ವಿಜಯಪುರ: ವಿದೇಶಕ್ಕೆ ರಫ್ತು ಗುಣಮಟ್ಟದ ವಿವಿಧ ತೋಟಗಾರಿಕೆ ಬೆಳೆಯನ್ನು ಬೆಳೆಯುವ ವಿಜಯಪುರ ಜಿಲ್ಲೆಗೆ ಕೊರೊನಾ ಹೆಮ್ಮಾರಿ ತೋಟಗಾರಿಕೆ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಲಾಕ್‌ಡೌನ್ ಪರಿಣಾಮ ಜಿಲ್ಲೆಯ ಬಹುತೇಕ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಕೋಟ್ಯಂತರ ರೂ. ಆರ್ಥಿಕ ನಷ್ಟಕ್ಕೆ ನೂಕಿ, ಹಣ್ಣು ಬೆಳೆಗಾರರ ಕಣ್ಣಲ್ಲಿ ನೀರು ತರಿಸಿದೆ.
ಲಾಕ್‌ಡೌನ್ ನಿರ್ಬಂಧದಿಂದ ಜಿಲ್ಲೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿವೆ. ಎಪಿಎಂಸಿ ವಹಿವಾಟನ್ನೂ ಬಂದ್ ಮಾಡಲಾಗಿತ್ತು. ಮನೆಯಲ್ಲೇ ಇರಿ ಎಂಬ ನಿರ್ಬಂಧದಿಂದ ತೋಟಗಾರಿಕೆ-ಕೃಷಿ ವ್ಯವಸಾಯಕ್ಕೆ ಕಾರ್ಮಿಕರ ಕೊರತೆಯೂ ಎದುರಾಗಿದೆ.
ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತ್ಯ ಧಿಕ 13,400 ಹೆಕ್ಟೇರ್ ದ್ರಾಕ್ಷಿ ಬೆಳೆಯುವ ಕಾರಣ ವಿಜಯಪುರ ಜಿಲ್ಲೆಗೆ ದ್ರಾಕ್ಷಿ ಕಣಜ ಎಂದೂ, 12,000 ಹೆಕ್ಟೇರ್ ಲಿಂಬೆ ಬೆಳೆಯುವುದರಿಂದ ಲಿಂಬೆ ಕಣಜ ಎಂದೂ ಹೆಸರುವಾಸಿಯಾಗಿದೆ. ಆದರೆ, ಕಳೆದ ವರ್ಷ ನೆರೆ ಸಂದರ್ಭದಲ್ಲಿ ಸುರಿದ ಅಧಿ ಕ ಮಳೆಯಿಂದ ಬೆಳೆ ಹಾನಿ ಅನುಭವಿಸಿದ್ದ ದ್ರಾಕ್ಷಿ, ಲಿಂಬೆ, ದಾಳಿಂಬೆ ಬೆಳೆಗಾರರಿಗೆ ಇದೀಗ ಕೊರೊನಾ ಕಾಡಾಟ ಶುರುವಾಗಿದೆ.
