರರು ಟ್ವಿಟರ್‌ನ ಮೂಲಕ ದ್ವೇಷ ಹರಡುವ ಕೆಲಸ ಮಾಡುತ್ತಾರೆ, ಇಸ್ರೇಲ್‌ ಅನ್ನು ಸರ್ವನಾಶ ಮಾಡಬೇಕು ಎಂಬ ಪ್ರಚೋದನಾತ್ಮಕ ಟ್ವೀಟ್‌ ಮಾಡುವ ಖೊಮೇನಿಯಂಥವರ ಖಾತೆಗಳೂ ಭದ್ರವಾಗಿಯೇ ಇರುತ್ತವೆ, ಅಮೆರಿಕದ ಸಂಸತ್‌ ಭವನದಲ್ಲಿ ನಡೆದ ಪ್ರತಿಭಟನೆಗಳನ್ನು ಸುಂದರ ದೃಶ್ಯ ಎಂದು ಕರೆಯುವ ಚೀನದ ಬ್ಲೂಟಿಕ್‌ ಖಾತೆಗಳೂ ಇವೆ. ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್‌ ಪ್ರತಿಭಟನೆಗಳಲ್ಲಿ ಕೋವಿಡ್‌ ಅನ್ನು ಲೆಕ್ಕಿಸದೇ ರಸ್ತೆಗಿಳಿದು ಪ್ರತಿಭಟಿಸಿ ಎಂದು ಕರೆಕೊಟ್ಟ ಎಷ್ಟೋ ಡೆಮಾಕ್ರಾಟ್‌ಗಳ ಖಾತೆಗಳತ್ತಲೂ ಟ್ವಿಟರ್‌ ಗಮನ ಕೊಡಲಿಲ್ಲ ಎನ್ನುವ ಆರೋಪವಿದೆ. ಇದರ ಜತೆಗೇ ಟ್ವಿಟರ್‌, ಫೇಸ್‌ಬುಕ್‌ ಹಾಗೂ ಗೂಗಲ್‌ನಲ್ಲಿರುವ “ಪರಿಶೀಲನ ತಂಡಗಳು’ ಎಡ ಚಿಂತನೆ ಹೊಂದಿರುವುದೇ ಹೀಗೆ ಆಗುತ್ತಿರುವುದಕ್ಕೆ ಕಾರಣ ಎನ್ನುವ ದೂರೂ ಇದೆ. ಪಾರ್ಲರ್‌ನಂಥ ಪರ್ಯಾಯ ಡಿಜಿಟಲ್‌ ವೇದಿಕೆಗಳನ್ನು ಬಳಸಿಕೊಳ್ಳುವುದನ್ನೂ ಡಿಜಿಟಲ್‌ ಕಂಪೆನಿಗಳು ಪರೋಕ್ಷವಾಗಿ ತಡೆಯುತ್ತಿರುವುದು ಆತಂಕದ ವಿಚಾರ. ಗೂಗಲ್‌ ಅಂತೂ ಪಾರ್ಲರ್‌ ಅನ್ನು ತನ್ನ ಆ್ಯಪ್‌ ಸ್ಟೋರ್‌ನಿಂದ ರದ್ದು ಮಾಡಿದೆ.

ಹಾಗೆಂದು, ಸಾಮಾಜಿಕ ಜಾಲತಾಣಗಳು ಅನೇಕ ವಿಚಾರಗಳಲ್ಲಿ ಜವಾಬ್ದಾರಿಯನ್ನೂ ಮೆರೆಯುತ್ತಿವೆ ಎನ್ನುವುದೂ ಸತ್ಯ. ಕೋವಿಡ್‌ ವಿಷಯದಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ಕೂಡಲೇ ಹುಡುಕಿ, ಎಚ್ಚರಿಸುವಂಥ ಉತ್ತಮ ಕೆಲಸಗಳನ್ನೂ ಮಾಡಿವೆ. ಆದರೆ ರಾಜಕೀಯದ ವಿಷಯ ಬಂದಾಗ, ಆರೋಪ ಪ್ರತ್ಯಾರೋಪಗಳು ಇದ್ದದ್ದೇ,  ಚರ್ಚೆಗಳು ನಡೆಯಲೇಬೇಕು. ಬ್ಯಾಲೆಟ್‌ ಪೇಪರ್‌ ಎಣಿಕೆಯಲ್ಲಿ ಮೋಸವಾಗಿದೆ ಎಂದು ಒಬ್ಬರು ಆರೋಪ ಮಾಡುತ್ತಾರೆಂದರೆ ಅದರ ಸತ್ಯಾಸತ್ಯತೆ ಪರಿಶೀಲಿಸುವುದು ಆ ದೇಶದ ಕಾನೂನಿನ ಜವಾಬ್ದಾರಿ. ಹೀಗಿರುವಾಗ ಸಾಮಾಜಿಕ ಜಾಲತಾಣಗಳು ನ್ಯಾಯವಾದಿಗಳ ಪಾತ್ರ ನಿರ್ವಹಿಸುವುದೇಕೆ? ಇಂಥ ಚರ್ಚೆಗಳನ್ನೇ “ಅನುಮಾನಾಸ್ಪದ ವಾದ’ ಎಂದು ಟ್ಯಾಗ್‌ ಮಾಡುತ್ತಾ ಹೋದರೆ ಅಭಿವ್ಯಕ್ತಿ ಸ್ವಾತಂತ್ರ್ಯ ದ ಬಗ್ಗೆ ಅವು ಮಾತನಾಡುವುದೂ ಬಾಲಿಶವಾಗುತ್ತದೆ. ಡಿಜಿಟಲ್‌ ಜಗತ್ತು ದೇಶವೊಂದರ ರಾಜಕೀಯದ ಮೇಲೆ ಪ್ರಭಾವ ಬೀರುವಷ್ಟು ಬಲಶಾಲಿಯಾಗಿದೆ. ಹೀಗಾಗಿ, ಅವುಗಳ ಈ ದ್ವಂದ್ವ ನಿಲುವುಗಳ ಬಗ್ಗೆ ಆತಂಕ ವ್ಯಕ್ತವಾಗಿರುವುದು ಸಹಜ. ಡಿಜಿಟಲ್‌ ಕ್ಷೇತ್ರದಲ್ಲಿ ಕೆಲವೇ ಕಂಪೆನಿಗಳು ಏಕಸ್ವಾಮ್ಯ ಮೆರೆಯುತ್ತಾ ಹೋಗುವುದನ್ನು ತಪ್ಪಿಸಬೇಕಾದ ಅನಿವಾರ್ಯ ಎಲ್ಲ ದೇಶಗಳಿಗೂ ಈಗ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next