ಹೊಸದಿಲ್ಲಿ:ವಂಶಾಡಳಿತವನ್ನು ಬೆಂಬಲಿ ಸುವಂಥ ಟಿಆರ್‌ಎಸ್ ಮತ್ತು ಕಾಂಗ್ರೆಸ್ ತೆಲಂಗಾಣದಲ್ಲಿ ಫ್ರೆಂಡ್ಲಿ ಮ್ಯಾಚ್ ಆಡುತ್ತಿವೆ ಎಂದು ಮೋದಿ ಹೇಳಿದ್ದಾರೆ. ಮಂಗಳವಾರ ತೆಲಂಗಾಣದಲ್ಲಿ ತಮ್ಮ ಮೊದಲ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ ಅವರು, ಎರಡೂ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಮತ್ತು ಟಿಆರ್‌ಎಸ್ ವೋಟ್‌ಬ್ಯಾಂಕ್ ರಾಜಕೀಯ ಮಾಡುತ್ತಿವೆ. ಮತಬ್ಯಾಂಕ್ ಎನ್ನುವುದು ಅಭಿವೃದ್ಧಿಯನ್ನು ನಾಶ ಮಾಡುವ ಗೆದ್ದಲಿದ್ದಂತೆ. ಕಾಂಗ್ರೆಸ್‌ನಂತೆ ಯಾವುದೇ ಕೆಲಸ ಮಾಡದೆಯೂ ನನ್ನ ಕುಟುಂಬ ಪ್ರಗತಿ ಕಾಣಲಿದೆ ಎಂದು ತೆಲಂಗಾಣ ಸಿಎಂ ಭಾವಿಸಿದ್ದಾರೆ. ನಿಜಾಮಾಬಾದ್ ನೀರು, ವಿದ್ಯುತ್, ಸರಿಯಾದ ರಸ್ತೆಯಿಲ್ಲದೆ ಸಂಕಷ್ಟ ಅನುಭವಿಸುತ್ತಿದೆ. ನಿಜಾಮಾಬಾದ್ ಅನ್ನು ಲಂಡನ್ ಮಾಡುತ್ತೇನೆಂದು ಹೇಳಿದ್ದ ಕೆಸಿಆರ್ ಮಾಡಿದ್ದೇನು ಎಂದು ಪ್ರಶ್ನಿಸಿದ್ದಾರೆ. ಕೆಸಿಆರ್ ಲಂಡನ್‌ಗೆ ಹೋಗಿ, ಅಲ್ಲಿ 5 ವರ್ಷ ನೆಲೆಸಿ, ವಾಪಸಾಗಬೇಕು ಎಂದೂ ಸಲಹೆ ನೀಡಿದ್ದಾರೆ.
ಅಲ್ಲದೆ, ಅವರು ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಗೆ ಹೋಗಿದ್ದು ಒಳ್ಳೆಯದೇ ಆಯಿತು. ಕನಿಷ್ಠಪಕ್ಷ ನೀವು ಸ್ವಲ್ಪ ಬೇಗನೆ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಇದರಿಂದ ಸಾಧ್ಯವಾಯಿತು ಎಂದಿದ್ದಾರೆ ಪ್ರಧಾನಿ. ಡಿ.7ರಂದು ತೆಲಂಗಾಣದಲ್ಲಿ ಮತದಾನ ನಡೆಯಲಿದೆ.
ಕೆಸಿಆರ್ ತಿರುಗೇಟು: ಮೋದಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಕೆ.ಚಂದ್ರಶೇಖರ್ ರಾವ್, “ನೀವು ಹೇಗೆ ಇಂಥ ಸುಳ್ಳು ಹೇಳಿದಿರಿ? ಪ್ರಧಾನಿ ಹುದ್ದೆಯಲ್ಲಿ ಇದ್ದುಕೊಂಡು ಮತಕ್ಕಾಗಿ ಸುಳ್ಳು ಹೇಳುವುದು ಸರಿಯಲ್ಲ. ನಾನು ಚಂದ್ರಬಾಬು ನಾಯ್ಡು ಅಲ್ಲ, ನಾನು ಯಾರಿಗೂ ಹೆದರುವುದಿಲ್ಲ’ ಎಂದಿದ್ದಾರೆ. ಈ ಮೂಲಕ ಪ್ರಧಾನಿ ಮಾತ್ರವಲ್ಲದೆ, ಚಂದ್ರಬಾಬು ನಾಯ್ಡು ಅವರಿಗೂ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್‌ಗೆ ಅಡ್ಡಹೆಸರು ಎನ್ನುವುದು ರಾಜಕೀಯ ಬ್ರಾಂಡ್: ಪ್ರಧಾನಿ ಮೋದಿ ಅವರ ತಂದೆ ಯಾರು ಎಂಬ ಕಾಂಗ್ರೆಸ್ ನಾಯಕನ ಹೇಳಿಕೆಗೆ ಸಚಿವ ಜೇಟಿÉ ಫೇಸ್‌ಬುಕ್‌ನಲ್ಲಿ ತಿರುಗೇಟು ನೀಡಿದ್ದಾರೆ. “ಸರ್ದಾರ್ ಪಟೇಲ್ ಅವರ ತಂದೆ ಯಾರು’ ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಹಾಕಿರುವ ಜೇಟಿÉ, ಕಾಂಗ್ರೆಸ್ ಸರ್‌ನೆàಮ್ ಅನ್ನು ರಾಜಕೀಯ ಬ್ರಾಂಡ್ ಎಂದು ಪರಿಗಣಿ ಸುತ್ತದೆ. ಆ ಪಕ್ಷದಲ್ಲಿ ಪ್ರತಿಭೆ, ಸಾಮರ್ಥ್ಯಕ್ಕೆ ಬೆಲೆಯೇ ಇಲ್ಲ. ಸರ್ದಾರ್ ಪಟೇಲ್, ಸುಭಾಷ್‌ಚಂದ್ರ ಬೋಸ್‌ರಂಥ ದಿಗ್ಗಜರನ್ನೇ ಕಾಂಗ್ರೆಸ್ ನಿರ್ಲಕ್ಷಿಸಿದೆ. ಒಂದು ಕುಟುಂಬದ ಸದಸ್ಯರನ್ನು ಮಾತ್ರ ಜೀವಕ್ಕಿಂತಲೂ ಹೆಚ್ಚು ಎಂದು ಪರಿಗಣಿಸಲಾಗುತ್ತದೆ ಎಂದು ಕಾಂಗ್ರೆಸ್‌ಗೆ ಚುಚ್ಚಿದ್ದಾರೆ.
