Advertisement

ಆನ್‌ಲೈನ್‌ ಕ್ಲಾಸ್‌ಗಳೂ,ಮುಗಿಯದ ರಗಳೆಗಳೂ..

05:46 PM Sep 09, 2020 | Suhan S |

ನನ್ನ ಮಗಳೀಗ ಮೂರನೇ ತರಗತಿ. ಓದುವುದನ್ನು ಬಿಟ್ಟು ಮಿಕ್ಕೆಲ್ಲವನ್ನೂ ಮಾಡುವ ಅವಳ ಚಟುವಟಿಕೆ ಗಳಿಂದ ಕೆಲವೊಮ್ಮೆ ರೋಸಿ ಹೋಗುವುದುಂಟು. ಆದರೆ, ಏನೂ ಮಾಡಲು ಸಾಧ್ಯವಿಲ್ಲ ಅಂದುಕೊಂಡು ಸುಮ್ಮನಾಗುತ್ತೇನೆ. ಇಂಥ ಸಂದರ್ಭದಲ್ಲೇ ಪುಟ್ಟ ಮಕ್ಕಳಿಗೂ ಆನ್‌ಲೈನ್‌ ತರಗತಿಗಳು ಆರಂಭವಾಗಿದೆ. ಮೊಬೈಲ್ ನಲ್ಲಿ ಟೀಚರ್‌ಮತ್ತು ತನ್ನ ಗೆಳೆಯರನ್ನು ನೋಡಬಹುದು ಎನ್ನುವ ಅವಳ ಉತ್ಸಾಹ, ನಾಲ್ಕು ದಿನಕ್ಕೇ ಇಳಿದಿದೆ.

Advertisement

ಈಗ ಆನ್‌ಲೈನ್‌ ಕ್ಲಾಸ್‌ ಎಂದರೆ ಸಾಕು; ಮಗಳು ಮುಖ ಕಿವಿಚುತ್ತಾಳೆ. ತರಗತಿ ಶುರುವಾದಾಗ ಮುಖ ತೋರಿಸಿ, ನಂತರ ಫ್ರಂಟ್‌ ವಿಡಿಯೋ ಆಫ್ ಮಾಡಿ ಘಳಿಗೆಗೊಮ್ಮೆ ಓಡಾಡುತ್ತಿರುತ್ತಾಳೆ. ಟೀಚರನ್ನು ಯಾಮಾರಿಸುವ ಕಲೆ ಮಕ್ಕಳಿಗೆ ಒಲಿದುಬಿಟ್ಟಿದೆ! ಇದರ ನಡುವೆಯೂ ಕೆಲವೊಂದು ಶಿಕ್ಷಕರ ಪಾಠಗಳನ್ನು ಆಸಕ್ತಿಯಿಂದ ಕೇಳುತ್ತಾಳೆ. ಇಂಥ ಸಂದರ್ಭದಲ್ಲಿ ನನ್ನನ್ನು ಕಾಡುವ ಪ್ರಶ್ನೆ: ಮಕ್ಕಳಿಗೆ ಮತ್ತು ಶಿಕ್ಷಕರ ಪಾಲಿಗೆ ಆನ್‌ಲೈನ್‌ ಕ್ಲಾಸ್‌ಗಳು ಹೊರೆ ಅನಿಸುತ್ತಿವೆಯಾ?

ವಿಶಾಲವಾದ ಕ್ಲಾಸ್‌ ರೂಮುಗಳಲ್ಲಿ ತುಂಟ ಮಕ್ಕಳನ್ನು ಗಮನಿಸುತ್ತಾ, ಅವರನ್ನು ಗದರುತ್ತಾ, ಅವರ ಇಡೀ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ ಪಾಠ ಮಾಡುತ್ತಿದ್ದ ಶಿಕ್ಷಕರಿಗೆ, ಆನ್‌ಲೈನ್‌ ಕ್ಲಾಸ್‌ಗಳು ಬೋರ್‌ ಹೊಡೆಸಿರಬಹುದು. ಹಾಗೆಯೇ, ಯುನಿಫಾರ್ಮ್ ಹಾಕಿಕೊಂಡು ಕಂಪ್ಯೂಟರ್‌ ಮುಂದೆ ಕೂರುವುದು ಶಿಕ್ಷೆ ಎಂದು ಮಕ್ಕಳಿಗೂ ಅನಿಸಿರಬಹುದು.

