Advertisement

ಬಿಸಿಲ ಬೇಗೆಯಿಂದ ಸಾಯುತ್ತಿವೆ ಕೋಳಿಗಳು; ದುಬಾರಿಯಾದ ಕೋಳಿ ಮಾಂಸ

02:36 PM Apr 29, 2019 | keerthan |

ಬೆಳ್ತಂಗಡಿ,: ಬಿಸಿಲಿನ ತಾಪಮಾನ ಏರಿಕೆಯ ಪರಿಣಾಮ ಕೋಳಿ ಸಾಕಣೆ ಉದ್ಯಮವೂ ಸಂಕಷ್ಟಕ್ಕೀಡಾಗಿದೆ. ಸಹಜಕ್ಕಿಂತ ಪ್ರತಿ ಸಾವಿರಕ್ಕೆ 20ರಿಂದ 30 ಕೋಳಿಗಳು ಹೆಚ್ಚುವರಿಯಾಗಿ ಸಾಯುತ್ತಿದ್ದು, ಇದರಿಂದ ಸಾಕಾಣಿಕೆದಾರರು ನಷ್ಟಕ್ಕೊಳಗಾಗುವುದರ ಜತೆಗೆ ಕೋಳಿ ಮಾಂಸವೂ ದುಬಾರಿಯಾಗಿದೆ.

Advertisement

ಬ್ರಾಯ್ಲರ್‌ ಕೋಳಿಗಳು ಸಾಮಾನ್ಯವಾಗಿ 4ರಿಂದ 6 ವಾರಗಳ ಕಾಲ ಬದುಕುತ್ತವೆ. ಬೇರೆ ಅವಧಿಗಳಲ್ಲಿ ಬ್ರಾಯ್ಲರ್‌ ಕೋಳಿಗಳ ಮರಣ ಪ್ರಮಾಣ ಶೇ.3-4 ಇದ್ದರೆ ಮಾರ್ಚ್‌ನಿಂದ ಮೇ ಅಂತ್ಯದವರೆಗೆ ಶೇ.5- 6ಕ್ಕೇರುತ್ತದೆ. ಇದರಿಂದ ಪ್ರಸ್ತುತ ಮಾಂಸದ ಕೋಳಿಯ ಧಾರಣೆ 130 ರೂ. (ಮಾಂಸ ಕೆಜಿಗೆ 190-200 ರೂ.)ಗಳಿಗೆ ತಲುಪಿದೆ.

ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ತಾಪಮಾನ 36-37 ಡಿಗ್ರಿ ಸೆ. ಇದ್ದರೂ ವಾತಾವರಣದಲ್ಲಿ ಆದ್ರìತೆ ಇರುವುದರಿಂದ ಒತ್ತಡ ತಾಳಲಾರದೆ ಸಾಯುವುದು ಹೆಚ್ಚು ಎನ್ನುತ್ತಾರೆ ಕೋಳಿ ಸಾಕಣೆದಾರರು.

ಮೋಡ ಕವಿದ ವಾತಾವರಣ ಇದ್ದು, ಮಳೆ ಬರುತ್ತದೆ ಎಂಬ ಸ್ಥಿತಿ ಇದ್ದಾಗಲೂ ಕೋಳಿ ಮರಣ ಪ್ರಮಾಣ ಹೆಚ್ಚು. ಸಾಯುವ ಪ್ರಮಾಣ ಅಪರಾಹ್ನ 2ರಿಂದ ಸಂಜೆ 5ರ ಅವಧಿಯಲ್ಲಿ ಹೆಚ್ಚು. ಇತರ ಜಿಲ್ಲೆಗಳಲ್ಲಿ 40 ಡಿಗ್ರಿ ಸೆ. ತಾಪಮಾನ ಇದ್ದಾಗಲೂ ನೀರು ಸಿಂಪಡಿಸಿದರೆ ಬದುಕುತ್ತವೆ. ಆದರೆ ಕರಾವಳಿಯಲ್ಲಿ ಸಾಧ್ಯತೆ ಕಡಿಮೆ ಎನ್ನುವುದು ವೈದ್ಯರ ಮಾತು.

