ಅಮೆರಿಕಾದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ನಿರಂತರವಾಗಿ ಗ್ರೀನ್ ಲ್ಯಾಂಡ್ ಪ್ರಾಂತ್ಯವನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಸೇರಿಸಬೇಕು ಎಂಬ ಎಚ್ಚರಿಕೆಯನ್ನು ಹೆಚ್ಚಿಸುತ್ತಾ ಬಂದಿದ್ದಾರೆ.
ಆರ್ಕ್‌ಟಿಕ್ ಪ್ರಾಂತ್ಯದ ಒಟ್ಟು ಭೂ ಪ್ರದೇಶದ 25% ಪ್ರದೇಶವನ್ನು ಗ್ರೀನ್ ಲ್ಯಾಂಡ್ ಆವರಿಸಿದೆ. ಇದು ಆರ್ಕ್‌ಟಿಕ್ ಪ್ರದೇಶದಲ್ಲಿ ಗ್ರೀನ್ ಲ್ಯಾಂಡ್ ಅತಿದೊಡ್ಡ ದ್ವೀಪವಾಗಿದ್ದು, ಈ ಪ್ರದೇಶದ ಭೌಗೋಳಿಕತೆ ಮತ್ತು ವ್ಯವಸ್ಥೆಗಳಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಇದು ಉತ್ತರ ಅಮೆರಿಕಾ, ಯುರೋಪ್ ಮತ್ತು ಆರ್ಕ್‌ಟಿಕ್ ಪ್ರದೇಶಗಳನ್ನು ಸಂಪರ್ಕಿಸುವುದರಿಂದ, ಇದಿರುವ ಸ್ಥಾನ ಕಾರ್ಯತಂತ್ರದ ಮಹತ್ವ ಹೊಂದಿದೆ. ಇಂತಹ ಡ್ಯಾನಿಶ್ ಪ್ರದೇಶದ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಆಸಕ್ತಿ ಮೂಡಿರುವುದರ ಹಿಂದಿರುವ ಕಾರಣಗಳೇನು ಎಂದು ಗಮನಿಸೋಣ.
ಗ್ರೀನ್ ಲ್ಯಾಂಡನ್ನು ಖರೀದಿಸಲು ಡೊನಾಲ್ಡ್ ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?
ಡೊನಾಲ್ಡ್ ಟ್ರಂಪ್ ಮೊದಲ ಅವಧಿಗೆ ಅಮೆರಿಕಾದ ಅಧ್ಯಕ್ಷರಾಗಿದ್ದಾಗ, ಅವರ ಸ್ನೇಹಿತರು, ಎಸ್ಟೀ ಲಾಡರ್ ಸೌಂದರ್ಯವರ್ಧಕ ಸಂಸ್ಥೆಯ ಉತ್ತರಾಧಿಕಾರಿಯಾದ ರೊನಾಲ್ಡೊ ಲಾಡರ್ ಅವರು ಗ್ರೀನ್ ಲ್ಯಾಂಡನ್ನು ಖರೀದಿಸುವ ಯೋಚನೆಯನ್ನು ಡೊನಾಲ್ಡ್ ಟ್ರಂಪ್ ಅವರಿಗೆ ಮೊದಲ ಬಾರಿಗೆ ಮೂಡಿಸಿದರು.
ಟ್ರಂಪ್ ಇದನ್ನು ‘ದೊಡ್ಡ ರಿಯಲ್ ಎಸ್ಟೇಟ್ ವ್ಯಾಪಾರ’ ಎಂದು ಕರೆದಿದ್ದು, ಗ್ರೀನ್ ಲ್ಯಾಂಡಿನ ಕಾರ್ಯತಂತ್ರದ ತಾಣ ಮತ್ತು ಆರ್ಕ್‌ಟಿಕ್‌ನ ನೈಸರ್ಗಿಕ ಸಂಪನ್ಮೂಲಗಳ ಕುರಿತು ತಿಳಿದ ಬಳಿಕ, ಅದರ ಖರೀದಿಯಲ್ಲಿ ಹೆಚ್ಚು ಹೆಚ್ಚು ಆಸಕ್ತರಾದರು.