ಯಾಕೆಂದರೆ, ಮೊಬೈಲ್‌ ಎಂದರೆ ಆಟದ ವಸ್ತು, ವಿಡಿಯೋಕಾಲ್ ಗಳೆಂದರೆ ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಮಾವ ಮುಂತಾದ ಅತ್ಯಾಪ್ತ ಬಂಧುಗಳನ್ನು ನೋಡಲು ಇರುವ ಅನುಕೂಲ ಎಂದು ನಂಬಿದ್ದ ಮಕ್ಕಳಿಗೆ, ವಿಡಿಯೊ ಕಾಲ್‌ ಮೂಲಕ ಪಾಠ ಕೇಳಲು ಹಿಂಸೆ ಅನ್ನಿಸಿರಬೇಕು. ನೆಟ್‌ವರ್ಕ್‌ ಸಮಸ್ಯೆ, ಮಧ್ಯೆ ಮಧ್ಯೆ ಮಾತಾಡುವ ಮಕ್ಕಳಿಂದ ಇತರ ಮಕ್ಕಳಿಗೂ ಪಾಠ ಕೇಳಲಾಗದ ಕಿರಿಕಿರಿ, ಮಕ್ಕಳನ್ನು ನಿಯಂತ್ರಿಸುವಲ್ಲಿ ಸೋತು ಕೊನೆಗೆ ತಮ್ಮ ಪಾಡಿಗೆ ತಾವು ಪಾಠ ಮುಗಿಸಿಬಿಡುವುದು, ಸಣ್ಣಪರದೆಯಲ್ಲಿ ಆ ಕ್ಷಣಕ್ಕೆ ಗುರುತಿಸಲು ಸಾಧ್ಯವಾಗುವ ಮಕ್ಕಳ ಹೆಸರು ಕರೆದು ಪಾಠ ಮಾಡುವಾಗ, ಮಿಸ್‌ ನನ್ನ ಹೆಸರು ಕರೆಯಲೇ ಇಲ್ಲ ಎಂಬ ಉಳಿದ ಮಕ್ಕಳ ಮುನಿಸು… ಇಂತಹ ಅಸಂಗತಗಳು ಬೇಕಾದಷ್ಟು.

ಎರಡು ಮಕ್ಕಳಿರುವ ಮನೆಯ ವರ ಪಾಡಂತೂ ದೇವರಿಗೇ ಪ್ರೀತಿ. ಇಬ್ಬರಿಗೂ ಅವರವರ ಸಮಯಕ್ಕೆ ತಕ್ಕಂತೆ ಮೊಬೈಲ್‌ ಹೊಂದಿಸುವುದೇ ಕಷ್ಟ. ಇಬ್ಬರ ತರಗತಿಗಳು ಒಂದೇ ಸಮಯ  ದಲ್ಲಿದ್ದರಂತೂ ಮತ್ತೂಬ್ಬರು ತರಗತಿಯನ್ನು ತಪ್ಪಿಸಿಕೊಳ್ಳು ವುದೇ ಆಗುತ್ತದೆ. ಈಗಿನ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ, ಸ್ಮಾರ್ಟ್‌ ಫೋನ್‌ ಖರೀದಿಸುವುದು ಮಧ್ಯಮ ವರ್ಗದ ಜನರಿಗೆ ಕಷ್ಟದ ಸಂಗತಿಯೇ.

Advertisement

ಹಾಗಂತ ಆನ್‌ಲೈನ್‌ ಕ್ಲಾಸ್‌ಗಳ ಅಗತ್ಯವೇ ಇಲ್ಲ ಎಂಬುದು ನನ್ನ ಮಾತಿನ ಅರ್ಥವಲ್ಲ. ಕೋವಿಡ್ ಕಾರಣಕ್ಕೆ ಎಲ್ಲರೂ ಮನೆಯಲ್ಲೇ ಇರುವ ಈ ಸಂದರ್ಭದಲ್ಲಿ, ತರಗತಿಗಳು ಇಲ್ಲದಿದ್ದರೆ ಮಕ್ಕಳಿಗೆ ಅಂಕುಶ ಹಾಕುವುದು ಬಹಳ ಕಷ್ಟ. ಆನ್‌ಲೈನ್‌ ತರಗತಿ ಇದೆ ಎಂಬ ಕಾರಣಕ್ಕಾದರೂ ಮಕ್ಕಳು ಬೇಗ ಏಳುವ, ಹೋಂ ವರ್ಕ್‌ ಮಾಡುವ ಶಿಸ್ತು ಬೆಳಿಸಿಕೊಂಡಿದ್ದಾರೆ ಎಂಬುದು ನಿಜ. ಅದೇ ಸಂದರ್ಭದಲ್ಲಿ, ಆನ್‌ಲೈನ್‌ ಕ್ಲಾಸ್‌ ಶುರುವಾಗುವ ಹೊತ್ತಿಗೆ ಮಕ್ಕಳನ್ನು ರೆಡಿ ಮಾಡುವುದು, ಆನಂತರ

ಅವರನ್ನು ಸಂಭಾಳಿಸುವುದು, ಇದರ ಮಧ್ಯೆಯೇ ಮನೆಯ ಉಳಿದ ಕೆಲಸ ನಿರ್ವಹಿಸುವುದು… ಇವುಗಳ ಮಧ್ಯೆ, ಮನೆಮನೆಯ ಅಮ್ಮಂದಿರು ಹೈರಾಣಾಗಿ ಹೋಗುತ್ತಿದ್ದಾರೆ ಎಂಬುದೂ ನಿಜ. ಆದಷ್ಟು ಬೇಗ ಪರಿಸ್ಥಿತಿ ತಿಳಿಯಾಗಿ ಮಕ್ಕಳು ಕುಣಿಯುತ್ತಾ ಶಾಲೆಗೆ ಹೋಗುವ, ಗೆಳೆಯರೊಂದಿಗೆ ಹರಟುತ್ತಾ ಮನೆಗೆ ಬರುವ ಮೊದಲಿನ ದಿನಗಳು ಬರಲಿ.

 

-ಕವಿತಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next