ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನೆತ್ ಐ ಜಸ್ಟರ್ ಅವರನ್ನು ಭಾರತಕ್ಕೆ ರಾಯಭಾರಿಯಾಗಿ ನೇಮಿಸುವ ತಮ್ಮ ಇರಾದೆಯನ್ನು ಪ್ರಕಟಿಸಿದ್ದಾರೆ.
ಕೆನೆತ್ ಅವರು ಓರ್ವ ಉನ್ನತ ಆರ್ಥಿಕ ಸಲಹೆಗಾರರಾಗಿದ್ದು ಭಾರತ ಪರಿಣತರೆಂದು ಪರಿಗಣಿಸಲ್ಪಟ್ಟಿದ್ದಾರೆ.
ಈ ವರ್ಷ ಜೂನ್‌ನಲ್ಲೇ ಶ್ವೇತ ಭವನ, 62ರ ಹರೆಯದ ಜಸ್ಟರ್ ಭಾರತಕ್ಕೆ ಅಮೆರಿಕದ ರಾಯಭಾರಿಯಾಗಲಿದ್ದಾರೆ ಎಂದು ಹೇಳಿತ್ತು.
ಜಸ್ಟರ್ ಅವರು ಪ್ರಕೃತ ಅಮೆರಿಕ ಅಧ್ಯಕ್ಷರ ಅಂತಾರಾಷ್ಟ್ರೀಯ ವ್ಯವಹಾರಗಳ ಸಲಹೆಗಾರರಾಗಿದ್ದಾರೆ ಮತ್ತು ಟ್ರಂಪ್ ಅವರ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿದ್ದಾರೆ. ಜಸ್ಟರ್ ಅವರು ಭಾರತದಲ್ಲಿನ ಅಮೆರಿಕ ರಾಯಭಾರಿಯಾಗಿ ನಾಮಕರಣಗೊಂಡು ಸೆನೆಟ್‌ನಿಂದ ದೃಢೀಕರಣಗೊಂಡಲ್ಲಿ ಅವರು ರಿಚರ್ಡ್ ವರ್ಮಾ ಅವರ ಉತ್ತರಾಧಿಕಾರಿಯಾಗಿರುತ್ತಾರೆ.
ಅಮೆರಿಕದ 45ನೇ ಅಧ್ಯಕ್ಷರಾಗಿ ಡೊನಾಲ್ ಟ್ರಂಪ್ ಅವರು ಈ ವರ್ಷ ಜನವರಿ 20ರಂದು ಅಧಿಕಾರ ಸ್ವೀಕರಿಸಿದಂದಿನಿಂದ ಈ ತನಕ ಭಾರತದಲ್ಲಿನ ಅಮೆರಿಕ ರಾಯಭಾರಿ ಹುದ್ದೆಯು ಖಾಲಿ ಬಿದ್ದಿದೆ.