ನ್ಯೂಯಾರ್ಕ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿನ್ನೆ ಮಂಗಳವಾರ ನ್ಯೂಜೆರ್ಸಿಯಲ್ಲಿನ ತಮ್ಮ ಖಾಸಗಿ ಗಾಲ್ಫ್ ಕ್ಲಬ್‌ನಲ್ಲಿ ಪೆಪ್ಸಿಕೋ ನಿರ್ಗಮನ ಸಿಇಓ ಇಂದ್ರಾ ನೂಯಿ, ಮಾಸ್ಟರ್ ಕಾರ್ಡ್ ಚೀಫ್ ಎಕ್ಸಿಕ್ಯುಟಿವ್ ಅಜಯ್ ಬಂಗಾ ಸೇರಿದಂತೆ ಅಮೆರಿಕದ ಅತ್ಯುನ್ನತ ಉದ್ಯಮ ನೇತಾರರ ಒಂದು ಸಣ್ಣ ಸಮೂಹವನ್ನು ಆದರಾತಿಥ್ಯದಿಂದ ಗೌರವಿಸಲು ಭೋಜನ ಕೂಟ ಏರ್ಪಡಿಸಿದರು.
ಈ ಉದ್ಯಮ ನೇತಾರರ ದೃಷ್ಟಿಯಲ್ಲಿ ಅಮೆರಿಕದ ಆರ್ಥಿಕತೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು ಅದರ ಭವಿಷ್ಯವೇನು ಎಂಬುದನ್ನು ಅರಿಯಲು ಅಧ್ಯಕ್ಷ ಟ್ರಂಪ್ ಈ ಆತ್ಮೀಯ ಭೋಜನ ಕೂಟ ಏರ್ಪಡಿಸಿದ್ದರು ಎಂದು ಶ್ವೇತ ಭವನದ ಹೇಳಿಕೆ ತಿಳಿಸಿದೆ.
ಇಂದ್ರಾ ನೂಯಿ ಅವರ ಜತೆಗೆ ಪತಿ ರಾಜ್ ನೂಯಿ ಮತ್ತು ಬಂಗಾ ಅವರ ಜೆತಗೆ ಅವರ ಪತ್ನಿ ರಿತು ಬಂಗಾ ಅವರು ಇದ್ದರು. ಟ್ರಂಪ್ ಭೋಜನ ಕೂಟಕ್ಕೆ ಆಹ್ವಾನಿತರಾಗಿದ್ದ 15 ಮಂದಿ ಉನ್ನತ ಉದ್ಯಮ ನೇತಾರರಲ್ಲಿ ಫಿಯಟ್ ಕ್ರಿಸ್ಲರ್ ಸಿಇಓ ಮೈಕೆಲ್ ಮ್ಯಾನ್ಲ, ಫೆಡೆಕ್ಸ್ ಅಧ್ಯಕ್ಷ – ಸಿಇಓ ಫ್ರೆಡೆರಿಕ್ ಸ್ಮಿತ್ ಮತ್ತು ಬೋಯಿಂಗ್ ಸಿಇಓ ಡೆನಿಸ್ ಮಿಲೆನ್‌ಬರ್ಗ್ ಕೂಡ ಇದ್ದರು.
ಟ್ರಂಪ್ ಪತ್ನಿ ಮೆಲಾನಾ, ಪುತ್ರಿ ಇವಾಂಕಾ, ಆಕೆಯ ಪತಿ ಜೇರ್‌ಡ್ ಕುಶ್‌ನೇರ್ ಕೂಡ ಭೋಜನ ಕೂಟದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತನ್ನ ವಿಶೇಷ ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಟ್ರಂಪ್, ಇಂದ್ರಾ ನೂಯಿ ಜಗತ್ತಿನ ಅತ್ಯಂತ ಶಕ್ತಿಶಾಲಿ, ಪ್ರಭಾವೀ ಮಹಿಳೆ ಎಂದು ವರ್ಣಿಸಿದರು.
“ನೀವು ಯಾವತ್ತೂ ಉದ್ಯಮದ ಬಗ್ಗೆ ಮಾತನಾಡುವವರು; ಇವತ್ತು ನಾವು ನಿಮ್ಮ ಜತೆಗೆ ಇದ್ದೇವೆ; ನಿಮ್ಮ ಆಲೋಚನೆಗಳು, ಚಿಂತನೆಗಳು, ಭವಿಷ್ಯತ್ ಯೋಜನೆಗಳ ಬಗ್ಗೆ ನೀವು ನಮ್ಮೊಂದಿಗೆ ನಿಮ್ಮ ಅನ್ನಿಸಿಕೆಗಳನ್ನು ಹಂಚಿಕೊಳ್ಳಬೇಕು; ಅಮೆರಿಕವನ್ನು ಮಹಾನ್ ದೇಶವನ್ನಾಗಿ ಮಾಡುವಲ್ಲಿ ನಿಮ್ಮ ಕಾಣಿಕೆ ಇನ್ನು ಮುಂದೆಯೂ ಸಿಗಬೇಕು’ ಎಂದು ಟ್ರಂಪ್ ತುಂಬ ಆತ್ಮೀಯತೆಯಿಂದ ಹೇಳಿದರು.