ಟ್ರಂಪ್ ಅವರು ಗ್ರೀನ್ ಲ್ಯಾಂಡ್ ದ್ವೀಪದ ಖರೀದಿಯ ಕುರಿತಂತೆ ಸಂಭಾವ್ಯ ಆಯ್ಕೆಗಳನ್ನು ಅನ್ವೇಷಿಸಲು ತಂಡವೊಂದನ್ನು ರಚಿಸಿದರು. ಈ ತಂಡ, ನ್ಯೂಯಾರ್ಕ್‌ನ ಆಸ್ತಿ ವ್ಯವಹಾರಗಳ ರೀತಿಯಲ್ಲಿ ದೀರ್ಘಾವಧಿಗೆ ಗ್ರೀನ್ ಲ್ಯಾಂಡನ್ನು ಗುತ್ತಿಗೆಗೆ ಪಡೆಯುವ ಆಯ್ಕೆಯನ್ನೂ ಅನ್ವೇಷಿಸಿತ್ತು.
ಫ್ಲೋರಿಡಾದ ಪಾಮ್ ಸಮುದ್ರ ತೀರದಲ್ಲಿರುವ ತನ್ನ ಖಾಸಗಿ ನಿವಾಸವಾದ ಮಾರಲಾಗೋದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡೊನಾಲ್ಡ್ ಟ್ರಂಪ್, ಗ್ರೀನ್ ಲ್ಯಾಂಡನ್ನು ಖರೀದಿಸುವ ತನ್ನ ಉದ್ದೇಶದ ಹಿಂದಿರುವ ಮುಖ್ಯ ಕಾರಣ, ‘ಮುಕ್ತ ಜಗತ್ತನ್ನು ರಕ್ಷಿಸುವುದು’ (ಪ್ರಜಾಪ್ರಭುತ್ವ ರಾಷ್ಟ್ರಗಳು ಮತ್ತು ಅವುಗಳು ಹಿತಾಸಕ್ತಿಯನ್ನು ಕಾಪಾಡುವುದು) ಎಂದಿದ್ದರು. ಚೀನಾ ಮತ್ತು ರಷ್ಯಾಗಳು ಈ ಪ್ರದೇಶಕ್ಕೆ ಅಪಾಯವಾಗುವ ಸಾಧ್ಯತೆಗಳಿರುವುದರಿಂದ, ಗ್ರೀನ್ ಲ್ಯಾಂಡನ್ನು ಅಮೆರಿಕಾ ಖರೀದಿಸುವುದು ಮುಖ್ಯ ಎಂದು ಟ್ರಂಪ್ ಪ್ರತಿಪಾದಿಸಿದ್ದರು.
ಚೀನಾ ಜಾಗತಿಕ ಶಕ್ತಿಯಾಗಲು ಅಮೆರಿಕಾದೊಡನೆ ಸ್ಪರ್ಧಿಸುತ್ತಿದೆ ಎಂದು ಟ್ರಂಪ್ ಭಾವಿಸಿದ್ದು, ಇದಕ್ಕಾಗಿಯೇ ಅವರು ಪನಾಮಾ ಕಾಲುವೆಯ ಮೇಲೂ ಆಸಕ್ತಿ ತೋರಿಸಿದ್ದರು.
ಹಾಗಾದರೆ ಗ್ರೀನ್ ಲ್ಯಾಂಡ್ ಈಗ ಯಾವ ದೇಶಕ್ಕೆ ಸೇರಿದೆ?
