ಮೋದಿ ಮಧ್ಯಸ್ಥಿಕೆ ವಹಿಸಲು ಕೋರಿದ್ದಾರೆ ಎನ್ನುವ ಟ್ರಂಪ್ ಹೇಳಿಕೆ ಸುಳ್ಳು ಎನ್ನುವುದನ್ನು ಸ್ವತಃ ಅಮೆರಿಕವೇ ಒಪ್ಪಿಕೊಂಡಿದೆ. ಟ್ರಂಪ್ ಬೇಜವಾಬ್ದಾರಿಯ ಹೇಳಿಕೆಗಳು ಅನೇಕ ಸಲ ಜಗತ್ತನ್ನು ಸಂಕಟಕ್ಕೆ ದೂಡಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರ ವಿವಾದವನ್ನು ಬಗೆಹರಿಸುವ ಸಲುವಾಗಿ ಸಂಧಾನಕಾರನ ಪಾತ್ರ ವಹಿಸಲು ತನ್ನನ್ನು ಕೋರಿಕೊಂಡಿದ್ದಾರೆ. ಉಭಯ ದೇಶಗಳು ಒಪ್ಪುವುದಾದರೆ ಇದಕ್ಕೆ ತಾನು ತಯಾರಿರುವುದಾಗಿ ಹೇಳಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಮುಂದಾಗಿರುವ ಟ್ರಂಪ್ ಅವರ ಹೇಳಿಕೆ ಭಾರತದಲ್ಲಿ ಬಿರುಗಾಳಿಯೆಬ್ಬಿಸಿದೆ.ಇದು ಭಾರತದ ನಿಲುವಿಗೆ ಸಂಪೂರ್ಣ ವಿರುದ್ಧವಾಗಿದ್ದು, ಹೀಗೊಂದು ಮಧ್ಯಸ್ಥಿಕೆಯ ಸಾಧ್ಯತೆಯನ್ನು ಭಾರತ ನಿರಾಕರಿಸುತ್ತಲೇ ಬಂದಿದೆ. ಆದರೆ ಟ್ರಂಪ್ ಆಗಾಗ ಈ ಮಾದರಿಯ ಹೇಳಿಕೆಗಳನ್ನು ನೀಡಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದರಲ್ಲಿ ನಿಪುಣರು. ಅವರ ಬೇಜವಾಬ್ದಾರಿಯ ಮತ್ತು ಗಾಂಭೀರ್ಯವಿಲ್ಲದ ಕೆಲವು ಹೇಳಿಕೆಗಳು ಅನೇಕ ಸಲ ಜಗತ್ತನ್ನು ಸಂಕಟಕ್ಕೆ ದೂಡಿದೆ. ಇರಾನ್ ಬಿಕ್ಕಟ್ಟಾಗಿರಲಿ, ಉತ್ತರ ಕೊರಿಯಾದ ವಿವಾದವಾಗಿರಲಿ ಇವುಗಳಿಗೆಲ್ಲ ಟ್ರಂಪ್ ಅವರ ಅನಿಶ್ಚಿತ ಧೋರಣೆಗಳು ಮತ್ತು ನಿಲುವುಗಳು ಪರೋಕ್ಷವಾಗಿ ಕಾರಣವಾಗಿವೆ ಎನ್ನುವ ಆರೋಪದಲ್ಲಿ ಹುರುಳಿದೆ.
