ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಬಳಿಕ ಮೊದಲ ಬಾರಿಗೆ ಹೇಳಿಕೆ ನೀಡಿರುವ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ‘ದಾರ್ಷ್ಟ್ಯದಿಂದ ಕೆಲಸ ಮಾಡುವವನು ನಿಜವಾದ ಸೇವಕ ಆಗಲು ಸಾಧ್ಯವಿಲ್ಲ’ ಎಂದಿದ್ದಾರೆ. ಆರ್ ಎಸ್ಎಸ್ ಮುಖ್ಯಸ್ಥರ ಈ ಹೇಳಿಕೆ ಮಹತ್ವ ಪಡೆದಿದೆ.
ನಾಗ್ಪುರದಲ್ಲಿ ಮಾತನಾಡಿದ ಅವರು, ನಿಜವಾದ ‘ಸೇವಕ’ ಘನತೆಯನ್ನು ಕಾಯ್ದುಕೊಳ್ಳುತ್ತಾನೆ. ಅವನು ಕೆಲಸ ಮಾಡುವಾಗ ಸಭ್ಯತೆಯನ್ನು ಅನುಸರಿಸುತ್ತಾನೆ. ‘ನಾನು ಈ ಕೆಲಸ ಮಾಡಿದ್ದೇನೆ’ ಎಂದು ಹೇಳುವ ಅಹಂಕಾರವನ್ನು ಹೊಂದಿಲ್ಲ. ಆ ವ್ಯಕ್ತಿಯನ್ನು ಮಾತ್ರ ನಿಜವಾದ ‘ಸೇವಕ’ ಎಂದು ಕರೆಯಬಹುದು ಎಂದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಬಹುಮತ ಪಡೆಯಲು ವಿಫಲವಾದ ಬಳಿಕ ಭಾಗವತ್ ಅವರ ಹೇಳಿಕೆ ಬಂದಿದೆ.
ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್ ನ ಮುಖ್ಯಸ್ಥರ ಮಾತುಗಳು ಮಹತ್ವವನ್ನು ಪಡೆದುಕೊಳ್ಳುತ್ತಿವೆ. ಏಕೆಂದರೆ ಆಕ್ರಮಣಕಾರಿ ಚುನಾವಣಾ ಪ್ರಚಾರದ ಹೊರತಾಗಿಯೂ ಎನ್‌ಡಿಎಗೆ ಮಹತ್ವಾಕಾಂಕ್ಷೆಯ ‘400 ಪಾರ್’ ದಾಟಲು ಸಾಧ್ಯವಾಗಲಿಲ್ಲ. ಪಕ್ಷವು 272 ರ ಬಹುಮತದ ಗುರುತನ್ನು ಪಡೆಯಲೂ ವಿಫಲವಾಯಿತು. ಅದು 543 ಲೋಕಸಭಾ ಸ್ಥಾನಗಳಲ್ಲಿ 240 ಸ್ಥಾನಗಳನ್ನು ಗೆದ್ದಿತು. ಬಿಜೆಪಿ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಟಿಡಿಪಿಯ ಎನ್ ಚಂದ್ರಬಾಬು ನಾಯ್ಡು ಮತ್ತು ಜೆಡಿಯುನ ನಿತೀಶ್ ಕುಮಾರ್ ಸೇರಿದಂತೆ ಎನ್‌ಡಿಎ ಮಿತ್ರಪಕ್ಷಗಳನ್ನು ಅವಲಂಬಿಸಿದೆ.
ಎರಡೂ ಪಕ್ಷಗಳ ಕಹಿ ಚುನಾವಣಾ ಪ್ರಚಾರದ ಬಗ್ಗೆ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥರು, ಸಭ್ಯತೆಯನ್ನು ಹೇಗೆ ನಿರ್ವಹಿಸಲಿಲ್ಲ ಎಂಬುದನ್ನು ಒತ್ತಿ ಹೇಳಿದರು. ಅದರಲ್ಲಿಯೂ ಆರ್‌ಎಸ್‌ಎಸ್ ನನ್ನೂ ಎಳೆದು ತರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಪ್ರಚಾರದ ವೇಳೆ ಜನರು ಪರಸ್ಪರ ನಿಂದನೆ, ತಂತ್ರಜ್ಞಾನ ದುರ್ಬಳಕೆ ಮಾಡಿಕೊಳ್ಳುವ ಹಾಗೂ ಸುಳ್ಳು ಸುದ್ದಿ ಹಬ್ಬಿಸುವ ರೀತಿ ಸರಿಯಲ್ಲ ಎಂದರು.