ವಿಧಾನಸಭೆ: ಸಹಕಾರ ಸಂಘಗಳಲ್ಲಿ ರೈತರು ಪಡೆದ ಸಾಲ ಮನ್ನಾ ಯೋಜನೆ ಪೂರ್ಣಗೊಳಿಸಲು ಮುಖ್ಯ ಮಂತ್ರಿ ಯಡಿಯೂರಪ್ಪ ಜೊತೆ ಚರ್ಚಿಸಿ ಮಾ.31 ರೊಳಗೆ ಗೊಂದಲ ನಿವಾರಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಸಹಕಾರ ಸಂಘಗಳಲ್ಲಿ ಸಾಲ ಪಡೆದಿರುವ 15.70 ಲಕ್ಷ ರೈತರಿಗೆ 7434.21 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಉಳಿದ 2.30,990 ರೈತರ ಪೈಕಿ 70,479 ರೈತರು ದಾಖಲೆ ಸಲ್ಲಿಸಿದ್ದಾರೆ. ಇದಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಬಾಕಿ ಉಳಿದಿರುವ 1.60 ಲಕ್ಷ ರೈತರ ಅರ್ಹತೆ ಗುರುತಿಸಲು ದಾಖಲೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು. ಮಧ್ಯ ಪ್ರವೇಶಿಸಿದ ವಿಧಾನಸಭಾಧ್ಯಕ್ಷ ರೈತ ರಿಗೆ ದಾಖಲೆ ನೀಡುವುದನ್ನು ಕಡ್ಡಾಯ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ. ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ಗಳ ಹೆಸರುಗಳಲ್ಲಿ ಸಣ್ಣ ಪುಟ್ಟ ವ್ಯತ್ಯಾಸವಾಗಿರುವುದರಿಂದಲೂ ಅರ್ಹ ರೈತರು ಸಾಲ ಮನ್ನಾ ವ್ಯಾಪ್ತಿಯಿಂದ ಹೊರಗುಳಿಯುವಂತಾಗಿದೆ. ಅರ್ಹ ರೈತರಿಗೆ ಷರತ್ತು ಸಡಿಲಗೊಳಿಸಿ ಸರ್ಕಾರದ ಯೋಜನೆ ರೈತರಿಗೆ ತಲುಪುವಂತೆ ಮಾಡಿ. ಇದರಿಂದ ರೈತರಿಗೂ ಅನುಕೂಲ ಸಹಕಾರ ಬ್ಯಾಂಕ್‌ಗಳೂ ಉಳಿಯುತ್ತವೆ ಎಂದು ಸಲಹೆ ನೀಡಿದರು.
ಷರತ್ತು ವಿಧಿಸಿದ್ದೇ ತಪ್ಪು: ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರೈತರ ಸಾಲ ಮನ್ನಾ ಮಾಡಲು ಸರ್ಕಾರ ಷರತ್ತು ವಿಧಿಸಿ ರೈತರಿಗೆ ಅನಗತ್ಯ ವಾಗಿ ತೊಂದರೆ ಕೊಡುತ್ತಿದೆ. ನಿಜವಾಗಲೂ ರೈತರಿಗೆ ಒಳ್ಳೆಯದನ್ನು ಮಾಡಬೇಕೆಂದಿದ್ದರೆ, ಏಕೆ ಷರತ್ತು ಹಾಕಿ ದ್ದೀರಿ ಎಂದು ಕುಮಾರಸ್ವಾಮಿ ಸರ್ಕಾರದ ಅವಧಿ ಯಲ್ಲಿನ ಸಾಲ ಮನ್ನಾ ಯೋಜನೆ ಬಗ್ಗೆ ಅಸಮಾಧಾನ ಹೊರ ಹಾಕಿದರು.
ನನ್ನ ಅವಧಿಯಲ್ಲಿ 50 ಸಾವಿರ ಮನ್ನಾ ಮಾಡಿದಾಗ ಯಾವುದೇ ರೈತರಿಗೂ ಷರತ್ತು ವಿಧಿಸಿರಲಿಲ್ಲ. ರೈತರಿಗೆ ನಿಜವಾಗಲೂ ಅನುಕೂಲ ಮಾಡಬೇಕೆಂದಿದ್ದರೆ, ಷರತ್ತು ಸಡಿಲಗೊಳಿಸಿ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು. ಈ ವೇಳೆ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಕೆಲವು ಸಹಕಾರ ಸಂಘಗಳಲ್ಲಿ ರೈತರಿಗೆ ಗೊತ್ತಿಲ್ಲದೇ ಸಾಲ ತೆಗೆದುಕೊಳ್ಳಲಾಗಿರುತ್ತದೆ. ಹೀಗಾಗಿ ತಮ್ಮ ಹೆಸರಿನಲ್ಲಿ ಸಾಲ ಇದೆ ಎನ್ನುವುದು ರೈತರಿಗೆ ಗೊತ್ತಾಗಲಿ ಎನ್ನುವ ಕಾರ ಣಕ್ಕೆ ಈ ರೀತಿ ಮಾಡಲಾಗಿತ್ತು ಎಂದು ಮೈತ್ರಿ ಸರ್ಕಾ ರದ ಕಾರ್ಯಕ್ರಮ ಸಮರ್ಥಿಸಿಕೊಳ್ಳಲು ಮುಂದಾ ದರು. ಆದರೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಿದ್ದರಾಮಯ್ಯ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಪ್ರಶ್ನೆ ಕೇಳಿದ ಶಿವಾನಂದ ಪಾಟೀಲ್, ರಾಜ್ಯ ಸರ್ಕಾರ ಸಾಲ ಮನ್ನಾ ಘೋಷಣೆ ಮಾಡಿ ಜಿಲ್ಲಾ ಸಹಕಾರ ಬ್ಯಾಂಕ್‌ಗಳಿಗೆ ಹಣ ಬಿಡುಗಡೆ ಮಾಡದೇ ಇರುವುದರಿಂದ ಹೊಸದಾಗಿ ರೈತರಿಗೆ ಸಾಲ ನೀಡದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಬಾರ್ಡ್‌ನಿಂದ ಸಾಲ ಪಡೆಯಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಸಹಕಾರ ಬ್ಯಾಂಕ್‌ಗಳು ಸಂಕಷ್ಟ ಎದುರಿಸುವಂತಾಗುತ್ತದೆ ಎಂದು ಹೇಳಿದರು.