ಜಗತ್ತಿನ ಅತಿದೊಡ್ಡ ದ್ವೀಪವಾದರೂ, ಗ್ರೀನ್ ಲ್ಯಾಂಡ್ ಒಂದು ಖಂಡವಲ್ಲ. ಇದು ಡೆನ್ಮಾರ್ಕ್ ಸಾಮ್ರಾಜ್ಯದ ಒಳಗಿರುವ ಸ್ವಾಯತ್ತ ಆಡಳಿತದ ಪ್ರದೇಶವಾಗಿದೆ. ಗ್ರೀನ್ ಲ್ಯಾಂಡ್ ತನ್ನದೇ ಭಾಷೆ, ಧ್ವಜ ಮತ್ತು ಸರ್ಕಾರವನ್ನು ಹೊಂದಿದೆ. ಆದರೆ, ಹಣ, ರಕ್ಷಣೆ ಮತ್ತು ಅಂತಾರಾಷ್ಟ್ರೀಯ ಸಂಬಂಧದಂತಹ ವಿಚಾರಗಳಲ್ಲಿ ಡೆನ್ಮಾರ್ಕ್ ಗ್ರೀನ್ ಲ್ಯಾಂಡಿನ ಜವಾಬ್ದಾರಿ ಹೊಂದಿದೆ.
1261ರಲ್ಲಿ, ನಾರ್ಸ್ ಸೆಟ್ಲರ್ಸ್ ಜೊತೆ (ನಾರ್ವೇ ಮತ್ತು ಐಸ್ ಲ್ಯಾಂಡಿನ ಸ್ಕ್ಯಾಂಡಿನೇವಿಯನ್ ಜನರು) ಒಪ್ಪಂದ ಮಾಡಿಕೊಂಡು, ನಾರ್ವೆ ಗ್ರೀನ್ ಲ್ಯಾಂಡ್ ಮೇಲೆ ನಿಯಂತ್ರಣ ಸಾಧಿಸಿತು. ಆ ಬಳಿಕ, ಗ್ರೀನ್ ಲ್ಯಾಂಡ್ 1397ರಿಂದ 1523ರ ತನಕ ಡೆನ್ಮಾರ್ಕ್, ನಾರ್ವೆ ಮತ್ತು ಸ್ವೀಡನ್‌ಗಳ ನಡುವಿನ ಒಕ್ಕೂಟದ ಭಾಗವಾಗಿತ್ತು. 1523ರಲ್ಲಿ ಸ್ವೀಡನ್ ಈ ಒಕ್ಕೂಟದಿಂದ ಹೊರ ನಡೆಯಿತು. ಅಂತಿಮವಾಗಿ, 1814ರಲ್ಲಿ ಕೀಲ್ ಒಪ್ಪಂದದ ಮೂಲಕ ಗ್ರೀನ್ ಲ್ಯಾಂಡ್ ಡೆನ್ಮಾರ್ಕ್‌ನ ಆಡಳಿತಕ್ಕೆ ಒಳಪಟ್ಟಿತು.
ಡೆನ್ಮಾರ್ಕ್‌ನ ನೂತನ ಸಂವಿಧಾನದ ಅಡಿಯಲ್ಲಿ ಗ್ರೀನ್ ಲ್ಯಾಂಡ್ ಡೆನ್ಮಾರ್ಕ್‌ನ ವಸಾಹತಾಗಿರುವುದು 1953ರಲ್ಲಿ ಕೊನೆಗೊಂಡಿತು. ಆದರೆ ಅದು ಇಂದಿಗೂ ಡೆನ್ಮಾರ್ಕಿನ ಆಡಳಿತ ಪ್ರದೇಶವಾಗಿಯೇ ಮುಂದುವರಿದಿದೆ. 1979ರಲ್ಲಿ, ಹೋಮ್ ರೂಲ್ ಆ್ಯಕ್ಟ್ ಗ್ರೀನ್ ಲ್ಯಾಂಡ್ ಸರ್ಕಾರಕ್ಕೆ ಹೆಚ್ಚಿನ ಸ್ವಾತಂತ್ರ್ಯ ನೀಡಿತು. ಬಳಿಕ, 1985ರಲ್ಲಿ ಗ್ರೀನ್ ಲ್ಯಾಂಡ್ ಯುರೋಪಿಯನ್ ಎಕನಾಮಿಕ್ ಕಮ್ಯುನಿಟಿಯಿಂದ ಹೊರನಡೆಯಲು ನಿರ್ಧರಿಸಿತು. ಈ ಕಮ್ಯುನಿಟಿ ಬಳಿಕ ಯುರೋಪಿಯನ್ ಯೂನಿಯನ್ ಆಯಿತು.
