Advertisement

ಮಹಾಭಿಯೋಗದ ಅಪಾಯದಲ್ಲಿ ಟ್ರಂಪ್?

12:13 AM Sep 30, 2019 | sudhir |

ಮುಂದಿನ ವರ್ಷದ ನವೆಂಬರ್‌ನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅದಕ್ಕೆ ಈಗಾಗಲೇ ಅಲ್ಲಿ ವೇದಿಕೆ ಸಿದ್ಧ‌œಗೊಳ್ಳುತ್ತಿದೆ. ಇದರ
ನಡುವೆಯೇ ಟ್ರಂಪ್‌ ಮಹಾಭಿಯೋಗದ ಅಪಾಯವನ್ನು ಎದುರಿಸುವಂತಾಗಿದೆ..

Advertisement

ಟ್ರಂಪ್‌ ವಿರುದ್ಧದ ಆರೋಪವೇನು?
ಟ್ರಂಪ್‌ ಅವರು 2020ರ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಸಂಭಾವ್ಯ ಪ್ರತಿಸ್ಪರ್ಧಿಯಾಗಿರುವ ಡೆಮ ಕ್ರಾಟ್‌ ಪಕ್ಷದ ಜೋ ಬಿಡೆನ್‌ ಮತ್ತು ಅವರ ಮಗನ ವಿರುದ್ಧ ಸುಳ್ಳು ಆರೋಪ ಹೊರಿಸಿ, ಅವರ ವಿರುದ್ಧ ತನಿಖೆ ಮಾಡುವಂತೆ ಉಕ್ರೈನ್‌ನ ಅಧ್ಯಕ್ಷ ವೊಲೊಡಿಮಿರ್‌ ಝೋಲೊನ್‌ಗೆ ಸೂಚಿಸಿದ್ದರು ಎನ್ನುವುದು ವಿವಾದದ ಕೇಂದ್ರ ಬಿಂದು. ಈ ವಿಷಯವಾಗಿ ಟ್ರಂಪ್‌ ಉಕ್ರೈನ್‌ ಅಧ್ಯಕ್ಷರೊಂದಿಗೆ ನಡೆಸಿದ ಮಾತುಕತೆಯ ವಿವರವೂ ಈಗ ಸೋರಿಕೆಯಾಗಿದೆ. ಬಿಡೆನ್‌ಗೆ ಸಾರ್ವಜನಿಕವಾಗಿ ಕಳಂಕ ತರುವ ನಿಟ್ಟಿನಲ್ಲಿ ಟ್ರಂಪ್‌ ಪ್ರಯತ್ನಿಸುತ್ತಿದ್ದಾರೆ ಎನ್ನುವುದು ವಿರೋಧಿಗಳ ಆರೋಪ.

ಟ್ರಂಪ್‌ ಪ್ರಕರಣದ ಹಿನ್ನೋಟ
ಜು.18 ಉಕ್ರೈನ್‌ಗೆ ನೀಡಲು ಉದ್ದೇಶಿಸಲಾಗಿದ್ದ 28 ಸಾವಿರ ಕೋಟಿ ರೂ. (400 ಮಿಲಿಯನ್‌ ಅಮೆರಿಕನ್‌ ಡಾಲರ್‌) ಮೌಲ್ಯದ ಮಿಲಿಟರಿ ನೆರವು ತಡೆ ಹಿಡಿಯಲು ಟ್ರಂಪ್‌ ಆದೇಶ.

ಜು.25 ಉಕ್ರೇನ್‌ ಅಧ್ಯಕ್ಷರ ಜತೆಗೆ 30 ನಿಮಿಷಗಳ ಕಾಲ ಟ್ರಂಪ್‌ ಮಾತು.
ಬಿಡೆನ್‌ರ ಬಗ್ಗೆ ತನಿಖೆ ನಡೆಸುವಂತೆ ಒತ್ತಡ ಹೇರಿಕೆ.

ಸೆ.09 ಟ್ರಂಪ್‌ ಕರೆಯ ಬಗ್ಗೆ ಮಾಹಿತಿದಾರರಿಂದ ಅಮೆರಿಕದ ಸಂಸತ್‌ಗೆ ಮಾಹಿತಿ.