ಕೋವಿಡ್ 19 ಅಬ್ಬರಕ್ಕೆ ದೇಶದಲ್ಲಿ ಜನತಾ ಕರ್ಫ್ಯೂ ಹಾಗೂ ಲಾಕ್‌ಡೌನ್ ಆದೇಶ ಬಳಿಕ ಜಿಲ್ಲೆಯಲ್ಲಿ ವಾರಕ್ಕೆ ಒಮ್ಮೆ ಕೊಯಾಲಾಗುತ್ತಿದ್ದ ಲಿಂಬೆ ಇದೀಗ ಗಿಡದಲ್ಲೇ ಕೊಳೆಯುತ್ತಿದೆ. ಇದರಿಂದ ಈಗಾಗಲೇ ಸುಮಾರು 1 ಕೋಟಿ ರೂ.ಗೂ ಅಧಿ ಕ ಲಿಂಬೆ ಮಣ್ಣುಪಾಲಾಗಿದೆ. ಜಿಲ್ಲೆಯಲ್ಲಿ ಎರಡು ದಿನದಿಂದ ತೋಟಗಾರಿಕೆ ಬೆಳೆಗಳ ಮಾರಾಟಕ್ಕೆ ಅವಕಾಶ ನೀಡಿದ್ದರೂ ಜಿಲ್ಲೆಯಲ್ಲಿ ಲಿಂಬೆಗೆ ಇಂಡಿ ಪ್ರಮುಖ ಮಾರುಕಟ್ಟೆ ಇನ್ನೂ ಆರಂಭಗೊಂಡಿಲ್ಲ. ಇದರಿಂದ ಲಿಂಬೆ ಬೆಳೆಗಾರ ನಷ್ಟಕ್ಕೆ ಸಿಲುಕಿದ್ದಾನೆ. ಇತ್ತ ಜಿಲ್ಲೆಯಲ್ಲಿ ಬೆಳೆಯುವ ದ್ರಾಕ್ಷಿಯಲ್ಲಿ ಶೇ.90 ರಷ್ಟು ಒಣದ್ರಾಕ್ಷಿ ಮಾಡಲಾಗುತ್ತಿದ್ದು, ಒಣದ್ರಾಕ್ಷಿ ಮಾರುಕಟ್ಟೆ ಇಲ್ಲದೇ ಶೈತ್ಯಾಗಾರದಲ್ಲಿ ದಾಸ್ತಾನಿಡಲು ಮಾಸಿಕ ಬಾಡಿಗೆ ಹೊರೆ ಎದುರಿಸಬೇಕಿದೆ. ಫೆಬ್ರವರಿ ತಿಂಗಳಲ್ಲಿ ಸುರಿದ ಸಣ್ಣ ಮಳೆ ಹಲವು ಬೆಳೆಗಾರಿಗೆ ನಷ್ಟದ ತಂದೊಡ್ಡಿತ್ತು. ಇದೀಗ ಹಸಿದ್ರಾಕ್ಷಿ ತಳಿಗೆ ಕೊರೊನಾ ಕಾಡುತ್ತಿದೆ.
ಒಣದ್ರಾಕ್ಷಿ ಘಟಕ ಮಾಡಲು ಸುಮಾರು 12 ಲಕ್ಷ ರೂ. ವೆಚ್ಚ ತಗುಲಲಿದ್ದು, ಇಷ್ಟೊಂದು ಹೆಚ್ಚುವರಿ ಹಣ ಭರಿಸಲಾಗದ ಸಣ್ಣ ಹಾಗೂ ಬಡ ರೈತರು ಹಸಿದ್ರಾಕ್ಷಿ ತಳಿಗಳ ಮೊರೆ ಹೋಗಿದ್ದಾರೆ. ಈ ಹಸಿದ್ರಾಕ್ಷಿ ದೇಶದ ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮುಂಬೈ ಮಾತ್ರವಲ್ಲ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಆದರೆ, ಈಗಾಗಲೇ ಕೊಯ್ಲಿಗೆ ಬಂದಿರುವ ಹಸಿದ್ರಾಕ್ಷಿಗೆ ಲಾಕ್‌ಡೌನ್ ಸಂಕಷ್ಟ ತಂದೊಡ್ಡಿದೆ. ಒಂದೆಡೆ ವಾಹನ ಸಂಚಾರ, ಮುಕ್ತ ಮಾರುಕಟ್ಟೆ, ಕಾರ್ಮಿಕರ ಮುಕ್ತ ಓಡಾಟಕ್ಕೆ ಅವಕಾಶ ಇಲ್ಲದೆ ದ್ರಾಕ್ಷಿ ಬೆಳೆಗಾರರು ಸಂಪೂರ್ಣ ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ.