2009ರಲ್ಲಿ, ಗ್ರೀನ್ ಲ್ಯಾಂಡಿಗೆ ಸ್ವಾಯತ್ತ ಆಡಳಿತವನ್ನು ನೀಡಲಾಯಿತಾದರೂ, ಅದಕ್ಕೆ ಪ್ರತಿವರ್ಷವೂ ಡೆನ್ಮಾರ್ಕ್ ಹಣಕಾಸಿನ ಬೆಂಬಲ ನೀಡುತ್ತಾ ಬಂದಿದೆ. ಗ್ರೀನ್ ಲ್ಯಾಂಡಿನ ಜನರು ಡ್ಯಾನಿಷ್ ಪ್ರಜೆಗಳಾಗಿದ್ದು, ಅವರಿಗೆ ಐರೋಪ್ಯ ಒಕ್ಕೂಟದ ಪೌರತ್ವವನ್ನೂ ನೀಡಲಾಗಿದೆ. ಗ್ರೀನ್ ಲ್ಯಾಂಡನ್ನು ಐರೋಪ್ಯ ಒಕ್ಕೂಟದ ವಿದೇಶೀ ಪ್ರಾಂತ್ಯ ಎಂದು ಪರಿಗಣಿಸಲಾಗಿದೆ.
ಗ್ರೀನ್ ಲ್ಯಾಂಡನ್ನು ಖರೀದಿಸುವ ಡೊನಾಲ್ಡ್ ಟ್ರಂಪ್ ಬಯಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಐರೋಪ್ಯ ಒಕ್ಕೂಟದ ನಾಯಕರು, ಇಂತಹ ಆಲೋಚನೆಯನ್ನು ಕೈಬಿಡುವಂತೆ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಜರ್ಮನ್ ಚಾನ್ಸೆಲರ್ ಒಲಾಫ್ ಶ್ಲೋಜ಼್ ಅವರು ಗಡಿಗಳನ್ನು ಬದಲಾಯಿಸಲು ಬಲ ಪ್ರಯೋಗಿಸುವುದನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.
ಐರೋಪ್ಯ ಒಕ್ಕೂಟದ ತನ್ನ ಸಹಯೋಗಿಗಳೊಡನೆ ಮಾತನಾಡುವ ಸಂದರ್ಭದಲ್ಲಿ, ಅವರು ಅಮೆರಿಕಾ ನೀಡಿರುವ ಇತ್ತೀಚಿನ ಹೇಳಿಕೆಗಳಿಂದ ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಶ್ಲೋಜ಼್ ಹೇಳಿದ್ದಾರೆ. ಫ್ರಾನ್ಸಿನ ವಿದೇಶಾಂಗ ಸಚಿವರಾದ ಜೀನ್ ನೋಯೆಲ್ ಬ್ಯಾರಟ್ ಅವರು ತನ್ನ ಗಡಿಗಳಿಗೆ ಬೆದರಿಕೆ ಒಡ್ಡಲು ಅಥವಾ ದಾಳಿ ನಡೆಸಲು ಯಾವುದೇ ದೇಶಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಆರ್ಕ್‌ಟಿಕ್ ಪ್ರದೇಶ ರಷ್ಯಾಗೂ ರಾಷ್ಟ್ರೀಯ ಹಿತಾಸಕ್ತಿ ಮತ್ತು ಕಾರ್ಯತಂತ್ರದ ಮಹತ್ವವನ್ನು ಹೊಂದಿರುವ ಪ್ರದೇಶ ಎಂದು ರಷ್ಯಾ ಸಹ ಎಚ್ಚರಿಕೆ ನೀಡಿದೆ. ಆರ್ಕ್‌ಟಿಕ್ ಪ್ರದೇಶವನ್ನು ಶಾಂತಿಯುತ ಮತ್ತು ಸ್ಥಿರವಾಗಿಡುವುದು ತನ್ನ ಇಚ್ಛೆ ಎಂದು ರಷ್ಯಾ ಹೇಳಿದೆ. ರಷ್ಯಾ ಸದ್ಯದ ಸನ್ನಿವೇಶವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಇಲ್ಲಿಯತನಕ ಕೇವಲ ಹೇಳಿಕೆಗಳನ್ನು ಮಾತ್ರವೇ ನೀಡುತ್ತಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ.
