ವಾಷಿಂಗ್ಟನ್: ಅಮೆರಿಕಾ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಸಾಮಾಜಿಕ ಜಾಲತಾಣ ಕಂಪೆನಿಗಳಾದ ಟಿಕ್ ಟಾಕ್ ಮತ್ತು ವಿ ಚಾಟ್ ಜೊತೆ ಯಾವುದೇ ವ್ಯವಹಾರ ನಡೆಸದಂತೆ ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ. ಮಾತ್ರವಲ್ಲದೆ ಈ ಆದೇಶಕ್ಕೆ ಸಹಿ ಹಾಕಿದ್ದು, 45 ದಿನಗಳು ಕಳೆದ ನಂತರ ಜಾರಿಗೆ ಬರಲಿದೆ.
ಗುರುವಾರ ಸಂಜೆ ಈ ಆದೇಶ ಹೊರಡಿಸಿದ್ದು, ನಮ್ಮ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ಸಲುವಾಗಿ ಟಿಕ್ ಟಾಕ್ ಮಾಲೀಕರ ವಿರುದ್ಧ ನಾವು ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ಈ ಆಪ್ಲಿಕೇಶನ್ ದೇಶದ ಜನರ ವೈಯಕ್ತಿಕ ಮಾಹಿತಿಗಳನ್ನು ಕದಿಯುತ್ತಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಬೈಟ್ ಡಾನ್ಸ್ ಲಿಮಿಟೆಡ್ ಜೊತೆಗೆ ಯಾವುದೇ ರೀತಿಯ ವ್ಯವಹಾರ ನಡೆಸಿದರೂ ಅಮೆರಿಕದ ಕಾನೂನು ಪ್ರಕಾರ ಅಪರಾಧವಾಗುತ್ತದೆ ಎಂದಿದ್ದಾರೆ.
ಮಾತ್ರವಲ್ಲದೆ ಟಿಕ್ ಟಾಕ್ ಚೀನಾದ ಕಮ್ಯುನಿಷ್ಟ್ ಪಕ್ಷಕ್ಕೆ ಅಗತ್ಯವಿರುವ ಮಾಹಿತಿಗಳನ್ನು ರವಾನಿಸುತ್ತಿದೆ ಟ್ರಂಪ್ ತಿಳಿಸಿದ್ದಾರೆ. ಟಿಕ್ ಟಾಕ್ ಮಾಲಿಕತ್ವದ ಚೀನಾ ಮೂಲದ ಬೈಟೇಡ್ಯಾನ್ಸ್ ಕಂಪೆನಿ ಅಮೆರಿಕಾದ ಕ್ಯಾಲಿಫೊರ್ನಿಯಾದಲ್ಲಿ ಕೂಡ ತನ್ನ ಕಚೇರಿಯನ್ನು ಹೊಂದಿದೆ.
ವೀಚಾಟ್ ಕೂಡ ಸ್ವಯಂಚಾಲಿತವಾಗಿ ತನ್ನ ಬಳಕೆದಾರರಿಂದ ಅಗತ್ಯವಲ್ಲದ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತದೆ. ಈ ಡೇಟಾ ಸಂಗ್ರಹವು ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ಅಮೆರಿಕನ್ನರ ವೈಯಕ್ತಿಕ ಮಾಹಿತಿ ಪಡೆಯಲು ನೆರವಾಗುತ್ತದೆ. ಹೀಗಾಗಿ ವಿ-ಚಾಟ್ ಕೂಡ ಬ್ಯಾನ್ ಮಾಡಲು ನಿರ್ಧರಿಸಲಾಗಿದೆ ಎಂದು ಟ್ರಂಪ್ ಹೇಳಿದರು.