ಫಾರ್ಮ್ಗಳಲ್ಲಿ ಏನು ಮಾಡಬಹುದು?
ಛಾವಣಿಗೆ ಹುಲ್ಲು ಅಥವಾ ಅಡಿಕೆ ಸೋಗೆ ಹಾಸಿ ನೀರು ಸಿಂಪಡಿಸಿದರೆ ಒಳಭಾಗ ತಂಪಾಗುತ್ತದೆ. ಜತೆಗೆ ಬಿಸಿಲು ಬೀಳದಂತೆ ನೋಡಿಕೊಳ್ಳಬೇಕು. ಕೋಳಿಗಳ ಮೇಲೆ ತುಂತುರು ನೀರು ಸಿಂಪಡಿಸುವ ಫಾಗರ್‌ ಅಳವಡಿಸಬಹುದು. ಇದು ಕರಾವಳಿಗೆ ಸೂಕ್ತವಲ್ಲದಿದ್ದರೂ ಸುಮಾರು 20 ಕಿ.ಮೀ. ಒಳನಾಡಿನಲ್ಲಿ ಕೈಗೊಳ್ಳಬಹುದು. ಫ್ಯಾನ್‌ ಕೂಡ ಅಳವಡಿಸಬಹುದು. ಆದರೆ ಕೋಳಿಗಳು ಫ್ಯಾನ್‌ ಗಾಳಿಗೆ ಹೊಂದಿಕೊಂಡು ವಿದ್ಯುತ್‌ ಪೂರೈಕೆ ನಿಂತಾಗ ತೊಂದರೆಗೀಡಾಗುವ ಅಪಾಯ ಇದೆ.

Advertisement

25-30 ಲಕ್ಷ ಕೋಳಿಗಳು
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಸ್ತುತ ಸುಮಾರು 2 ಸಾವಿರ ಮಂದಿ ಬ್ರಾಯ್ಲರ್‌ ಕೋಳಿ ಸಾಕಣೆದಾರರು ಇದ್ದು, 25ರಿಂದ 30 ಲಕ್ಷ ಕೋಳಿಗಳನ್ನು ಸಾಕುತ್ತಿದ್ದಾರೆ. ಈ ಜಾತಿಯ ಕೋಳಿಗಳಿಗೆ 23-33 ಡಿಗ್ರಿ ಸೆ. ತಾಪಮಾನ ಅನುಕೂಲಕರ, 36 ಡಿ. ಸೆ. ದಾಟಿದರೆ ಕಷ್ಟ. ಆದರೂ ಈ ಸಂದರ್ಭದಲ್ಲಿ ಧಾರಣೆ ಹೆಚ್ಚುವುದರಿಂದ ಫಾರ್ಮ್ ನಡೆಸುವವರು ತಡೆದುಕೊಳ್ಳುತ್ತಾರೆ. ಪ್ರಸ್ತುತ ಸಾಕಣೆದಾರರಿಗೆ ಕೆ.ಜಿ.ಗೆ 5ರಿಂದ 7 ರೂ. ಲಭ್ಯವಾಗುತ್ತಿದೆ. ನೀರಿಲ್ಲದೆ ಅಥವಾ ರೋಗರುಜಿನ ಬಂದಾಗ ಮಾತ್ರ ಕೋಳಿ ಸಾಕಣೆ ನಿಲ್ಲಿಸುತ್ತಾರೆ ಎನ್ನುತ್ತಾರೆ ಪಶು ವೈದ್ಯರು.

23ರಿಂದ 33 ಡಿ.ಸೆ. ಸುರಕ್ಷಿತ
ಕೋಳಿ ಮರಿಗಳಿಗೆ ಮೊದಲ 15ರಿಂದ 20ದಿನಗಳ ಕಾಲ ಸುಮಾರು 32 ರಿಂದ 34 ಡಿ.ಸೆ. ತಾಪಮಾನ ಅಗತ್ಯ. ಬಳಿಕ 23ರಿಂದ 33 ಡಿಗ್ರಿ ಸೆ. ಸುರಕ್ಷಿತ. ಕರಾವಳಿ ಭಾಗದಲ್ಲಿ ಅಕ್ಟೋಬರ್‌ನಿಂದ ಜನವರಿಯವರೆಗೆ ಕೋಳಿ ಸಾಕಣೆಗೆ ಉತ್ತಮ ವಾತಾವರಣ. ಮಳೆಗಾಲದಲ್ಲಿ ಕೊಂಚ ಕಷ್ಟ, ಬೇಸಗೆಯಲ್ಲಿ ಸಾಯುವ ಸಾಧ್ಯತೆಯೇ ಹೆಚ್ಚು.
ಡಾ| ವಸಂತಕುಮಾರ್‌ ಶೆಟ್ಟಿ, , ವಿಜ್ಞಾನಿ-1, ಪಶು ರೋಗ ತನಿಖಾ ಮತ್ತು ಮಾಹಿತಿ ಕೇಂದ್ರ, ಮಂಗಳೂರು

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next