ಚಿಂತಾಮಣಿ: ಹೊಸ ಆಧಾರ್ ಕಾರ್ಡ್ ಟೋಕನ್ ಪಡೆಯಲು ಹಾಗೂ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ತಿಂಗಳಿಗೊಮ್ಮೆ ಟೋಕನ್ ನೀಡುತ್ತಿರುವುದರಿಂದ ಗುರುವಾರ ಬೆಳಗಿನ ಜಾವ 5 ಗಂಟೆಯಿಂದಲೇ ನೂರಾರು ಮಂದಿ ಪಟ್ಟಣದ ಕೆನರಾ ಬ್ಯಾಂಕ್ ಬಳಿ ಜಮಾಯಿಸಿದ್ದ ದೃಶ್ಯ ಕಂಡು ಬಂತು.
ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ತಾಲೂಕಿನಾದ್ಯಂತ ಎಲ್ಲಾ ನಾಡ ಕಚೇರಿ ಹಾಗೂ ಗ್ರಾಪಂ ಕಚೇರಿಗಳಲ್ಲಿ ಈ ಹಿಂದೆ ಆಧಾರ್ ಕಾರ್ಡ್‌ಗಳನ್ನು ಮಾಡಿಕೊಡಲಾಗುತ್ತಿತ್ತು.
ಆದರೆ ಇತ್ತೀಚಿಗೆ ನೆಟ್‌ವರ್ಕ್ ಸಮಸ್ಯೆಯಿಂದಾಗಿನಾಡ ಕಚೇರಿ ಹಾಗೂ ಗ್ರಾಪಂಗಳಲ್ಲಿ ಆಧಾರ್ ಮಾಡಿಕೊಡುವುದನ್ನು ನಿಲ್ಲಿಸಿರುವುದರಿಂದ ಹಾಗೂ ಇಡೀ ತಾಲೂಕಿಗೆ ಚಿಂತಾಮಣಿ ನಗರದ ಕೆನರಾ ಬ್ಯಾಂಕ್ ಹಾಗೂ ಎಸ್‌ಬಿಐ ಬ್ಯಾಂಕ್ ಮತ್ತು ಒಂದೆರೆಡು ನಾಡ ಕಚೇರಿಗಳಲ್ಲಿ ಮಾತ್ರ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತಿದ್ದು, ಆಧಾರ್ ಪಡೆಯಲು ಟೋಕನ್ ತಿಂಗಳಿಗೊಮ್ಮೆ ನೀಡುತ್ತಿರುವ ಕಾರಣ ಬೆಳಗ್ಗೆ 5 ಗಂಟೆಗೆ ದೂರದ ಊರುಗಳಿಂದ ಬಂದ ಮಕ್ಕಳು, ವಯೋವೃದ್ಧರು ಹಾಗೂ ಸಾರ್ವಜನಿಕರು ಬ್ಯಾಂಕ್ ಬಳಿ ಸರದಿ ಸಾಲಿನಲ್ಲಿ ನಿಲ್ಲಬೇಕಿದೆ.
ಬೆಳಗ್ಗೆ ಹತ್ತು ಗಂಟೆ ಸಮಯಕ್ಕೆ ನೂರಾರು ಜನರು ಟೋಕನ್ ಪಡೆಯಲು ಜಮಾಯಿಸಿದ್ದರಿಂದ, ಬ್ಯಾಂಕ್ ಬಳಿ ಜನಜಂಗುಳಿ ಹೆಚ್ಚಾಗಿ ನೂಕುನುಗ್ಗಲು ಉಂಟಾಯಿತು. ಮಧ್ಯ ಪ್ರವೇಶಿಸಿದ ಬ್ಯಾಂಕ್ ಅಧಿಕಾರಿಗಳು ಜನರ ಮನವೊಲಿಸಿ ಸರದಿ ಸಾಲಿನಲ್ಲಿ ನಿಲ್ಲಿಸಿದ್ದರಿಂದ ಪರಿಸ್ಥಿತಿ ತಿಳಿಗೊಂಡು ಸಾರ್ವಜನಿಕರು ಸಾಲಾಗಿ ನಿಂತು ಟೋಕನ್ ಪಡೆದುಕೊಂಡರು.