ಹೊಸಪೇಟೆ: ಡಿ. ದೇವರಾಜ ಅರಸ್ ಟ್ರಕ್ ಟ್ರಮಿನಲ್ ವತಿಯಿಂದ ನಗರದ ಹಳೆ ಅಮರಾವತಿಯಲ್ಲಿ 37.33 ಎಕರೆ ಪ್ರದೇಶದ ವಿಜಯನಗರ ಟ್ರಕ್ ಟ್ರಮಿನಲ್ ನಿರ್ಮಾಣಕ್ಕೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಹಾಗೂ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಭಾನುವಾರ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಸಾರಿಗೆ ಸಚಿವ ಬಿ. ಶ್ರೀರಾಮುಲು ನಗರದಲ್ಲಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಟ್ರಕ್ ಟರ್ಮಿನಲ್ ನಿರ್ಮಾಣ ಬೇಡಿಕೆ ಇದೀಗ ಜಾರಿಗೆ ತರುವ ಕೆಲಸ ಮಾಡಲಾಗಿದೆ. ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್‌ಗೆ ಈಗಾಗಲೇ 25 ಕೋಟಿ ರೂ. ಮಂಜೂರು ಮಾಡಿದ್ದು, ಇನ್ನೂ ಅನುದಾನ ಅಗತ್ಯವಿದ್ದಲ್ಲಿ ಒದಗಿಸಲಾಗುವುದು. ಹೊಸಪೇಟೆ ಹೆದ್ದಾರಿಯಲ್ಲಿ ಸದಾ ಟ್ರಾಫಿಕ್ ಜಾಮ್ ಸಮಸ್ಯೆ. ಇಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣದಿಂದ ಅಪಘಾತಕ್ಕೆ ಕಡಿವಾಣ ಬೀಳಲಿದೆ. ಒಟ್ಟಾರೆ ವಿಜಯನಗರ ಟ್ರಕ್ ಟರ್ಮಿನಲ್ ರಾಜ್ಯದಲ್ಲಿ ಮಾದರಿಯಾಗಲಿದೆ. ಇಡೀ ರಾಜ್ಯದಲ್ಲಿ ದೇವನಹಳ್ಳಿ, ಹುಬ್ಬಳ್ಳಿ ಸೇರಿದಂತೆ ರಾಜ್ಯ ಮತ್ತು ಹೆದ್ದಾರಿಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು. ಹಂತಹಂತವಾಗಿ ಅಗತ್ಯವಿರುವಡೆ ಟ್ರಕ್ ಟರ್ಮಿನಲ್‌ಗಳನ್ನು ನಿರ್ಮಿಸಲಾಗುವುದು. ಟ್ರಕ್ ಟರ್ಮಿನಲ್ ನಿರ್ಮಾಣದಿಂದ ಕ್ಯಾಂಟೀನ್, ಬಿಡಿಭಾಗಗಳ ಅಂಗಡಿ, ಪೆಟ್ರೋಲ್ ಬಂಕ್, ಶೌಚಾಲಯ ಸೇರಿದಂತೆ ಒಂದು ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದರು.
ಸಾರಿಗೆ ಇಲಾಖೆಯಲ್ಲಿ ನಾನಾ ರೀತಿಯ ಸುಧಾರಣೆಗಳನ್ನು ತರಲಾಗುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಸಚಿವರಾದ ಆನಂದಸಿಂಗ್ ಅವರು ಮಾತನಾಡಿ, ಅಮರಾವತಿ ಬಳಿ 37 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಟ್ರಕ್ ಟರ್ಮಿನಲ್‌ನಲ್ಲಿ ಸುಸಜ್ಜಿತವಾದ ಮೂಲಸೌಕರ್ಯಗಳಿರಲಿದ್ದು, ಸ್ಥಿರ ನಿಲುಗಡೆ ಜಾಗ, ಗೋದಾಮುಗಳು ನಿರ್ಮಾಣ ಹಾಗೂ ಸಾರಿಗೆ ಸಂಬಂಧಿಸಿದ ಚಟುವಟಿಕೆಗೆ ಟ್ರಕ್ ಟರ್ಮಿನಲ್‌ನಲ್ಲಿ ನಿವೇಶನಗಳು ಮತ್ತು ಇತರೇ ಸೌಲಭ್ಯಗಳು ಕಲ್ಪಿಸಲಾಗುತ್ತದೆ. ಈ ಟರ್ಮಿನಲ್ ನಲ್ಲಿ ಡಾರ್ಮೆಟರಿ, ಸುಲಭ ಶೌಚಾಲಯ, ಕ್ಯಾಂಟೀನ್, ವೇರ್‌ಹೌಸ್, ಪೆಟ್ರೋಲ್ ಬಂಕ್, ವರ್ಕಶಾಪ್, ಬಿಡಿಭಾಗಗಳ ಅಂಗಡಿ ಮತ್ತು ವೇ ಬ್ರಿಡ್ಜ್ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.
35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಟ್ರಕ್ ಟರ್ಮಿನಲ್ ಅತ್ಯಂತ ಗುಣಮಟ್ಟದಿಂದ ನಿರ್ಮಿಸಬೇಕು. ಗುಣಮಟ್ಟದ ವಿಷಯದಲ್ಲಿ ಯಾವುದೇ ರೀತಿಯ ರಾಜೀ ಮಾಡಿಕೊಳ್ಳಲಾಗದು ಎಂದು ಗುತ್ತಿಗೆದಾರರಿಗೆ ಎಚ್ಚರಿಸಿದರು.
ಡಿ. ದೇವರಾಜ ಅರಸ್ ಟ್ರಕ್ ಟ್ರಮಿನಲ್ ಅಧ್ಯಕ್ಷ ಡಿ.ಎಸ್. ವೀರಯ್ಯ ಮಾತನಾಡಿ, ಸಾರಿಗೆ ಸಚಿವ ಶ್ರೀರಾಮುಲು ಅವರು ಸಾರಿಗೆ ಖಾತೆಯ ಜವಾಬ್ದಾರಿ ಹೊತ್ತ ತಕ್ಷಣ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ಷಿಪ್ರಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಂದು ಹೆದ್ದಾರಿಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡುವುದರಿಂದ ಅಪಘಾತಗಳನ್ನು ತಡೆಯಬಹುದಾಗಿದೆ ಎಂದರು.
ಟ್ರಕ್ ಟರ್ಮಿನಲ್‌ನಲ್ಲಿ 500ರಿಂದ 1 ಸಾವಿರ ಲಾರಿಗಳನ್ನು ನಿಲ್ಲಿಸಬಹುದಾಗಿದೆ. ಈ ಟರ್ಮಿನಲ್‌ಗಳಿಂದ ವಾಹನ ದಟ್ಟಣೆ, ಮಾಲಿನ್ಯ ತಡೆಯಬಹುದು ಎಂದರು. ಈ ಸಂದರ್ಭದಲ್ಲಿ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಎಸ್. ಶಂಕರಪ್ಪ, ನಗರಸಬೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ ಇನ್ನಿತರರಿದ್ದರು.