ಗ್ರೀನ್ ಲ್ಯಾಂಡಿಗೇಕೆ ಅಷ್ಟು ಮಹತ್ವ?
ಮೀನುಗಾರಿಕೆ ಗ್ರೀನ್ ಲ್ಯಾಂಡಿನ ಮುಖ್ಯ ರಫ್ತು ಉತ್ಪನ್ನವಾಗಿದೆ. ಆದರೆ, ಗ್ರೀನ್ ಲ್ಯಾಂಡ್ ಖನಿಜಗಳು ಮತ್ತು ಹೈಡ್ರೋಕಾರ್ಬನ್‌ಗಳು ಸೇರಿದಂತೆ, ಇನ್ನೂ ಬಳಕೆಯಾಗದ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದೆ. ಮೀನು ಮತ್ತು ಸಿಗಡಿ ಗ್ರೀನ್ ಲ್ಯಾಂಡಿನ ರಫ್ತಿನಲ್ಲಿ 95% ಪಾಲು ಹೊಂದಿದೆ. 2022ರಲ್ಲಿ, ಡೆನ್ಮಾರ್ಕ್ ಅದರ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದ್ದು (49%), ಆ ನಂತರದ ಸ್ಥಾನಗಳಲ್ಲಿ ಚೀನಾ (24%), ಯುಕೆ (6%), ಮತ್ತು ಜಪಾನ್ (5%) ಇದ್ದವು.
2021ರಲ್ಲಿ ಗ್ರೀನ್ ಲ್ಯಾಂಡ್ ಹೊಸದಾಗಿ ನೈಸರ್ಗಿಕ ಅನಿಲ ಮತ್ತು ತೈಲ ಅನ್ವೇಷಣೆಯನ್ನು ನಿಷೇಧಿಸಿರುವುದರಿಂದ, ಅಲ್ಲಿಂದ ಖನಿಜಗಳು, ತೈಲ ಅಥವಾ ಅನಿಲ (ತೈಲ ಮತ್ತು ಅನಿಲಗಳಂತೆ ನೈಸರ್ಗಿಕ ಇಂಧನಗಳಾಗಿರುವ ಹೈಡ್ರೋಕಾರ್ಬನ್ನುಗಳು) ರಫ್ತಾಗುವುದಿಲ್ಲ.
ತೈಲಕ್ಕಾಗಿ ಭೂಮಿಯನ್ನು ಕೊರೆಯುವುದರಿಂದ, ಗ್ರೀನ್ ಲ್ಯಾಂಡಿನ ವಾತಾವರಣ ಹಾಳಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗ್ರೀನ್ ಲ್ಯಾಂಡಿನ ಪಶ್ಚಿಮ ಸಮುದ್ರ ತೀರ ಮತ್ತು ಪೂರ್ವ ಸಮುದ್ರ ತೀರದ ಆಳದಲ್ಲಿ ಬಿಲಿಯನ್ ಗಟ್ಟಲೆ ಬ್ಯಾರಲ್‌ಗಳಷ್ಟು ತೈಲ ನಿಕ್ಷೇಪಗಳಿವೆ ಎನ್ನಲಾಗಿದೆ.
ಗ್ರೀನ್ ಲ್ಯಾಂಡಿನ ಪ್ರಕೃತಿಯನ್ನು ಕಾಪಾಡಲು ಮತ್ತು ಮೀನುಗಾರಿಕೆ ಉದ್ಯಮವನ್ನು ಉತ್ತೇಜಿಸಲು, ಪ್ರವಾಸೋದ್ಯಮಕ್ಕೆ ಬೆಂಬಲ ನೀಡಿ, ಭವಿಷ್ಯಕ್ಕಾಗಿ ಸುಸ್ಥಿರ ಜೀವನ ಅವಕಾಶಗಳನ್ನು ಒದಗಿಸುವ ಸಲುವಾಗಿ ತೈಲ ಅನ್ವೇಷಣೆಯ ಮೇಲೆ ನಿಷೇಧ ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳಿದೆ. ಹವಾಮಾನ ಬದಲಾವಣೆಯ ಕುರಿತು ಆತಂಕ ಹೊಂದಿರುವುದರಿಂದ, ಗ್ರೀನ್ ಲ್ಯಾಂಡ್ ವಿದ್ಯುತ್ ಶಕ್ತಿಗಾಗಿ ಜಲ ಸಂಪನ್ಮೂಲವನ್ನು ಬಳಸಲಾರಂಭಿಸಿತು.