Advertisement

ಮಹಾಭಿಯೋಗ ಪ್ರತಿಕ್ರೀಯೆ ಹೇಗೆ ?
– ಈ ಪ್ರಕ್ರಿಯೆಯಲ್ಲಿ ಅಮೆರಿಕ ಹೆಚ್ಚಾ ಕಡಿಮೆ ಬ್ರಿಟನ್‌ನ ಮಾದರಿ ಅನುಸರಿಸುತ್ತಿದೆ.
– ಅಲ್ಲಿನ ಸಂವಿಧಾನದ ಒಂದನೇ ವಿಧಿ ಪ್ರಕಾರ, ಸಂಸತ್‌ನ ಕೆಳಮನೆಯು ಅಧ್ಯಕ್ಷರ ವಿರುದ್ಧದ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುತ್ತದೆ.
– ವಾಗ್ಧಂಡನೆ ಕೈಗೊಳ್ಳಬಹುದೇ ಎಂಬ ಬಗ್ಗೆ ಕೆಳಮನೆಯ ಸದಸ್ಯರು ನಿರ್ಣಯ ಮಂಡಿಸಬೇಕು.
– ಅದರ ಬಗ್ಗೆ ಸಮಗ್ರ ಚರ್ಚೆಯಾಗಿ, ಅಲ್ಲಿ ಮತಕ್ಕೆ ಹಾಕಬೇಕು. ಅಲ್ಲಿ ವಾಗ್ಧಂಡನೆ ಕೈಗೊಳ್ಳಬಹುದೋ ಇಲ್ಲವೇ ಎನ್ನುವುದು ತೀರ್ಮಾನವಾಗುತ್ತದೆ
– ನಂತರ ಸೆನೆಟ್‌ನಲ್ಲಿ (ಅಮೆರಿಕ ಸಂಸತ್‌ ಮೇಲ್ಮನೆ) ಈ ವಿಷಯ ಪ್ರವೇಶಿಸುತ್ತದೆ.

– ಅಲ್ಲಿ ಅಮೆರಿಕದ ಸುಪ್ರೀಂಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಸಮ್ಮುಖದಲ್ಲಿ ವಿಚಾರಣೆ ನಡೆಯುತ್ತದೆ. ಸೆನೆಟರ್‌ಗಳು ನ್ಯಾಯವಾದಿಗಳಂತೆ ಕಾರ್ಯವೆಸಗುತ್ತಾರೆ.

– ಅಂತ್ಯದಲ್ಲಿ ನಿರ್ಣಯವನ್ನು ಮತಕ್ಕೆ ಹಾಕಲಾಗುತ್ತದೆ. ನಿರ್ಣಯದ ಪರ ಮತ ಬಂದರೆ ಅಧ್ಯಕ್ಷರನ್ನು ಹುದ್ದೆಯಿಂದ ತೆಗೆಯಲಾಗುತ್ತದೆ.

ಉಕ್ರೈನ್‌ನಲ್ಲಿ ಬಿಡೆನ್‌ ಉದ್ದಿಮೆ
ಜೋ ಬಿಡೆನ್‌ ಪುತ್ರ “ರಾಬರ್ಟ್‌ ಹಂಟರ್‌ ಬಿಡೆನ್‌’ ಅಮೆರಿಕದ ಪ್ರಸಿದ್ಧ ನ್ಯಾಯವಾದಿ ಮತ್ತು ಉದ್ಯಮಿ. 2009ರಲ್ಲಿ ಜೋ ಬಿಡೆನ್‌ ಅಮೆರಿಕದ ಉಪಾಧ್ಯಕ್ಷರಾಗಿದ್ದ ವೇಳೆ ಅವರ ಪುತ್ರ ಹಂಟರ್‌ ಬಿಡೆನ್‌ ಉಕ್ರೈನ್‌ನಲ್ಲಿ ತಮ್ಮ ಬ್ಯುಸಿನೆಸ್‌ ನಡೆಸಲು ಯೋಚಿಸಿದರು. 2014ರಲ್ಲಿ ಹಂಟರ್‌ ಬಿಡೆನ್‌ ಉಕ್ರೈನ್‌ನ ನೈಸರ್ಗಿಕ ಅನಿಲ ಕಂಪನಿ “ಬರಿಸ್ಮಾ ಹೋಲ್ಡಿಂಗ್ಸ್‌’ನ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯಲು ಸಫ‌ಲರಾಗಿಬಿಟ್ಟರು.

