Advertisement

ಹೆಣ್ಣು ಮಕ್ಕಳ ಸ್ನಾನಕ್ಕೂ ಬಯಲೇ ಗತಿ!

10:32 AM Aug 28, 2019 | Suhan S |

ಕಂದಗಲ್ಲ: ಬರೋಬ್ಬರಿ 140ಕ್ಕೂ ಹೆಚ್ಚು ವಿದ್ಯಾರ್ಥಿಗಳು. ಅವರೆಲ್ಲ ಮೂರೇ ಕೊಠಡಿ. ಸ್ನಾನ, ಶೌಚ ಬೆಳಗಾಗುವುದೊರಳಗೆ ಮುಗಿಸಬೇಕು. ಹುಡುಗರಾದರೆ ಹಗಲು ಹೊತ್ತೂ ಬಯಲಲ್ಲಿ ಸ್ನಾನ ಮಾಡ್ತಾರೆ. ಆದರೆ, ಹೆಣ್ಣುಮಕ್ಕಳು, ನಸುಕಿನಲ್ಲೇ ಬಯಲಿನಲ್ಲಿ ಸ್ನಾನ ಮಾಡಬೇಕು. ಅದು ತಣ್ಣೀರಿನಿಂದ.

Advertisement

ಹೌದು, ಇದು ಇಳಕಲ್ಲ ತಾಲೂಕಿನ ಗಡಿ ಗ್ರಾಮ ಕಂದಗಲ್ಲನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳ ಪರಿಸ್ಥಿತಿ. ಬಡ ಮಕ್ಕಳೇ ಇಲ್ಲಿ ಪ್ರವೇಶ ಪಡೆದಿದ್ದಾರೆ. ವಸತಿಯುತ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿ, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕನಸು ಕಟ್ಟಿಕೊಂಡು ಬಂದ ಮಕ್ಕಳು, ನಿತ್ಯ ಶುದ್ಧ ಮನಸ್ಸಿನಿಂದ ಅಭ್ಯಾಸ ಮಾಡುವ ಬದಲು, ತಾಪತ್ರಯಗಳಲ್ಲೇ ದಿನ ದೂಡುವಂತಾಗಿದೆ.

ಬಯಲಲ್ಲೇ ಸ್ನಾನ: ಮೊರಾರ್ಜಿ ದೇಸಾಯಿ ವಸತಿಯುತ ಸಂಯುಕ್ತ ಶಾಲೆ ಇದಾಗಿದ್ದು, ಬಾಲಕ-ಬಾಲಕಿಯರು ಪ್ರವೇಶ ಪಡೆದಿದ್ದಾರೆ. ಸ್ವಂತ ಕಟ್ಟಡದ ಸಮಸ್ಯೆಯಿಂದ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನಾಲ್ಕು ಕೊಠಡಿಗಳನ್ನು ಈ ವಸತಿ ಶಾಲೆಗೆ ನೀಡಲಾಗಿದೆ. ಅದರಲ್ಲಿ ಒಂದು ಕೊಠಡಿ ಕಚೇರಿಯನ್ನಾಗಿ ಮಾಡಿದ್ದು, ಇನ್ನೊಂದು ಕೋಠಡಿ ಅಡುಗೆ ಕೋಣೆ, ಪಡಿತರ ಇಡಲು ಬಳಸಲಾಗುತ್ತಿದೆ. ಉಳಿದ ಎರಡು ಕೊಠಡಿಗಳಲ್ಲಿ ಬಾಲಕ- ಬಾಲಕಿಯರಿಗೆ ಪ್ರತ್ಯೇಕ ಒಂದೊಂದು ಕೊಠಡಿ ನೀಡಲಾಗಿದೆ.