ಪ್ರಣಾಳಿಕೆ ಬಿಡುಗಡೆ: ರಾಜಸ್ಥಾನದಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 5 ವರ್ಷಗಳಲ್ಲಿ ಖಾಸಗಿ ವಲಯದಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿ, ಪ್ರತಿ ವರ್ಷ 30 ಸಾವಿರ ಹೊಸ ಸರಕಾರಿ ಉದ್ಯೋಗ, ಶಿಕ್ಷತರಾಗಿದ್ದೂ ನಿರುದ್ಯೋಗಿ ಆಗಿದ್ದರೆ ಭತ್ಯೆ ಸಹಿತ ಹಲವು ಆಶ್ವಾಸನೆಗಳನ್ನು ನೀಡಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಅಭ್ಯರ್ಥಿ!
ತೆಲಂಗಾಣದ ಗಜ್ವೇಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಂತೇರು ಪ್ರತಾಪ್ ರೆಡ್ಡಿ ಅವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ. ಮತದಾರರಿಗೆ ಹಂಚಲೆಂದು ಅವರ ಮನೆಯಲ್ಲಿ ನೋಟುಗಳ ಕಂತೆಗಳನ್ನು ಇಡಲಾಗಿದೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳ ತಂಡವು ರೆಡ್ಡಿ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಲೆಂದು ಆಗಮಿಸಿತ್ತು. ಆಗ ರೆಡ್ಡಿ ಬೆಂಬಲಿಗರು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಕೆಲವು ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ಅಷ್ಟರಲ್ಲಿ, ರೆಡ್ಡಿ ತಮ್ಮ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಅವರನ್ನು ತಡೆದಿದ್ದಾರೆ.
ಒಡಿಶಾಗೆ ಪ್ರಧಾನ್ ಸಿಎಂ ಅಭ್ಯರ್ಥಿ
ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಒಡಿಶಾಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರೇ ಬಿಜೆಪಿಯ ಸಿಎಂ ಅಭ್ಯರ್ಥಿ. ಹೀಗೆಂದು ಕೇಂದ್ರ ಸಚಿವ ಜುವಲ್ ಒರಾಮ್ ಘೋಷಿಸಿದ್ದಾರೆ. ಐಎಎಸ್ ಅಧಿಕಾರಿ ಅಪರಾಜಿತಾ ಸಾರಂಗಿ ಅವರು ಮಂಗಳವಾರ ಬಿಜೆಪಿ ಸೇರ್ಪಡೆಯಾಗಿದ್ದು, ಈ ಕಾರ್ಯಕ್ರಮದಲ್ಲಿ ಒರಾಮ್ ಈ ಘೋಷಣೆ ಮಾಡಿದ್ದಾರೆ. ಒಡಿಶಾಗೆ ಸಾರಂಗಿ ಅವರನ್ನೇ ಸಿಎಂ ಅಭ್ಯರ್ಥಿಯೆಂದು ಘೋಷಿಸಬಹುದು ಎಂಬ ಗುಸು ಗುಸು ಹಬ್ಬಿದ್ದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಹೊರಬಿದ್ದಿದೆ.