ಹೊನ್ನಾವರ: ಹೊನ್ನಾವರ ಪೋರ್ಟ್ ಕಂಪನಿ ಹೆಸರಿನಲ್ಲಿ ಆಂಧ್ರ ಗುತ್ತಿಗೆದಾರರೊಬ್ಬರು ಶರಾವತಿ ಸಂಗಮದ ಅಳವೆ ಸಹಿತ 100 ಎಕರೆ ಭೂಮಿ ಗುತ್ತಿಗೆ ಪಡೆದು ಬಂದರು ನಿರ್ಮಾಣ ಆರಂಭಿಸಿದ್ದಾರೆ.
ಮೀನುಗಾರರಿಗೆ ತೊಂದರೆ ಇಲ್ಲದಂತೆ ಅವರಿಗೆ ಉದ್ಯೋಗಕೊಟ್ಟು, ಬಂದರು ಮಾಡುವುದಾಗಿ ಕೊಟ್ಟ ಭರವಸೆಯನ್ನು ಕಂಪನಿ ಈಡೇರಿಸಿಲ್ಲ. ಅಲ್ಲದೇ ಮೀನುಗಾರಿಕೆಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಆರೋಪಿಸಿ ತಾಲೂಕಿನ ಎಲ್ಲ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಕಚೇರಿಗೆ ಬಂದಾಗ ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ಮಾಜಿ ಶಾಸಕ ಮಂಕಾಳು ವೈದ್ಯ ಮೀನುಗಾರರ ಅಹವಾಲನ್ನು ಕೇಳಿ ತಕ್ಕ ಪರಿಹಾರ ಒದಗಿಸುತ್ತೇವೆ. ಮಾತ್ರವಲ್ಲ ಅಲ್ಲಿಯವರೆಗೆ ಕೆಲಸ ನಿಲ್ಲಿಸುತ್ತೇವೆ ಎಂದು ಭರವಸೆಕೊಟ್ಟರು. ಉಪವಿಭಾಗಾಧಿಕಾರಿ ಸಾಜಿದ್ ಮುಲ್ಲಾ, ತಹಶೀಲ್ದಾರ್ ವಿವೇಕ ಶೇಣಿÌ ಮೊದಲಾದವರು ಉಪಸ್ಥಿತರಿದ್ದರು.
ಮೀನುಗಾರರು ಕೊಟ್ಟ ಮನವಿಯಲ್ಲಿ ಹೀಗೆ ಹೇಳಲಾಗಿದೆ, ಅಳವೆ ಸರಿಪಡಿಸುತ್ತೇವೆ, ಮೀನುಗಾರರನ್ನು ಒಕ್ಕಲೆಬ್ಬಿಸುವುದಿಲ್ಲ, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಮತ್ತು ಮೀನುಗಾರಿಕೆಗೆ ಧಕ್ಕೆ ಉಂಟುಮಾಡುವ ಯಾವುದೇ ಚಟುವಟಿಕೆಯನ್ನು ಮಾಡುವುದಿಲ್ಲ, ಸ್ಥಳೀಯರಿಗೆ ಉದ್ಯೋಗ ಕೊಡುತ್ತೇವೆ. ಪ್ರತ್ಯೇಕ ರಸ್ತೆ ಮಾಡಿಕೊಳ್ಳುತ್ತೇವೆ ಎಂದೆಲ್ಲಾ ಭರವಸೆಕೊಟ್ಟು ಯಾವುದೇ ಭರವಸೆ ಈಡೇರಿಸದೆ ಬೃಹತ್ ಯಂತ್ರ ಬಳಸಿ ಇವರ ಬಂದರು ನಿರ್ಮಿಸಲು, ಹೂಳನ್ನು ಶರಾವತಿಗೆ ಸುರಿಯಲಾಗುತ್ತಿದೆ, ಮೀನುಗಾರಿಕಾ ರಸ್ತೆಯನ್ನೇ ಇವರು ಬಳಸುತ್ತಿದ್ದು ರಸ್ತೆ ಹಾಳಾಗಿ ಧೂಳು ತಿನ್ನುವಂತಾಗಿದೆ. ಆದ್ದರಿಂದ ಕಂಪನಿ ಒಪ್ಪಂದವನ್ನೇ ರದ್ದುಪಡಿಸಬೇಕು.
ಮತ್ಸ್ಯಧಾಮದಿಂದ ಮೀನುಗಾರರು ಕಂಗಾಲಾಗಿ ಕಷ್ಟದಲ್ಲಿರುವಾಗ ವಾಣಿಜ್ಯ ಬಂದರನ್ನು ಮೀನುಗಾರಿಕಾ ಬಂದರಿನ ಮುಖಬಾಯಿಯ ಮೇಲೆ ಹೇರಿ ಬಾಯಿ ಮುಚ್ಚಿಸಲಾಗುತ್ತಿದೆ. ಕೂಡಲೇ ಇದನ್ನು ತಡೆಯಬೇಕು. ಒಂದು ವಾರದಲ್ಲಿ ಕ್ರಮಕೈಗೊಳ್ಳದಿದ್ದರೆ ಜಿಲ್ಲಾಮಟ್ಟದ ಮೀನುಗಾರರೆಲ್ಲಾ ಸೇರಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಕಾಸರಕೋಡ ಟೊಂಕದಿಂದ 5ಕಿಮೀ ಮೆರವಣಿಗೆಯಲ್ಲಿ ಬಂದ ಪರ್ಶಿಯನ್ ಬೋಟ್ ಸಂಘದ ಅಧ್ಯಕ್ಷ ಹಮ್ಜಾ ಪಟೇಲ್, ಮೀನುಗಾರ ಕಾರ್ಮಿಕ ಸಂಘದ ಅಧ್ಯಕ್ಷ ಅಶೋಕ ಕಾಸರಕೋಡ, ಟ್ರೋಲರ್ ಬೋಟ್ ಸಂಘದ ಅಧ್ಯಕ್ಷ ರಾಮಚಂದ್ರ ಹರಿಕಂತ್ರ, ಸಗಟು ಮೀನು ವ್ಯಾಪಾರಸ್ಥ ಸಂಘದ ಗಣಪತಿ ತಾಂಡೇಲ್, ಭಾಸ್ಕರ್ ತಾಂಡೇಲ್ ಸಹಿತ ಎಲ್ಲ ಮುಖಂಡರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಹಶೀಲ್ದಾರ್ ಕಚೇರಿಗೆ ಹಾಜರಾದರು.