ಈ ಕಂಪನಿಯ ವಿರುದ್ಧ ತೆರಿಗೆ ವಂಚನೆ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿದ್ದವು. ಅದೇ ವರ್ಷದ ಫೆಬ್ರವರಿಯಲ್ಲಿ ನಡೆದಿದ್ದ ಭಾರಿ ಪ್ರತಿಭಟನೆಯಿಂದಾಗಿ ಉಕ್ರೈನ್‌ನ ಅಂದಿನ ಅಧ್ಯಕ್ಷ ವಿಕ್ಟರ್‌ ಯನುಕೋವಿಚ್‌ ಅಧ್ಯಕ್ಷ ಸ್ಥಾನದಿಂದ ಹೊರ ನಡೆಯಬೇಕಾಯಿತು. ಯನುಕೋವಿಚ್‌ ಸರ್ಕಾರದಲ್ಲಿನ ಸಚಿವರೇ ಬಿಡೆನ್‌ ಪುತ್ರ ಸೇರ್ಪಡೆಗೊಂಡ ಕಂಪನಿಯ ಸಂಸ್ಥಾಪಕರಾಗಿದ್ದರು. ಈ ಕಂಪನಿಯ ವಿರುದ್ಧ ತೆರಿಗೆ ವಂಚನೆ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿದ್ದವು.

ಫೆಬ್ರವರಿ 2015ರಲ್ಲಿ ಉಕ್ರೇನ್‌ನ ಪ್ರಾಸಿಕ್ಯೂಟರ್‌ ಜನರಲ್‌ ಆಗಿ ನೇಮಕಗೊಂಡ ವಿಕ್ಟರ್‌ ಶಾಕಿನ್‌, “ಬರಿಸ್ಮಾ’ ಕಂಪನಿಯ ವಿರುದ್ಧದ ಆರೋಪಗಳನ್ನು ತನಿಖೆ ಮಾಡುವುದಾಗಿ ಘೋಷಿಸಿದರು. ಆದರೆ ಶಾಕಿನ್‌ ದುರ್ಬಲ ವ್ಯಕ್ತಿ, ಅವರು ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಿಲ್ಲ ಎನ್ನುವುದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಬಹುಬೇಗನೇ ಮನದಟ್ಟಾಯಿತು. ಈ ಕಾರಣಕ್ಕಾಗಿಯೇ, ಅಮೆರಿಕ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಉಕ್ರೈನ್‌ನ ಮೇಲೆ ಒತ್ತಡ ಹೇರಿದವು. ಆದರೆ ಶಾಕಿನ್‌ ಮಾತ್ರ ಗಂಭೀರ ಕ್ರಮ ಕೈಗೊಳ್ಳಲೇ ಇಲ್ಲ.

2016ರ ಮಾರ್ಚ್‌ ತಿಂಗಳಲ್ಲಿ ಜೋ ಬಿಡೆನ್‌ ಉಕ್ರೈನ್‌ನ ರಾಜಧಾನಿ “ಕೀವ್‌’ ನಗರಕ್ಕೆ ಬಂದರು. ಅವರು ಉಕ್ರೈನ್‌ ಸರ್ಕಾರಕ್ಕೆ 1 ಶತಕೋಟಿ ಡಾಲರ್‌ ಸಾಲವನ್ನು ಘೋಷಿಸಲು ಹೋಗಿದ್ದರಾದರೂ, “ಪ್ರಾಸಿಕ್ಯೂಟರ್‌ ಜನರಲ್‌ ಹುದ್ದೆಯಿಂದ ವಿಕ್ಟರ್‌ ಶಾಕಿನ್‌ರನ್ನು ತೆಗೆದು ಹಾಕದಿದ್ದರೆ, ಉಕ್ರೈನ್‌ಗೆ 1 ಶತಕೋಟಿ ಡಾಲರ್‌ ಸಹಾಯ ನೀಡುವುದಿಲ್ಲ ಎಂದು ಎಚ್ಚರಿಸಿದರು! ಇದಾದ ಕೆಲವೇ ದಿನಗಳಲ್ಲಿ ವಿಕ್ಟರ್‌ ಶಾಕಿನ್‌ರನ್ನು ತೆಗೆದು ಹಾಕಲಾಯಿತು.

“ಎಲ್ಲಿ ವಿಕ್ಟರ್‌ ಶಾಕಿನ್‌ ಬರಿಸ್ಮಾ ಕಂಪನಿಯ ವಿರುದ್ಧ ತನಿಖೆ ನಡೆಸುತ್ತಾರೋ, ಎಲ್ಲಿ ತಮ್ಮ ಮಗ ಸಿಕ್ಕಿ ಬೀಳುತ್ತಾನೋ ಎಂಬ ಭಯ ಜೋ ಬಿಡೆನ್‌ಗೆ ಇತ್ತು. ಹೀಗಾಗಿ ಅವರು ಶಾಕಿನ್‌ರನ್ನು ಕೆಳಕ್ಕಿಳಿಸುವಂತೆ ಉಕ್ರೈನ್‌ ಮೇಲೆ ಒತ್ತಡತಂದರು’ ಎಂದು ಟ್ರಂಪ್‌ ಮತ್ತು ಅವರ ಪಕ್ಷದವರು ಮೊದಲಿನಿಂದಲೂ ವಾದಿಸುತ್ತಾ ಬಂದಿದ್ದಾರೆ.

