ನ್ಯೂಯಾರ್ಕ್/ವಿಶ್ವಸಂಸ್ಥೆ: ಮಂಗಳವಾರ ವಿಶ್ವ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಶ್ಲಾಘಿಸಿದ್ದಾರೆ. ವಿಶ್ವದ ವಿವಿಧ ರಾಷ್ಟ್ರಗಳ ಸಾಧನೆಯ ಪಟ್ಟಿ ಮಾಡುವ ವೇಳೆ 100 ಕೋಟಿಯಷ್ಟು ಜನಸಂಖ್ಯೆ ಇರುವ ಭಾರತದಲ್ಲಿ ಸಾಕಷ್ಟು ಜನರನ್ನು ಬಡತನದಿಂದ ಮೇಲಕ್ಕೆತ್ತಿ ಮಧ್ಯಮ ವರ್ಗದವರನ್ನಾಗಿ ಪರಿವರ್ತಿಸಲಾಗಿದೆ ಎಂದಿದ್ದಾರೆ. ಜತೆಗೆ ವಿಶ್ವದಲ್ಲಿ ಭಾರತ, ಸೌದಿ ಅರೇಬಿಯಾ, ಪೋಲೆಂಡ್‌ನಂಥ ಒಳ್ಳೆಯ ರಾಷ್ಟ್ರಗಳೂ ಇವೆ ಎಂದು ಕೊಂಡಾಡಿದ್ದಾರೆ.
ಇರಾನ್ ವಿರುದ್ಧ ಕಿಡಿ: ವಿಶ್ವದಲ್ಲಿ ಭಯೋತ್ಪಾದನೆ ಯನ್ನು ಪ್ರಾಯೋಜಿಸುವುದರಲ್ಲಿ ಇರಾನ್ ಅಗ್ರ ಸ್ಥಾನದಲ್ಲಿದೆ.ಟೆಹ್ರಾನ್ ನಾಯಕತ್ವವು ಗೊಂದಲ, ಸಾವು ಮತ್ತು ವಿನಾಶದ ಬೀಜವನ್ನಷ್ಟೇ ಬಿತ್ತುತ್ತಿದೆ. ಎಲ್ಲ ದೇಶಗಳೂ ಇರಾನ್ ಅನ್ನು ಏಕಾಂಗಿಯಾಗಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.ನಮಗೆ ಗೌರವ ಕೊಡುವವರಿಗೆ ನಾವು ಆದ್ಯತೆ ಮತ್ತು ನೆರವು ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕ್ ಆರೋಪ: ಇನ್ನೊಂದೆಡೆ, ಭಾರತ ಕಿಶನ್‌ಗಂಗಾ ಮತ್ತು ರಾಟ್ಲೆ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ಪಾಕಿಸ್ತಾನವು ವಿಶ್ವಸಂಸ್ಥೆಯಲ್ಲಿ ದೂರಿದೆ. ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಜಾರಿಗೊಳಿಸುವ ವಿಚಾರಕ್ಕೆ ಸಂಬಂಧಿಸಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಮಂಗಳವಾರ ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಜತೆ ಚರ್ಚಿಸುವ ವೇಳೆ ಈ ಅಂಶ ಪ್ರಸ್ತಾಪ ಮಾಡಿದ್ದಾರೆ. ಭಾರತ ಕೈಗೊಂಡಿರುವ ಕಾಮಗಾರಿ ಒಪ್ಪಂದದ ಉಲ್ಲಂಘನೆಯಾಗುತ್ತದೆ ಎಂದು ಖುರೇಷಿ ಪ್ರತಿಪಾದಿಸಿದ್ದಾರೆ.
ಹಲವರ ಭೇಟಿ: ಮತ್ತೂಂದೆಡೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೊರೊಕ್ಕೋ, ಐರೋಪ್ಯ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ, ನೇಪಾಳ ವಿದೇಶಾಂಗ ಸಚಿವರು ಸೇರಿ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ನಂಬಿಕೆ ಕೊರತೆ: ಸಭೆಯಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್, ವಿಶ್ವ ನಂಬಿಕೆಯ ಕೊರತೆಯನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ. ಒಂದೆಡೆ ಧ್ರುವೀಕರಣ ಹೆಚ್ಚಾಗುತ್ತಿರುವಂತೆಯೇ, ರಾಷ್ಟ್ರಗಳ ನಡುವಿನ ಸಹಕಾರವೂ ಕಡಿಮೆಯಾಗುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ನಡೆಯಬೇಕಾಗಿದೆ ಎಂದಿದ್ದಾರೆ.