Advertisement

ವಾಹನ ಸಂಚಾರಕ್ಕೆ ತೊಡಕು, ನಡೆದು ಹೋಗಲೂ ಕಷ್ಟ 

07:59 PM Nov 13, 2021 | Team Udayavani |

ಕಡಬ: ಕೊಂಬಾರು ಗ್ರಾ.ಪಂ. ವ್ಯಾಪ್ತಿಯ ಸುಂಕದಕಟ್ಟೆ-ಬೋಳ್ನಡ್ಕ ಸಂಪರ್ಕ ರಸ್ತೆಯ ಕೊಂಬಾರುಗದ್ದೆಯಲ್ಲಿ ಬೋರೆ ಹೊಳೆ ಬದಿಗೆ ನಿರ್ಮಾಣವಾಗುತ್ತಿದ್ದ ತಡೆಗೋಡೆ ನಿರ್ಮಾಣದ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು, ಅಲ್ಲಿನ ಜನರು ವಾಹನ ಸಂಚಾರ ಬಿಡಿ ನಡೆದು ಹೋಗಲೂ ಸಾಧ್ಯವಾಗದೆ ಪರದಾಡುವಂತಾಗಿದೆ.

Advertisement

ತಡೆಗೋಡೆಯ ಕಾಮಗಾರಿ ಸ್ಥಗಿತ ಗೊಂಡು ಸುಮಾರು ಎರಡು ತಿಂಗಳೇ ಕಳೆದಿದೆ. ಕಾಮಗಾರಿಗಾಗಿ ಮಣ್ಣು ಹಾಕಿರುವುದರಿಂದ ವಾಹನ ಸಂಚಾರವೂ ಸಾಧ್ಯವಿಲ್ಲ ಎಂಬಂತಾಗಿದೆ. ಬನಾರಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಸೇರಿದಂತೆ ಹಲವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ತಡೆಗೋಡೆ ಕಾರ್ಯ ಸ್ಥಗಿತಗೊಂಡಿದೆ.

ಶ್ರೀಘ್ರ ಕಾಮಗಾರಿ ಮುಗಿಸಲು ಆಗ್ರಹ :

ಕಾಮಗಾರಿ ಅರ್ಧದ‌ಲ್ಲಿರುವುದರಿಂದ ಸ್ಥಳೀಯರು ಹಾಗೂ ರಬ್ಬರ್‌ ತೋಟಗಳ ಕಾರ್ಮಿಕರು ಕೆಲಸಕ್ಕೆ ಹೋಗಲು ಪರದಾಡುತ್ತಿದ್ದಾರೆ. ಮುಖ್ಯವಾಗಿ ಬನಾರಿ ಮುತ್ತು ಮಾರಿಯಮ್ಮ ದೇವಸ್ಥಾನಕ್ಕೆ ಹೋಗಲು ಸಮಸ್ಯೆಯಾಗಿದೆ. ಜನವರಿ 14 ರಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಇದೆ. ಅದಕ್ಕಿಂತ ಮೊದಲು ಕಾಮಗಾರಿ ಪೂರ್ತಿಗೊಳಿಸುವಲ್ಲಿ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಕೊಂಬಾರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ  ಮುತ್ತುಕುಮಾರ್‌ ಆಗ್ರಹಿಸಿದ್ದಾರೆ.

ಆದ್ದರಿಂದ 100-200 ಮೀ. ಕ್ರಮಿಸಿ ಮನೆ ಸೇರುತ್ತಿದ್ದ ಜನ ಈಗ 6-7 ಕಿ.ಮೀ. ಸುತ್ತು ಬಳಸಿ ಹೋಗಬೇಕಾದ ಅನಿವಾರ್ಯ ಎದುರಾಗಿದೆ. ಸುಂಕದಕಟ್ಟೆಗೆ ಸುಲಭ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಈಗ ಸಂಚಕಾರ ಉಂಟಾಗಿದೆ. ಮುಖ್ಯವಾಗಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಮೂಜೂರು ರಬ್ಬರ್‌ ಘಟಕಕ್ಕೆ ಹೋಗುವ 60 ಕ್ಕಿಂತಲೂ ಹೆಚ್ಚು ರಬ್ಬರ್‌ ಕಾರ್ಮಿಕರು ಮುಂಜಾವಿನಲ್ಲಿ ಇದೇ ನೂತನ ತಡೆಗೋಡೆ ಬದಿಯ ರಸ್ತೆಯಲ್ಲಿ ಸಾಗಲು ಹರಸಾಹಸ ಪಡುತ್ತಿದ್ದಾರೆ. ಬೀಡು ಮಜಲು ಎಂಬಲ್ಲಿ ನಿರ್ಮಾಣವಾಗಬೇಕಿದ್ದ ಮೋರಿ ನಿರ್ಮಾಣದ ಕಾಮಗಾರಿಯೂ ಬಾಕಿಯಾಗಿದೆ. ಕಾಮಗಾರಿ ಸ್ಥಗಿತದಿಂದಾಗಿ ಸಮಸ್ಯೆ ಎದುರಿಸುತ್ತಿರುವ ಜನರು ಸಂಬಂಧ ಪಟ್ಟವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಕಾಮಗಾರಿಗೆ 50 ಲಕ್ಷ  ರೂ. ಅನುದಾನ :

ಜಿ.ಪಂ. ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ಮುತು ವರ್ಜಿಯಿಂದಾಗಿ ಇಲ್ಲಿನ ಕಾಮಗಾರಿಗೆ 50 ಲಕ್ಷ ರೂ. ಅನುದಾನ ಲಭಿಸಿತ್ತು. ಕ್ಷೇತ್ರದ ಶಾಸಕ ಪ್ರಸ್ತುತ ಸಚಿವರಾಗಿರುವ ಎಸ್‌. ಅಂಗಾರ ವರ್ಷದ ಹಿಂದೆ ಗುದ್ದಲಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದಾಗ ಸ್ಥಳೀಯ ವ್ಯಕ್ತಿಯೊಬ್ಬರು ಮೋರಿ ಅಳವಡಿಸುವ ವಿಚಾರ ದಲ್ಲಿ ತಗಾದೆ ತೆಗೆದ ಕಾರಣದಿಂದಾಗಿ ಗುತ್ತಿಗೆ ದಾರರು ಕಾಮಗಾರಿಯನ್ನು ನಿಲ್ಲಿಸಿರು ವುದರಿಂದ ಸಮಸ್ಯೆ ಎದುರಾಗಿದೆ.

ನಾವು ಕಾಮಗಾರಿಯನ್ನು ಎಂಜಿನಿಯರ್‌ ಎಸ್ಟಿಮೇಟ್‌ ಪ್ರಕಾರವೇ ಮಾಡಿಕೊಂಡು ಬಂದಿದ್ದೇವೆ. ಆದರೆ ಅಲ್ಲಿ ಮೋರಿ ಅಳವಡಿಸುವಾಗ ಸ್ಥಳೀಯ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದಾಗಿ ಕಾಮಗಾರಿ ನಿಲ್ಲಿಸಲಾಗಿದೆ. ಅದರಿಂದಾಗಿ ನಮಗೂ ನಷ್ಟವಾಗಿದೆ. ಸಾರ್ವಜನಿಕರಿಗೂ ತೊಂದರೆಯಾಗಿದೆ. ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದ್ದು, ಅವರ ಮಾರ್ಗದರ್ಶನದಂತೆ ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಉದಯ್‌, ಕಾಮಗಾರಿಯ ಗುತ್ತಿಗೆದಾರರು.

 

-ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next