Advertisement

ಬಾಕಿ ಇರುವ ಇಂಗ್ಲಿಷ್‌ಗೆ ಮತ್ತೆ ತೊಂದರೆ !

02:28 AM Jun 16, 2020 | Sriram |

ಬೆಂಗಳೂರು: ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆಗೆ ಕೇಂದ್ರ ಬದಲಾವಣೆ ಮಾಡಿಕೊಂಡ ಹಲವು ವಿದ್ಯಾರ್ಥಿಗಳಿಗೆ ಇಲಾಖೆ ಶಾಕ್‌ ನೀಡಿದೆ. ಅಂತರ್‌ ಜಿಲ್ಲಾ ವ್ಯಾಪ್ತಿಯಲ್ಲಿ ಪರೀಕ್ಷಾ ಕೇಂದ್ರ ಬದಲಿಸಿಕೊಳ್ಳಲು ಬಯಸಿದ್ದ ಹಲವು ವಿದ್ಯಾರ್ಥಿಗಳಿಗೆ ತಾಂತ್ರಿಕ ಸಮಸ್ಯೆಯಿಂದ ಬದಲಾವಣೆ ಸಾಧ್ಯವಾಗಿಲ್ಲ. ಇಂತಹ ವಿದ್ಯಾರ್ಥಿಗಳು ಕೂಡ ಈಗ ಮೂಲ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ಬರೆಯಬೇಕು. ಇದರಿಂದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿರುವ ವಿದ್ಯಾರ್ಥಿ ಗಳು ಮೂಲ ಕೇಂದ್ರಗಳಿಗೇ ಹೋಗಿ ಇಂಗ್ಲಿಷ್‌ ಪರೀಕ್ಷೆ ಎದುರಿಸಬೇಕಾದ ಸ್ಥಿತಿ ಬಂದಿದೆ.

Advertisement

ರಾಗ ಬದಲಿಸಿದ ಇಲಾಖೆ
ಆರಂಭದಲ್ಲಿ ಪಿಯು ಇಲಾಖೆ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಕೇಂದ್ರ ಬದಲಾವಣೆಗೆ ಅವಕಾಶ ನೀಡಿತ್ತು. ಈಗ ಜಿಲ್ಲಾ ವ್ಯಾಪ್ತಿಯಲ್ಲಿ ಕೇಂದ್ರ ಬದಲಿಸಿರುವ ವಿದ್ಯಾರ್ಥಿಗಳು ಈ ಹಿಂದೆ ಐದು ಪರೀಕ್ಷೆ ಬರೆದಿರುವಲ್ಲಿಗೇ ಹೋಗಬೇಕು. ಹಾಗೆಯೇ ಅಂತರ್‌ ಜಿಲ್ಲೆಗೆ ಸಂಬಂಧಿಸಿ ತಾಂತ್ರಿಕ ಕಾರಣದಿಂದ ಪರೀಕ್ಷಾ ಕೇಂದ್ರ ಬದಲಾಗದಿದ್ದ ವಿದ್ಯಾರ್ಥಿಗಳು ಮೂಲ ಕೇಂದ್ರದಲ್ಲೇ ಪರೀಕ್ಷೆ ಎದುರಿಸಬೇಕು ಎಂದು ಅಧಿಕೃತ ಸಂದೇಶ ರವಾನಿಸಿದೆ.

ಜಿಲ್ಲೆಯ ಒಳಗೆ ಪರೀಕ್ಷಾ ಕೇಂದ್ರ ಬದಲಾಯಿಸಿದ ವಿದ್ಯಾರ್ಥಿಗಳು ಈ ಹಿಂದಿನ ಕೇಂದ್ರದಲ್ಲೇ ಇಂಗ್ಲಿಷ್‌ ಪರೀಕ್ಷೆ ಬರೆಯಬೇಕು ಎಂದು ಇಲಾಖೆ ಸೂಚನೆ ನೀಡಿದೆ.

ಮೂಲ ಪ್ರವೇಶ ಪತ್ರ ಕಡ್ಡಾಯ
ಹೊಸ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲಿರುವ 18,254 ವಿದ್ಯಾರ್ಥಿಗಳು ಮೂಲ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಕೊಂಡೊಯ್ಯಲೇ ಬೇಕು. ಹೊಸ ಪ್ರವೇಶ ಪತ್ರ ನೀಡಿಲ್ಲ, ಗುರುತಿನ ಚೀಟಿಯನ್ನಷ್ಟೇ ನೀಡಲಾಗಿದೆ. ಅದರಲ್ಲಿ ಫೋಟೋ ಇಲ್ಲ. ಕೇಂದ್ರ ಬದಲಾವಣೆ ಸಂದರ್ಭದಲ್ಲಿ ಆನ್‌ಲೈನ್‌ ಮೂಲಕ ಈ ಗುರುತಿನ ಚೀಟಿ ಡೌನ್‌ಲೋಡ್‌ಗೆ ಅವಕಾಶ ನೀಡಲಾಗಿದೆ. ಹೊಸ ಕೇಂದ್ರಕ್ಕೆ ಸಂಬಂಧಿಸಿದ ಗುರುತಿನ ಚೀಟಿ ಮತ್ತು ಮೂಲ ಪ್ರವೇಶ ಪತ್ರ ಈ ಎರಡನ್ನೂ ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯಬೇಕು. ಪರಿಶೀಲನೆ ವೇಳೆ ಎರಡನ್ನೂ ತೋರಿಸಬೇಕು ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪರೀಕ್ಷಾ ಕೇಂದ್ರ ಬದಲಾವಣೆ
ಬಯಸಿದ್ದ ವಿದ್ಯಾರ್ಥಿಗಳು, ತಾಂತ್ರಿಕ ಕಾರಣ ಗಳಿಂದ ಕೇಂದ್ರದ ಬದಲಾವಣೆ ಆಗದಿದ್ದಲ್ಲಿ ಅಥವಾ ಬದಲಾವಣೆಗೊಂಡ ಪರೀಕ್ಷಾ ಕೇಂದ್ರಕ್ಕೆ ಹೋಗಲು ಅಸಾಧ್ಯವಾದರೆ ಮೂಲ ಪರೀಕ್ಷಾ ಕೇಂದ್ರ ದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.
-ಕನಗವಲ್ಲಿ, ಪಿಯು ಇಲಾಖೆ ನಿರ್ದೇಶಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next