ಆದರೆ, ಜೋ ಬಿಡೆನ್‌ ಬರಾಕ್‌ ಒಬಾಮಾ ಸರ್ಕಾರದ ಆದೇಶದ ಮೇರೆಗೆ ಉಕ್ರೈನ್‌ನ ಮೇಲೆ ಈ ರೀತಿಯ ಒತ್ತಡ ಹೇರಿದರಷ್ಟೇ ಎನ್ನಲಾಗುತ್ತದೆ. ಅವರು ತಮ್ಮ ಮಗನನ್ನು ಉಳಿಸಿಕೊಳ್ಳಲು ಹೀಗೆ ಮಾಡಿದರು ಎಂಬುದಕ್ಕೆ ಯಾವುದೇ ಪುರಾವೆಯೂ ಇದುವರೆಗೆ ಸಿಕ್ಕಿಲ್ಲ. ಅಲ್ಲದೇ ತದನಂತರ ನಡೆದ ಹಲವು ತನಿಖೆಗಳಲ್ಲೂ “ಬರಿಸ್ಮಾ’ ಅವ್ಯವಹಾರದಲ್ಲಿ ಹಂಟರ್‌ ಬಿಡೆನ್‌ ಪಾತ್ರ ಇಲ್ಲ ಎಂದೇ ಸಾಬೀತಾಗಿದೆ.

ಆದರೂ ಟ್ರಂಪ್‌ಗೆ ಮಾತ್ರ ಜೋ ಬಿಡೆನ್‌ ಮತ್ತು ಅವರ ಮಗ ಹಂಟರ್‌ ಬಿಡೆನ್‌ರನ್ನು ಭ್ರಷ್ಟಾಚಾರದ ಕಳಂಕದಲ್ಲಿ ಮುಳುಗಿಸಬೇಕೆಂಬ ಆಸೆಯಿದೆ, ಜೋ ಬಿಡೆನ್‌ 2020ರಲ್ಲಿ ಟ್ರಂಪ್‌ಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ಟ್ರಂಪ್‌ ಉಕ್ರೈನ್‌ ಸರ್ಕಾರಕ್ಕೆ ಹಂಟರ್‌ ಬಿಡೆನ್‌ ವಿರುದ್ಧ ತನಿಖೆ ನಡೆಸುವಂತೆ ಒತ್ತಡ ಹೇರಿದ್ದು!

ಹುದ್ದೆ ಕಳೆದುಕೊಂಡಿಲ್ಲ
ಅಮೆರಿಕದ ಅಧ್ಯಕ್ಷೀಯ ಇತಿಹಾಸದಲ್ಲಿ ಇದು ವರೆಗೆ ಎರಡು ಬಾರಿ ಮಹಾಭಿಯೋಗ ಪ್ರಕ್ರಿಯೆ ನಡೆದಿದೆ. ಆದರೆ ಯಾರೂ ಹುದ್ದೆ ಕಳೆದುಕೊಂಡಿಲ್ಲ. ಕುಖ್ಯಾತ ವಾಟರ್‌ಗೆàಟ್‌ ಹಗರಣದಲ್ಲಿ ಅಂದಿನ ಅಮೆರಿಕನ್‌ ಅಧ್ಯಕ್ಷ ರಿಚರ್ಡ್‌ ನಿಕ್ಸನ್‌ರನ್ನು ಮಹಾಭಿಯೋಗ ಪ್ರಕ್ರಿಯೆ ಮೂಲಕ ಅಧಿಕಾರದಿಂದ ತೆಗೆದು ಹಾಕುವ ಸಾಧ್ಯತೆ ಇತ್ತು. ಆದರೆ ಅದಕ್ಕಿಂತ ಮೊದಲೇ ಅವರು ರಾಜೀನಾಮೆ ನೀಡಿದ್ದರು.