ಅಲ್ಲದೇ ಬಾಲಕ-ಬಾಲಕಿಯರಿಗೆ ಎರಡು ಸ್ನಾನದ ಚಿಕ್ಕ ಕೊಠಡಿ- ಶೌಚಾಲಯ ಇವೆ. 135 ವಿದ್ಯಾರ್ಥಿಗಳಿಗೂ ಇವು ಸಾಕಾಗಲ್ಲ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಶೌಚಕ್ಕಾಗಿ ಬಯಲಿಗೇ ಹೋಗುತ್ತಾರೆ. ಬಾಲಕರಾದರೆ, ಬಯಲಿಗೆ ಹೋಗಬಹುದು. ಬಾಲಕಿಯರ ಸಮಸ್ಯೆ ಹೇಳತೀರದು. ಶೌಚಾಲಯಕ್ಕೆ ಹೋಗುವುದು ಸಹಿಸಿಕೊಳ್ಳಬಹುದು, ಆದರೆ, ನಿತ್ಯ ಸ್ನಾನ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಬಾಲಕಿಯರು, ಸೂರ್ಯೋದಯಕ್ಕೂ ಮುಂಚೆ ಶೌಚ, ಸ್ನಾನ ಎರಡೂ ಮುಗಿಸಬೇಕು. ಬೆಳಕಾದ ಬಳಿಕ ಎದ್ದರೆ ಅಂದು ಸ್ನಾನ ಮಾಡುವುದಿಲ್ಲ. ಕಾರಣ, ಸ್ನಾನಕ್ಕೆ ಕೊಠಡಿಗಳಲ್ಲಿ. ವಸತಿ ಶಾಲೆಯ ಪಕ್ಕದ ನೀರಿನ ತೊಟ್ಟಿಗಳಿದ್ದು, ಅಲ್ಲಿಯೇ ತಣ್ಣೀರಿನ ಸ್ನಾನ ಮಾಡುವುದು ಇವರ ನಿತ್ಯ ಬದುಕಾಗಿದೆ.

ಓದಿ ಮಲಗಲು ಒಂದೇ ಕೋಣೆ: ಬಾಲಕರು ಮತ್ತು ಬಾಲಕಿಯರಿಗೆ ಅಕ್ಕ-ಪಕ್ಕದಲ್ಲಿ ಪ್ರತ್ಯೇಕ ಕೊಠಡಿಗಳಿದ್ದು, ಅವರು ನಿತ್ಯ ಅಲ್ಲೇ ಅಭ್ಯಾಸ ಮಾಡಿ, ರಾತ್ರಿ ಅಲ್ಲಿಯೇ ಮಲಗಬೇಕಿದೆ. ಇವರಿಗೆ ಸುಸಜ್ಜಿತ ವಸತಿ ನಿಲಯ ಕಲ್ಪಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ.

Advertisement

3 ವರ್ಷದಿಂದ ಇದೇ ಸ್ಥಿತಿ: ಕಂದಗಲ್ಲ ಗ್ರಾಮಸ್ಥರ ಹಲವು ದಿನಗಳ ಬೇಡಿಕೆ-ಒತ್ತಾಯದ ಬಳಿಕ ಕಳೆದ 2015-17ನೇ ಸಾಲಿನಲ್ಲಿ ಗ್ರಾಮಕ್ಕೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿದೆ. ಆದರೆ, ಸ್ವಂತ ಕಟ್ಟಡವಿಲ್ಲ. 5ರಿಂದ 8ನೇ ತರಗತಿ ವರೆಗೆ ವಸತಿ ಶಾಲೆ ನಡೆಯುತ್ತಿದ್ದು, 60 ಜನ ಬಾಲಕರು, 75 ಜನ ಬಾಲಕಿಯರು ವ್ಯಾಸಂಗ ಮಾಡುತ್ತಿದ್ದಾರೆ. ಈ ವಸತಿ ನಿಲಯಕ್ಕೆ ಸ್ವಂತ ಕಟ್ಟಡ ಮತ್ತು ಜಾಗ ಎರಡೂ ಇಲ್ಲ. ಹೀಗಾಗಿ ಸರ್ಕಾರಿ ಪ್ರೌಢ ಶಾಲೆಯ ಕೊಠಡಿಯಲ್ಲೇ ನಡೆಯುತ್ತಿದೆ. ಕಳೆದ ವರ್ಷ, ಕಟ್ಟಡಕ್ಕೆ ಅನುದಾನ ಮಂಜೂರಾಗಿದೆ ವಿನಃ ಸ್ವಂತ ಜಾಗ ಸಿಗದ ಕಾರಣ ವಿಳಂಬವಾಗಿದೆ ಎನ್ನಲಾಗಿದೆ.

 

•ನಾಗಭೂಷಣ ಸಿಂಪಿ

Advertisement

Udayavani is now on Telegram. Click here to join our channel and stay updated with the latest news.

Next