ನವದೆಹಲಿ: ಟ್ರೂ ಕಾಲರ್ ನಲ್ಲಿರುವ 4.75 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿಯನ್ನು ಡಾರ್ಕ್ ವೆಬ್‌ನಲ್ಲಿ ಸುಮಾರು 75,000 ರೂ ಗಳಿಗೆ ಮಾರಾಟ ಮಾಡಲಾಗಿದೆ ಎಂದು ಆನ್‌ಲೈನ್ ಗುಪ್ತಚರ ಸಂಸ್ಥೆ ಸೈಬಲ್ ವರದಿ ಮಾಡಿದೆ. ಆದಾಗ್ಯೂ ಟ್ರೂ ಕಾಲರ್ ಈ ವರದಿಯನ್ನು ನಿರಾಕರಿಸಿದ್ದು ಯಾವುದೇ ಡೇಟಾ ಬೇಸ್ ಉಲ್ಲಂಘನೆಯಾಗಿಲ್ಲ ಎಂಬ ಮಾಹಿತಿ ನೀಡಿದೆ.
2019ರಿಂದ ಟ್ರೂ ಕಾಲರ್ ನಲ್ಲಿರುವ ಮಾಹಿತಿಗಳು ಡಾರ್ಕ್ ವೆಬ್‌ನಲ್ಲಿ ಲಭ್ಯವಿದ್ದು, ಇವುಗಳನ್ನು ರಾಜ್ಯಗಳು, ನಗರಗಳು ಮತ್ತು ಉದ್ಯೋಗದ ಆಧಾರದ ಮೇಲೆ ವರ್ಗೀಕರಿಸಲಾಗಿದೆ ಎಂದು ಸೈಬಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. ಇದೀಗ ಡಾರ್ಕ್ ವೆಬ್ ನಲ್ಲಿ 4.75 ಕೋಟಿ ಭಾರತೀಯರ ಫೋನ್ ನಂಬರ್, ಉದ್ಯೋಗ, ಹೆಸರು, ಲಿಂಗ, ಇಮೇಲ್ ವಿಳಾಸ, ಫೇಸ್‌ಬುಕ್ ಐಡಿ ಮತ್ತು ಹೆಚ್ಚಿನದನ್ನು ಒಳಗೊಂಡಿದೆ ಎಂದು ಹಿಂದೂ ಸ್ಥಾನ್ ಟೈಮ್ಸ್ ನೀಡಿರುವ ವರದಿಯಲ್ಲಿ ಹೇಳಲಾಗಿದೆ.
ಸೋರಿಕೆಯಾಗಿರುವ ಸಂಪೂರ್ಣ ವಿವರಗಳನ್ನು ಸೈಬಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಪ್ರಕಟಿಸಿದೆ. ಮತ್ತೊಂದೆಡೆ ಟ್ರೂ -ಕಾಲರ್ ಈ ವರದಿಯನ್ನು ನಿರಾಕರಿಸಿದ್ದು ಮತ್ತು ಸೈಬಲ್ ಪ್ರತಿಪಾದಿಸಿದಂತೆ ಯಾವುದೇ ಡೇಟಾ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
“ಈ ಅಂಶವನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ಡೇಟಾ ಬೇಸ್ ಯಾವುದೇ ರೀತಿಯಲ್ಲೂ ಸೋರಿಕೆಯಾಗಿಲ್ಲ. ಎಲ್ಲಾ ಬಳಕೆದಾರರ ಮಾಹಿತಿಯು ಸುರಕ್ಷಿತವಾಗಿದೆ. ಜನರ ವೈಯಕ್ತಿಕ ಮಾಹಿತಿಗಳನ್ನು ಸಮರ್ಪಕವಾಗಿಡಲು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ. ಸೈಬರ್ ಕ್ರೈಮ್ ಕುರಿತು ಈಗಾಗಲೇ ಮುನ್ನೆಚ್ಚರಿಕೆ ವಹಿಸಲಾಗಿದೆ.
ಮೇ 2019 ರಲ್ಲಿ ಕೂಡ ಟ್ರೂ-ಕಾಲರ್ ಆ್ಯಪ್ ಮೇಲೆ ವೈಯಕ್ತಿಕಾ ಡೇಟಾ ಮಾರಾಟದ ಆರೋಪ ಮಾಡಲಾಗಿತ್ತು. ಆದರೇ ಸೈಬರ್ ಅಪರಾಧಿಗಳಿಗೆ ಮಾಹಿತಿ ಕದ್ದು ಟ್ರೂಕಾಲರ್ ನ ಸ್ಟಾಂಪ್ ಹಾಕುವುದು ಬಹಳ ಸುಲಭ. ಇಂತಹ ಸೈಬರ್ ಅಪರಾಧಿಗಳ ವಿರುದ್ಧ ಸಾರ್ವಜನಿಕರು ಮತ್ತು ಬಳಕೆದಾರರು ಎಚ್ಚರದಿಂದಿರುವಂತೆ ಕೋರುತ್ತೇವೆ” ಎಂದು ಟ್ರೂ-ಕಾಲರ್ ನ ವಕ್ತಾರರು ತಿಳಿಸಿದ್ದಾರೆ.
ಸೋರಿಕೆಯಾಗಿರುವ ಮಾಹಿತಿ ಬಳಸಿಕೊಂಡು ಸೈಬರ್ ಕ್ರಿಮಿನಲ್ ಗಳು ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸಬಹುದು ಎಂಬ ಆತಂಕ ಕೂಡ ವ್ಯಕ್ತವಾಗುತ್ತಿದೆ.