ವಾಗ್ಧಂಡನೆ ಎದುರಿಸಿದ್ದ ಅಧ್ಯಕ್ಷರು
1. ಆ್ಯಂಡ್ರೂé ಜಾನ್ಸನ್‌- 1868 ಫೆ.24
ಏನಿತ್ತು ಆರೋಪ: ಅಧಿಕಾರದ ದುರು ಪಯೋಗ, ಭ್ರಷ್ಟಾಚಾರ, ಸ್ವಜನಪಕ್ಷಪಾತ
ಏನಾಯಿತು?: ವಾಗ್ಧಂಡನೆಗೆ ಗುರಿಯಾಗಿ ದ್ದರೂ, ಅವರನ್ನು ಅಧಿಕಾರದಿಂದ ವಜಾಗೊಳಿ ಸಿರಲಿಲ್ಲ. ಆದರೆ ಇಂಥ ಪ್ರಕ್ರಿಯೆಗೆ ಗುರಿಯಾದ ಮೊದಲ ಅಮೆರಿಕ ಅಧ್ಯಕ್ಷರೆಂಬ ಕುಖ್ಯಾತಿಗೆ ಪಾತ್ರ

2. ಬಿಲ್‌ ಕ್ಲಿಂಟನ್‌- 1998, ಡಿ.19
ಏನಿತ್ತು ಆರೋಪ?: ಅರ್ಕಾನ್ಸಾಸ್‌ನ ಗವರ್ನರ್‌ ಆಗಿದ್ದ ಪೌಲಾ ಜಾನ್ಸ್‌ಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ. ಅಲ್ಲದೇ ಅಧ್ಯಕ್ಷರಾಗಿದ್ದ ವೇಳೆಯಲ್ಲಿ ಮೋನಿಕಾ ಲ್ಯುವೆನ್ಸಿ ಜತೆ ಒಪ್ಪಿತ ಲೈಂಗಿಕ ಸಂಬಂಧ ಹೊಂದಿದ್ದರು ಎಂಬುದು. ಕ್ಲಿಂಟನ್‌ರನ್ನು ಅಧಿಕಾರದಿಂದ ವಜಾಗೊಳಿಸಿರಲಿಲ್ಲ. ಇಂಥ ಅಪಖ್ಯಾತಿಗೆ ಪಾತ್ರರಾದ 2ನೇ ಅಧ್ಯಕ್ಷ.

ಅಮೆರಿಕ ಸಂಸತ್‌ ಸ್ಥಿತಿ
ಅಮೆರಿಕದ ಸಂಸತ್‌ನ ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ (ಕೆಳಮನೆ)ಯ ಒಟ್ಟು 435 ಸ್ಥಾನಗಳ ಪೈಕಿ 235 ಸ್ಥಾನಗಳಲ್ಲಿ ಡೆಮಾಕ್ರಾಟ್‌ ಪಕ್ಷದ ಸಂಸದರು ಹಿಡಿತ ಸಾಧಿಸಿದ್ದಾರೆ. ಹೀಗಾಗಿ ಸ್ಪೀಕರ್‌ ಆಗಿರುವ ನಾನ್ಸಿ ಪೆಲೊಸಿ ಅಧ್ಯಕ್ಷರ ವಿರುದ್ಧದ ಆರೋಪಗಳ ಬಗ್ಗೆ ಮಹಾಭಿಯೋಗ ಪ್ರಕ್ರಿಯೆ ಆರಂಭಿಸಲು ಆದೇಶ ನೀಡಿದ್ದಾರೆ. ಹೀಗಾಗಿ ಇಲ್ಲಿ ಪ್ರಕ್ರಿಯೆಯನ್ನು ಮತಕ್ಕೆ ಹಾಕಿದರೆ ಸರಳ ಬಹುಮತಕ್ಕೆ 218, ಮೂರನೇ ಎರಡು ಮತ ಅಂದರೆ 290 ಮತಗಳು ಬೇಕು.

ಸೆನೆಟ್‌ನಲ್ಲಿ ರಿಪಬ್ಲಿಕನ್‌ ಪಕ್ಷದ ಸದಸ್ಯರು (100 ಸದಸ್ಯರ ಪೈಕಿ 53 ಮಂದಿ) ಹೆಚ್ಚು ಇದ್ದಾರೆ. ಹೀಗಾಗಿ, ಕೆಳಮನೆಯಲ್ಲಿ ನಿರ್ಣಯ ಅಂಗೀಕಾರಗೊಂಡರೂ ಮೇಲ್ಮನೆಯಲ್ಲಿ ಅಂಗೀಕಾರ ಕಷ್ಟ.

Advertisement

Udayavani is now on Telegram. Click here to join our channel and stay updated with the latest news.

Next