2021ರಲ್ಲಿ, ಗ್ರೀನ್ ಲ್ಯಾಂಡ್ ಸಂಸತ್ತು ಯುರೇನಿಯಂ ಗಣಿಗಾರಿಕೆಗೆ ನಿಷೇಧ ಹೇರಿ, ಕುವಾನರ್‌ಸುಟ್ ಗಣಿಯನ್ನು (ಗ್ರೀನ್ ಲ್ಯಾಂಡಿನ ದಕ್ಷಿಣದ ನಾರ್ಸಾಕ್ ಪಟ್ಟಣದ ಬಳಿಯ ಗಣಿ) ಅಭಿವೃದ್ಧಿ ಪಡಿಸುವ ಯೋಜನೆಯನ್ನು ಕೈಬಿಟ್ಟಿತು. ಈ ಗಣಿ ಜಗತ್ತಿನ ಅತಿದೊಡ್ಡ ಅಪರೂಪದ ಭೂ ಖನಿಜಗಳನ್ನು ಒಳಗೊಂಡಿದೆ. ಈ ಖನಿಜಗಳು ಇಲೆಕ್ಟ್ರಾನಿಕ್ಸ್ ಮತ್ತು ಮರುಬಳಕೆಯ ಇಂಧನಕ್ಕೆ ಬಳಕೆಯಾಗುತ್ತವೆ.
ಅಮೆರಿಕಾ ಮತ್ತು ಗ್ರೀನ್ ಲ್ಯಾಂಡ್ ನಡುವಿನ ಸಂಬಂಧದ ಇತಿಹಾಸವೇನು?
ಗ್ರೀನ್ ಲ್ಯಾಂಡ್ ಉತ್ತರ ಅಮೆರಿಕಾದಲ್ಲಿದ್ದು, ಇದರಿಂದಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನ ಹಿಂದೆ ಹಲವಾರು ಬಾರಿ ಈ ದ್ವೀಪವನ್ನು ಖರೀದಿಸುವ ಪ್ರಯತ್ನ ನಡೆಸಿದೆ.
1867ರಲ್ಲಿ, ರಷ್ಯಾದಿಂದ ಅಲಾಸ್ಕಾವನ್ನು ಖರೀದಿಸಲು ಕಾರಣರಾಗಿದ್ದ ಅಮೆರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ವಿಲಿಯಂ ಸೀವಾರ್ಡ್ ಅವರು ಗ್ರೀನ್ ಲ್ಯಾಂಡ್ ಮತ್ತು ಐಸ್ ಲ್ಯಾಂಡ್‌ಗಳನ್ನು ಅಮೆರಿಕಾ ಖರೀದಿಸುವ ಆಲೋಚನೆಯನ್ನು ಪ್ರಸ್ತಾಪಿಸಿದರು. ಆದರೆ, ಈ ಪ್ರಸ್ತಾಪವನ್ನು ಸಲ್ಲಿಕೆ ಮಾಡಲಿಲ್ಲ.
ಗ್ರೀನ್ ಲ್ಯಾಂಡಿನ ಹೊಸ ಪ್ರದೇಶಗಳ ಅನ್ವೇಷಣೆಗೆ ತೆರಳಿದ ಅಮೆರಿಕನ್ ಅನ್ವೇಷಕರು ಆ ಪ್ರದೇಶದ ಮೇಲೆ ಅಮೆರಿಕಾದ ಆಸಕ್ತಿಯನ್ನು ಹೆಚ್ಚಾಗುವಂತೆ ಮಾಡಿದ್ದರು. ಈ ಕಾರಣದಿಂದಲೇ 1910ರಲ್ಲಿ ಡೆನ್ಮಾರ್ಕ್‌ನ ಅಮೆರಿಕನ್ ರಾಯಭಾರಿ ಗ್ರೀನ್ ಲ್ಯಾಂಡನ್ನು ಅಮೆರಿಕಾ ಖರೀದಿಸುವ ಸಾಧ್ಯತೆಯ ಕುರಿತು ಚರ್ಚೆ ನಡೆಸಿದರು.