ಇತ್ತ ಬೇಸಿಗೆಯಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆಯುವ ಕಲ್ಲಂಗಡಿ ಬೆಳೆಯೂ ಕೊಯ್ಲಿಗೆ ಬಂದಿದ್ದು, ಮಾರುಕಟ್ಟೆ ಇಲ್ಲದೇ ಕೊಂಡೊಯ್ಯ ಲಾಗದೇ ಹೊಲದಲ್ಲೇ ಕಲ್ಲಂಗಡಿ ಕೊಳೆಯುತ್ತಿದೆ. ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆಯ ಪ್ರಮಾಣ ಎಷ್ಟೆಂದು ಸ್ಪಷ್ಟವಾಗಿಲ್ಲ. ಆದರೆ, ಬಹುತೇಕ ಕಲ್ಲಂಗಡಿ ಬೆಳೆಗಾರ ಮಾರುಕಟ್ಟೆಗೆ ಕೊಂಡೊಯ್ಯಲು ಸಾಧ್ಯವಾಗದೇ ಮಣ್ಣಲ್ಲಿ ಕೊಳೆಯುತ್ತಿರುವ ಹಣ್ಣು ಕಂಡು ಕಣ್ಣೀರು ಹಾಕುತ್ತಿದ್ದಾರೆ.
ಇತ್ತ ತರಕಾರಿ ಬೆಳೆಗೂ ಜಿಲ್ಲೆ ಹೆಸರಾಗಿದ್ದು, ಬೆಳಗಾವಿಯಿಂದಲೂ ತರಕಾರಿ ಆವಕ ಇರುತ್ತದೆ. ಲಾಕ್‌ಡೌನ್‌ನಿಂದಾಗಿ ಕಳೆದ ಒಂದು ವಾರದಿಂದ ನಷ್ಟಕ್ಕೆ ಸಿಲಕಿದ್ದ ತರಕಾರಿ ಬೆಳೆಗಾರರಿಗೆ, ಮಾರುಕಟ್ಟೆಗೆ ಕೊಂಡೊಯ್ಯಲು ಈಗ ಅವಕಾಶ ನೀಡಿದ್ದರೂ ಸಂಕಷ್ಟ ತಪ್ಪಿಲ್ಲ. ಬೆಳೆ ಸಾಗಾಟಕ್ಕೆ ಪಾಸ್, ಮನಬಂದಂತೆ ಕೇಳುವ ವಾಹನ ಬಾಡಿಗೆ, ಕಾರ್ಮಿಕರ ಹೆಚ್ಚಿನ ಕೂಲಿಯಂಥ ಸಮಸ್ಯೆಯಿಂದಾಗಿ ಹಾಕಿದ ಬಂಡವಾಳವೂ ಲಭ್ಯ ಇಲ್ಲವಾಗಿದೆ. ಮತ್ತೂಂದೆಡೆ ತರಕಾರಿ ಲಭ್ಯ ಇಲ್ಲದೇ ಕಾಳಸಂತೆಯ ತರಕಾರಿ ಎಗ್ಗಿಲ್ಲದೇ ಸಾಗಿದೆ.
ಕೊಯ್ಲಿನ ಹಂತದಲ್ಲಿರುವ ಕಲ್ಲಂಗಡಿ ಹಣ್ಣು ಮಾರಾಟ ಮಾಡಲು ಸಂಕಷ್ಟ ಎದರುರಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ನನ್ನಂಥ ಒಬ್ಬನೇ ರೈತನಿಗೆ ಸುಮಾರು 3-4 ಲಕ್ಷ ರೂ. ನಷ್ಟ ತಂದಿದೆ ಎಂದರೆ ಜಿಲ್ಲೆಯಾದ್ಯಂತ ಕಲ್ಲಂಗಡಿ ಬೆಳೆದವರ ಕಥೆ ಏನು. ಸರ್ಕಾರ ನಮ್ಮ ನೆರವಿಗೆ ಬರಬೇಕು.
– ವಿಠ್ಠಲ ಬಿರಾದಾರ, ಆಳೂರ ಗ್ರಾಮದ ರೈತ
-ಜಿ.ಎಸ್.ಕಮತರ