ಕಾಶ್ಮೀರ ಭಾರತ ಮತ್ತು ಪಾಕಿಸ್ತಾನ ನಡುವಿನ ವಿವಾದವಾಗಿದ್ದು, ಇದನ್ನು ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕೆನ್ನುವುದು ಭಾರತದ ಅಚಲ ನಿಲುವು. ಪಾಕಿಸ್ತಾನ ಪದೇ ಪದೇ ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆ ಸೇರಿದಂತೆ ತೃತೀಯ ಪಕ್ಷದ ಸಂಧಾನಕ್ಕೊಯ್ಯಲು ಮಾಡಿದ ಪ್ರಯತ್ನಗಳನ್ನು ಭಾರತ ವಿಫಲಗೊಳಿಸಿಕೊಂಡು ಬಂದಿದೆ. ನೇರ ಯುದ್ಧ ಮಾಡಿಯಾಗಲಿ, ಭಯೋತ್ಪಾದನೆಯಂಥ ಪರೋಕ್ಷ ಯುದ್ಧ ತಂತ್ರಗಳಿಂದಾಗಲಿ ಕಾಶ್ಮೀರವನ್ನು ಭಾರತದಿಂದ ಕಸಿದುಕೊಳ್ಳುವ ಸಾಮರ್ಥ್ಯ ತನಗಿಲ್ಲ ಎನ್ನುವುದು ಪಾಕಿಸ್ತಾನಕ್ಕೆ ಈಗಾಗಲೇ ಮನದಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಅದೀಗ ತೃತೀಯ ಪಕ್ಷದ ಮಧ್ಯಸ್ಥಿಕೆಯ ಪ್ರಯತ್ನವನ್ನು ತೀವ್ರಗೊಳಿಸಿದಂತಿದೆ. ಇದರ ಫಲವೇ ಟ್ರಂಪ್ ಹೇಳಿಕೆ ಎಂದು ಭಾವಿಸಬಹುದು.
ಸಂಧಾನಗಳಿಗೆ ಮತ್ತು ಒಪ್ಪಂದಗಳಿಗೆ ಪಾಕಿಸ್ತಾನ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡುವುದಿಲ್ಲ. ಕದನ ವಿರಾಮ ಒಪ್ಪಂದ ಸಾಮಾನ್ಯ ಎಂಬಂತೆ ಉಲ್ಲಂಘನೆಯಾಗುತ್ತಿರುವುದೇ ಆ ದೇಶ ಒಪ್ಪಂದಗಳನ್ನು ಎಷ್ಟು ಗೌರವಿಸುತ್ತದೆ ಎನ್ನುವುದನ್ನು ತಿಳಿಸುತ್ತದೆ. ಹೀಗಿರುವಾಗ ಟ್ರಂಪ್ ಮೂಲಕ ಸಂಧಾನದ ದಾಳ ಉರುಳಿಸಿದರೆ ಭಾರತ ಅದನ್ನು ಒಪ್ಪಿಕೊಳ್ಳಬಹುದು ಎಂದು ಭಾವಿಸಿರುವುದು ಇಮ್ರಾನ್ ಖಾನ್ ಅವರ ರಾಜತಾಂತ್ರಿಕ ಅನುಭವದ ಕೊರತೆಯನ್ನೂ ಅಪ್ರಬುದ್ಧತೆಯನ್ನೂ ತೋರಿಸುತ್ತದೆ. ಇಮ್ರಾನ್ ಖಾನ್‌ಗೆ ಜನರ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಮೇಲೆ ಅಷ್ಟೊಂದು ಕಾಳಜಿಯಿದ್ದರೆ ತನ್ನದೇ ದೇಶದ ಬಲೂಚಿಸ್ಥಾನದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳನ್ನು ಮತ್ತು ಸೇನೆಯ ನಿರ್ದಯ ದಬ್ಟಾಳಿಕೆಯನ್ನು ತಡೆಯುವ ಕೆಲಸವನ್ನು ಮೊದಲು