ಕುಂದಾಪುರ: ಕಲ್ಯಾಣಸ್ವಾಮಿ ರಸ್ತೆ ಪಕ್ಕದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂಬ ದೂರಿನ ಮೇರೆಗೆ ಪುರಸಭೆ ಸದಸ್ಯರು ಭೇಟಿ ನೀಡಿದರು.
ಅಕ್ರಮ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿ, ಸ್ಥಳೀಯರ ಮನೆಗೆ ಹೋಗುವ ದಾರಿಯನ್ನು ಅತಿಕ್ರಮಣ ಮಾಡಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದರು.
ಸಮಸ್ಯೆಯನ್ನು ಸ್ಥಳೀಯ ನಿವಾಸಿಗಳು ಪುರಸಭೆ ಸದಸ್ಯೆ ದೇವಕಿ ಸಣ್ಣಯ್ಯ ಅವರ ಗಮನಕ್ಕೆ ತಂದಾಗ ಅವರು ಸ್ಥಳಕ್ಕೆ ಧಾವಿಸಿ ಕಟ್ಟಡದ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡರು. ಮಾಜಿ ಪುರಸಭಾ ಸದಸ್ಯ ಶಲಿತಾ ರಾವ್ ಅವರು ಕೂಡ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಪರವಾಗಿ ದನಿಗೂಡಿಸಿ ಕೆಲಸವನ್ನು ನಿಲ್ಲಿಸಲು ಮನವಿ ಮಾಡಿದರು. ಪುರಸಭಾ ಸದಸ್ಯ ಶ್ರೀಧರ್ ಸೇರಿಗಾರ್ ಅವರು ಆಗಮಿಸಿ ಸಂಪೂರ್ಣ ಅಕ್ರಮ ಕಾಮಗಾರಿಯನ್ನು ವಿವರಿಸಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಲು ನಾವು ಬಿಡುವುದಿಲ್ಲ ಎಂದು ಹೇಳಿದರು. ರಸ್ತೆಗೆ ಅಕ್ರಮವಾಗಿ ಇಂಟರ್‌ಲಾಕ್ ಜೋಡಿಸಲಾಗಿದೆ, ಕೂಡಲೇ ಅದನ್ನು ತೆರವು ಮಾಡಬೇಕು ಎಂದು ಹೇಳಿದಾಗ ಕಟ್ಟಡ ಕಾಮಗಾರಿಗೆ ಸಂಬಂಧಪಟ್ಟವರು ಒಪ್ಪಿದರು.
ಕಟ್ಟಡ ಕಾಮಗಾರಿಯಿಂದ ಬಹಳಷ್ಟು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸರಿಯಾದ ವ್ಯವಸ್ಥೆ ಮಾಡದೆ ದಾರಿಯಲ್ಲಿ ನಡೆಯುವ ಜನರಿಗೆ ತೊಂದರೆ ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯರು ಹೇಳಿದರು.
ಪುರಸಭೆಯಲ್ಲಿ ನಡೆಯುವ ಮುಖ್ಯ ಸಭೆಯಲ್ಲಿ ವಿಚಾರವನ್ನು ಪ್ರಸ್ತಾವನೆ ಮಾಡಬೇಕೆಂದು ಸ್ಥಳೀಯ ಸಂಘಟನೆ ಅರಳಿಕಟ್ಟೆ ಫ್ರೆಂಡ್ಸ್ ಸದಸ್ಯರು ಮನವಿ ಮಾಡಿದ್ದಾರೆ.