ಇಂದೋರ್:ಸಾಮಾನ್ಯವಾಗಿ ವಾಡಿಕೆಯಂತೆ ಕೋಳಿ ಕೂಗಿದರೆ ಬೆಳಗಾಗುವುದು ಎಂಬ ನಾಣ್ನುಡಿ ಇದೆ. ಇಂದಿಗೂ ಕೆಲವೆಡೆ ಕೋಳಿ ಕೂಗಿನಿಂದಲೇ ಜನರು ಬೆಳಗ್ಗೆ ಎದ್ದೇಳುವ ರೂಢಿ ಇದೆ. ಆದರೆ ಹುಂಜ ಕೂಗುವುದರಿಂದ ತನಗೆ ಕಿರಿಕಿರಿಯಾಗುತ್ತಿದೆ ಎಂದು ಆರೋಪಿಸಿ ವೈದ್ಯರೊಬ್ಬರು ನೆರೆಹೊರೆಯವರ ವಿರುದ್ಧ ದೂರು ನೀಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಇದನ್ನೂ ಓದಿ:ಟೀಂ ಇಂಡಿಯಾಗೆ ಕರುಣೆ ತೋರಿದ ವರುಣ: ಅಂತಿಮ ಪಂದ್ಯವೂ ರದ್ದು; ಕಿವೀಸ್ ಗೆ ಸರಣಿ
ನಗರದ ಪಲಾಸಿಯಾ ಪ್ರದೇಶದಲ್ಲಿ ವಾಸವಾಗಿರುವ ವೈದ್ಯರೊಬ್ಬರು, ನೆರೆಹೊರೆಯವರ ಕೋಳಿ ಕೂಗುವುದರಿಂದ ತಮಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದು, ಈ ವಿಚಾರದಲ್ಲಿ ಎರಡೂ ಕಡೆಯವರನ್ನೂ ಕರೆಯಿಸಿ ಮಾತುಕತೆ ನಡೆಸಲು ಪ್ರಯತ್ನಿಸಲಾಗಿದೆ. ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದರೆ, ನಂತರ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಲಾಸಿಯಾ ಪ್ರದೇಶದ ಗ್ರೇಟರ್ ಕೈಲಾಶ್ ಆಸ್ಪತ್ರೆಯ ಸಮೀಪ ವಾಸವಾಗಿರುವ ಡಾಕ್ಟರ್ ಅಲೋಕ್ ಮೋದಿ ಎಂಬವವರು ಈ ಬಗ್ಗೆ ಲಿಖಿತ ದೂರು ನೀಡಿರುವುದಾಗಿ ಪಲಾಸಿಯಾ ಪೊಲೀಸ್ ಠಾಣಾಧಿಕಾರಿ ಸಂಜಯ್ ಸಿಂಗ್ ಬೈನ್ಸ್ ತಿಳಿಸಿದ್ದಾರೆ.
ತನ್ನ ಮನೆಯ ಸಮೀಪ ಇರುವ ಮಹಿಳೆಯೊಬ್ಬರು ಕೋಳಿ ಮತ್ತು ನಾಯಿಗಳನ್ನು ಸಾಕಿದ್ದು, ಪ್ರತಿದಿನ ಮುಂಜಾನೆ 5ಗಂಟೆಗೆ ಕೂಗುವುದರಿಂದ ನಿದ್ದೆಗೆ ಅಡ್ಡಿಯುಂಟಾಗುತ್ತಿದೆ ಎಂದು ಅಲೋಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆಸ್ಪತ್ರೆಯಿಂದ ರಾತ್ರಿ ಮನೆಗೆ ಬರುವಾಗ ತಡವಾಗುತ್ತದೆ. ಹೀಗಾಗಿ ಮುಂಜಾನೆ ಕೋಳಿ ಕೂಗುವುದರಿಂದ ನಿದ್ದೆಗೆ ತೊಂದರೆಯಾಗುತ್ತದೆ ಎಂದು ದೂರಿದ್ದಾರೆ. ಪೊಲೀಸರು ಕೂಡಲೇ ಎರಡು ಕಡೆಯವರನ್ನು ಕರೆಯಿಸಿ ಸಮಸ್ಯೆಯನ್ನು ಬಗೆಹರಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.