ಮಾಡಲಿ. ಟ್ರಂಪ್ ಹೇಳಿಕೆಯನ್ನು ಭಾರತ ತಕ್ಷಣವೇ ಅಲ್ಲಗಳೆದಿದೆ ಹಾಗೂ ಕಾಶ್ಮೀರ ವಿವಾದ ಬಗೆಹರಿಯುವುದಿದ್ದರೆ ಅದು ದ್ವಿಪಕ್ಷೀಯ ಮಾತುಕತೆಯ ಮೂಲಕ ಮಾತ್ರ ಎನ್ನುವ ತನ್ನ ನಿಲುವನ್ನು ಪುನರುಚ್ಚರಿಸಿದೆ. ಮೋದಿ ಮಧ್ಯಸ್ಥಿಕೆ ವಹಿಸಲು ಕೋರಿದ್ದಾರೆ ಎನ್ನುವ ಟ್ರಂಪ್ ಹೇಳಿಕೆ ಸುಳ್ಳು ಎನ್ನುವುದನ್ನು ಸ್ವತಃ ಅಮೆರಿಕವೇ ಒಪ್ಪಿಕೊಂಡಿದೆ. ವಿಶೇಷವೆಂದರೆ ಅಮೆರಿಕದ ವಿದೇಶಾಂಗ ಸಚಿವರಿಗೇ ಮೋದಿ ಮಾಡಿದ್ದಾರೆ ಎನ್ನಲಾದ ಕೋರಿಕೆಯ ಬಗ್ಗೆ ಗೊತ್ತಿರಲಿಲ್ಲ. ಭಾರತದ ತೀವ್ರ ಪ್ರತಿರೋಧದ ಬಳಿಕ ಅಮೆರಿಕ ಟ್ರಂಪ್ ಹೇಳಿಕೆಯಿಂದಾಗಿರುವ ಹಾನಿಯನ್ನು ಸರಿಪಡಿಸಲು ಮುಂದಾಗಿದ್ದರೂ ಓರ್ವ ವಿಕ್ಷಿಪ್ತ ಸ್ವಭಾವದ ಅಧ್ಯಕ್ಷನಿಂದ ದೇಶಕ್ಕೆ ಆಗಬಹುದಾದ ಪರಿಣಾಮಗಳನ್ನು ಆ ದೇಶ ಅನುಭವಿಸುತ್ತಿದೆ.
ನಾವು ನೀಡಿದ ಮಿಲಿಯಗಟ್ಟಲೆ ಡಾಲರ್ ನೆರವಿಗೆ ಪ್ರತಿಯಾಗಿ ನಮಗೆ ಸಿಕ್ಕಿರುವುದು ‘ಸುಳ್ಳುಗಳು ಮತ್ತು ನಂಬಿಕೆದ್ರೋಹ’ ಮಾತ್ರ ಎಂದು ಹಿಂದೊಮ್ಮೆ ಪಾಕಿಸ್ತಾನದ ಬಗ್ಗೆ ಇದೇ ಟ್ರಂಪ್ ಹೇಳಿದ್ದರು. ಭಯೋತ್ಪಾದಕರನ್ನು ಸಾಕಿ ಸಲಹಿ ಛೂ ಬಿಡುತ್ತಿರುವ ಆ ದೇಶವನ್ನು ಯಾವ ಕ್ಷಣಕ್ಕೂ ನಂಬಬಾರದು ಎಂದು ಬಹಿರಂಗವಾಗಿಯೇ ಹೀನಾಯವಾಗಿ ಟೀಕಿಸಿದ್ದರು. ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳದ ಹೊರತು ಹಣಕಾಸಿನ ನೆರವು ನೀಡುವುದಿಲ್ಲ ಎಂದು ಹೇಳಿ ಹಲವು ಅನುದಾನಗಳನ್ನು ತಡೆಹಿಡಿದಿದ್ದರು. ಆದರೆ ಈಗ ಟ್ರಂಪ್‌ಗೆ ಪಾಕಿಸ್ತಾನ ಪರಮಾಪ್ತ ದೇಶವಾಗಿ ಕಾಣುತ್ತಿರುವುದು ಅವರ ಅನಿಶ್ಚಿತ ಸ್ವಭಾವಕ್ಕೊಂದು ಉತ್ತಮ ಉದಾಹರಣೆ.
ಟ್ರಂಪ್ ಹೇಳಿಕೆಯಿಂದ ಖಂಡಿತ ಭವಿಷ್ಯದಲ್ಲಿ ಅಮೆರಿಕ ಮತ್ತು ಭಾರತ ನಡುವಿನ ದ್ವಿಪಕ್ಷೀಯ ಸಂಬಂಧ ಮೊದಲಿನಂತಿರುವುದಿಲ್ಲ. ಕನಿಷ್ಠ ಟ್ರಂಪ್ ಅಧಿಕಾರವಧಿ ಮುಗಿಯುವ ತನಕ ಅಮೆರಿಕ ವಿಚಾರದಲ್ಲಿ ಭಾರತ ವಿಶೇಷ ಎಚ್ಚರಿಕೆಯ ನಡೆಯಿಡುವುದು ಅನಿವಾರ್ಯ.