1946ರಲ್ಲಿ, ಅಮೆರಿಕಾ ಅಧ್ಯಕ್ಷ ಟ್ರೂಮನ್ ಅವರು ಗ್ರೀನ್ ಲ್ಯಾಂಡನ್ನು ಖರೀದಿಸಲು 100 ಮಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ನೀಡಲು ಸಿದ್ಧರಿದ್ದರು. ಅಮೆರಿಕಾ ಮಿಲಿಟರಿ ಈ ದ್ವೀಪ ಅಮೆರಿಕಾಗೆ ಬಹಳ ಮುಖ್ಯ ಎಂದು ಅಭಿಪ್ರಾಯ ಪಟ್ಟಿದ್ದು, ಇದರಿಂದ ಡೆನ್ಮಾರ್ಕ್‌ಗೆ ಯಾವುದೇ ಪ್ರಯೋಜನವಿಲ್ಲ ಎಂದಿತ್ತು.
ಅಮೆರಿಕಾದ ಸೆಕ್ರೆಟರಿ ಆಫ್ ಸ್ಟೇಟ್, ಜೇಮ್ಸ್ ಬೈರ್ನ್ಸ್ ಅವರು ಡೆನ್ಮಾರ್ಕ್ ವಿದೇಶಾಂಗ ಸಚಿವಾರದ ಗುಸ್ತಾವ್ ರಾಸ್ಮುಸ್ಸೆನ್ ಅವರೊಡನೆ ವಾಷಿಂಗ್ಟನ್‌ನಲ್ಲಿ ನಡೆದ ಸಭೆಯೊಂದರಲ್ಲಿ ಗ್ರೀನ್ ಲ್ಯಾಂಡನ್ನು ಖರೀದಿಸುವ ಅಧಿಕೃತ ಪ್ರಸ್ತಾವನೆ ಸಲ್ಲಿಸಿದ್ದರು.
ಡೆನ್ಮಾರ್ಕ್ ಈ ಪ್ರಸ್ತಾವನೆಯನ್ನು ತಿರಸ್ಕರಿಸಿ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಗ್ರೀನ್ ಲ್ಯಾಂಡಿನ ಈಶಾನ್ಯ ಕರಾವಳಿಯಲ್ಲಿ ನಿರ್ಮಿಸಿದ್ದ ತುಲೆ ವಾಯು ನೆಲೆಯನ್ನು ವಿಸ್ತರಿಸಲು ಅಮೆರಿಕಾಗೆ ಅವಕಾಶ ನೀಡಿತು.
ಈಗ ಪಿತುಫಿಕ್ ಸ್ಪೇಸ್ ಬೇಸ್ ಎಂದು ಹೆಸರು ಪಡೆದಿರುವ ಈ ನೆಲೆ ಆರ್ಕ್‌ಟಿಕ್ ವೃತ್ತದಿಂದ 750 ಮೈಲಿ (1,200 ಕಿಲೋಮೀಟರ್) ದೂರದಲ್ಲಿದೆ. ಇದು ಜಗತ್ತಿನ ಅತ್ಯಂತ ಉತ್ತರದ ತುದಿಯ ಆಳ ಸಮುದ್ರದ ಬಂದರು, 10,000 ಅಡಿ (3,000 ಮೀಟರ್) ರನ್ ವೇ, ಮತ್ತು ಅತ್ಯಾಧುನಿಕ ಕ್ಷಿಪಣಿ ಮುನ್ನೆಚ್ಚರಿಕೆ ಮತ್ತು ಬಾಹ್ಯಾಕಾಶ ಕಣ್ಗಾವಲು ವ್ಯವಸ್ಥೆಗಳನ್ನು ಹೊಂದಿದೆ.
*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)