Advertisement

ಕಡಬ: ಹೊಸಮಠ ಸೇತುವೆ ಬಳಿ ಅಪಾಯಕಾರಿ ಹಂಪ್‌ನಿಂದ ತೊಂದರೆ

12:08 AM Jun 26, 2019 | Team Udayavani |

ಕಡಬ: ಇಲ್ಲಿನ ಹೊಸಮಠ ನೂತನ ಸೇತುವೆಯ ಬಳಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿರುವ ಹಂಪ್‌ (ರಸ್ತೆ ಉಬ್ಬು) ನಿಂದಾಗಿ ಎರಡು ದಿನಗಳಿಂದ ಹಲವು ವಾಹನಗಳು ಅಪಘಾತಕ್ಕೀಡಾಗಿರುವುದು ಚಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

Advertisement

ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ತೆರೆದುಕೊಂಡ ಬಳಿಕ ಸೇತುವೆಯ ಎರಡೂ ಬದಿಯ ಸಂಪರ್ಕ ರಸ್ತೆಗಳಲ್ಲಿನ ತಿರುವುಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಎನ್ನುವ ದೂರುಗಳ ಹಾಗೂ ಮಾಧ್ಯಮ ವರದಿಗಳ ಬಳಿಕ ಸೇತುವೆಯ ಎರಡೂ ಕಡೆ ತಡೆ ಬೇಲಿ, ರಿಫ್ಲೆಕ್ಟರ್‌ಗಳನ್ನು ಅಳವಡಿಸಲಾಗಿತ್ತು. ಆದರೂ ಕೆಲ ದಿನಗಳ ಹಿಂದೆ ವೇಗವಾಗಿ ಬಂದ ವಾಹನವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಸೇತುವೆಯ ಪಾದಚಾರಿ ಮಾರ್ಗದ ಗೋಡೆಗೆ ಬಡಿದು ರಿಫ್ಲೆಕ್ಟರ್‌ಗಳು ಹಾನಿಗೀಡಾಗಿದ್ದವು. ಈ ವಿಚಾರ ಪುತ್ತೂರು ತಾಲೂಕು ಪಂಚಾಯತ್‌ ಸಭೆಯಲ್ಲೂ ಚರ್ಚೆಗೆ ಬಂದು ಸೇತುವೆಯ ಎರಡೂ ಬದಿ ಸಂಪರ್ಕ ರಸ್ತೆಯಲ್ಲಿ ಹಂಪ್‌ ರಚಿಸುವಂತೆ ಸೂಚಿಸಲಾಗಿತ್ತು.

ಆದರೆ, ಹಂಪ್‌ಗ್ಳೇ ಈಗ ಅಪಘಾತಕ್ಕೆ ಕಾರಣವಾಗಿರುವುದು ವಿಪರ್ಯಾಸ. ಹಂಪ್‌ನಿಂದಾಗಿ ವಾಹನಗಳು ಚಾಲಕರ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ. ಹಲವು ಬೈಕ್‌ಗಳು ಪಲ್ಟಿ ಹೊಡೆದು, ಹಾನಿ ಹಾಗೂ ಗಾಯಗಳಿಗೆ ಕಾರಣವಾಗಿವೆ. ಕಾರುಗಳ ಅಡಿಭಾಗ ಈ ಹಂಪ್‌ಗೆ ತಾಗಿ ಬಿಡಿ ಭಾಗಗಳಿಗೆ ಹಾನಿಯಾಗುತ್ತಿರುವ ದೂರುಗಳು ಬಂದಿವೆ.

ರವಿವಾರ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದ್ದ ಮಂಗಳೂರು ಮೂಲದ ಯಾತ್ರಿಕರ ಹೊಸ ಕಾರು ಹಂಪ್‌ನ ಮೇಲೆ ಚಲಿಸಿದ ವೇಳೆ ಕಾರಿನ ತಳಭಾಗಕ್ಕೆ ಧಕ್ಕೆಯಾಗಿ, ದುರಸ್ತಿಗೆ 1 ಲಕ್ಷ ರೂ. ವೆಚ್ಚವಾಗಿದೆ. ಈ ಹಂಪ್‌ಗ್ಳನ್ನು ಸರಿಪಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಚಾಲಕರಿಂದ ವ್ಯಕ್ತವಾಗಿದೆ.

ಸಮಸ್ಯೆ ಕುರಿತು ವಿವರಣೆ
ಸ್ಥಳೀಯ ಜಿಲ್ಲಾ ಪಂಚಾಯತ್‌ ಸದಸ್ಯ ಪಿ.ಪಿ. ವರ್ಗೀಸ್‌ ಅವರು ಸಾರ್ವಜನಿಕರ ದೂರಿನಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಅಧಿಕಾರಿಗಳನ್ನು ಸಂಪರ್ಕಿಸಿ, ಹಂಪ್‌ಗ್ಳಿಂದ ಆಗುತ್ತಿರುವ ಸಮಸ್ಯೆ ವಿವರಿಸಿ, ಸರಿಪಡಿಸಲು ಆಗ್ರಹಿಸಿದ್ದಾರೆ.

Advertisement

ಭೇಟಿ ನೀಡಿ ಪರಿಶೀಲನೆ
ಹೊಸಮಠದಲ್ಲಿ ನಿರ್ಮಿಸಲಾಗಿರುವ ಸೇತುವೆಯ ಸಂಪರ್ಕ ರಸ್ತೆಯ ಇಕ್ಕೆಲೆಗಳಲ್ಲಿ ಮತ್ತು ಮಧ್ಯದಲ್ಲಿ ಬಣ್ಣದ ಪಟ್ಟಿ ಹಾಕಲಾಗಿದೆ. ಸೇತುವೆಯಲ್ಲಿ ಪಾದಚಾರಿ ಮಾರ್ಗದ ಗೋಡೆಗಳಿಗೂ ರಿಫ್ಲೆಕ್ಟರ್‌ ಅಳವಡಿಸಲಾಗಿದೆ.ಸಂಪರ್ಕ ರಸ್ತೆ ಸೇತುವೆಗೆ ಸೇರುವಲ್ಲಿ ಹಾಗೂ ಸಂಪರ್ಕ ರಸ್ತೆಯ ತಿರುವಿನಲ್ಲಿ ಎರಡೂ ಕಡೆ ಝೀಬ್ರಾ ಕ್ರಾಸ್‌ ರೀತಿಯಲ್ಲಿ ಹಳದಿ ಬಣ್ಣದ ಪಟ್ಟಿ ಹಾಕಿ ಅದಕ್ಕೂ ರಿಫ್ಲೆಕ್ಟರ್‌ ಅಳವಡಿಸಿದೆ. ಆದರೂ ವಾಹನಗಳ ವೇಗ ನಿಯಂತ್ರಿಸಲು ಸಾಧ್ಯವಾಗಿಲ್ಲ ಎನ್ನುವ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಉಬ್ಬು ನಿರ್ಮಿಸಿದ್ದೇವೆ. ರಸ್ತೆ ಉಬ್ಬಿನಿಂದಾಗಿ ಸಮಸ್ಯೆ ಎದುರಾಗಿದೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ನಮ್ಮ ಎಂಜಿನಿಯರ್‌ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
-ಮಂಜುನಾಥ್‌, ಎಇಇ, ಕೆಆರ್‌ಡಿಸಿಎಲ್

Advertisement

Udayavani is now on Telegram. Click here to join our channel and stay updated with the latest news.

Next