Advertisement

ಶೂಟಿಂಗ್‌ ನೆಪದಲ್ಲಿ ಪ್ರವಾಸಿಗರಿಗೆ ತೊಂದರೆ: ದೂರು

04:31 PM Feb 17, 2017 | |

ಬೇಲೂರು: ಸುಪ್ರಸಿದ್ಧ ಪ್ರವಾಸಿ ತಾಣವಾದ ಬೇಲೂರು ಚೆನ್ನಕೇಶವ ಸ್ವಾಮಿ ದೇವಾಲಯದ ಒಳಾವರಣದಲ್ಲಿ ತೆಲುಗು ಚಲನಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡದವರು ಚಿತ್ರೀಕರಣಕ್ಕೆ ಅಡ್ಡಿಯಾಗುತ್ತದೆ ಎಂದು ಪ್ರವಾಸಿಗರನ್ನು ದೇವಾಲಯದ ಒಳಾವರಣಕ್ಕೆ ಹೋಗಲು ಅಡ್ಡಿಯನ್ನುಂಟು ಮಾಡುತ್ತಿದ್ದಾರೆ ಎಂದು ಪ್ರವಾಸಿಗರು ದೂರಿದ್ದಾರೆ. 

Advertisement

ಹೊಯ್ಸಳ ಶೈಲಿಯ ವಾಸ್ತುಶಿಲ್ಪ ಹೊಂದಿರುವ ಚೆನ್ನಕೇಶವ ದೇವಸ್ಥಾನದ ಒಳಾವರಣದಲ್ಲಿ ತೆಲುಗು ಸಿನಿಮಾ ದೂವಾಡ ಜಗನ್ನಾಥ್‌ (ಡಿಜೆ) ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣ ತಂಡದವರು ಕೇಂದ್ರ ಪುರಾತತ್ವ ಇಲಾಖೆಯ ಮುಖ್ಯಕಚೇರಿ ಇರುವ ದೆಹಲಿಯಿಂದಲೇ ಚಿತ್ರೀಕರಣಕ್ಕೆ ಅನುಮತಿ ಪಡೆದುಕೊಂಡು ಬಂದಿದ್ದಾರೆ. ಚಿತ್ರೀಕರಣ ತಂಡದವರು ದೇವಸ್ಥಾನದ ಒಳಾವರಣದಲ್ಲಿ ತಮಗೆ ಬೇಕಾದ ರೀತಿಯಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದಾರೆ.

ಆದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಒಳಾವರಣ ಪ್ರವೇಶಿಸದಂತೆ ಚಿತ್ರೀಕರಣ ತಂಡದವರು ಅಡ್ಡಿಪಡಿಸುತ್ತಿದ್ದಾರೆ. ವಾಸ್ತುಶಿಲ್ಪವನ್ನೇ ನೋಡುವ ಉದ್ದೇಶದಿಂದ ದೇವಸ್ಥಾನಕ್ಕೆ ಆಗಮಿಸುವ ಪ್ರವಾಸಿಗರಿಗೆ ದೇವಸ್ಥಾನದ ಒಳಕ್ಕೆ ಬಿಡದಿರುವುದರಿಂದ ಅವರು ನಿರಾಶೆಯಿಂದ ಮರಳಬೇಕಾಗಿದೆ. ಪ್ರವಾಸಿಗರನ್ನೇ ನೆಚ್ಚಿಕೊಂ ಡಿರುವ ಸ್ಥಳೀಯರೂ ಕೂಡ ಇದರಿಂದ ಅಸಮಾಧಾನಗೊಂಡಿದ್ದಾರೆ.ಇದರಿಂದ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಭಾರತದಲ್ಲಿ ಪ್ರವಾಸೋದ್ಯಮವನ್ನು ನಿರ್ವಹಿಸುವ ರೀತಿ ಮೇಲೆಯೇ ಬೇಸರ ಮೂಡುವಂತಹ ಸಂದರ್ಭ ಇಲ್ಲಿ ಸೃಷ್ಟಿಯಾಗುತ್ತಿದೆ. 

ದೇವರ ದರ್ಶನಕ್ಕೂ ಅಡ್ಡಿ: ದೇವರನ್ನು ಪ್ರವೇಶಿಸುವ ಮುಖ್ಯದ್ವಾರದಲ್ಲೂ ಚಿತ್ರೀಕರಣ ನಡೆಯುತ್ತಿರುವುದರಿಂದ ದೇವರ ದರ್ಶನಕ್ಕೆ ತೆರಳುವುದು ಕಷ್ಟವಾಗಿದ್ದು, ಸಾರ್ವಜನಿಕರಿಗೆ ತೊಂದರೆ ಕೊಡುವ ರೀತಿ ಚಿತ್ರೀಕರಣ ಮಾಡಲು ಇಲಾಖೆ ಏಕೆ ಅನುಮತಿ ನೀಡಬೇಕು ಎಂದು ಹಲವು ಸಂಘ ಸಂಸ್ಥೆಗಳು ಪ್ರಶ್ನಿಸಿವೆ. 

ಭದ್ರತೆ: ದೇವಾಲಯಕ್ಕೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ ಎಂದು ಭಾರಿ ಬಂದೋಬಸ್ತು ಮಾಡಲಾಗಿತ್ತು. ಆದರೆ ಈಗ ಚಿತ್ರೀಕರಣದ ನೆಪದಲ್ಲಿ ಇಡೀ ದೇವಾಲಯವನ್ನು ಡ್ರೋನ್‌ ಬಳಸಿ ಸಂಪೂರ್ಣವಾಗಿ ಚಿತ್ರೀಕರಿಸಲಾಗುತ್ತಿದೆ. ಇದರಿಂದ ಮೊದಲೇ ಅಪಾಯದಲ್ಲಿರುವ ದೇವಸ್ಥಾನದ ಭದ್ರತೆಗೆ ಸಮಸ್ಯೆಯಾಗಲಿದೆ ಎಂದು ಇಲ್ಲಿನ ನಾಗರಿಕರು ಆತಂಕವ್ಯಕ್ತಪಡಿಸುತ್ತಿದ್ದಾರೆ.ಈ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದ ತಾಲೂಕು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಐ.ಎನ್‌.ಅರುಣಕುಮಾರ್‌, ದೇವಾಲಯದಲ್ಲಿ ಚಿತ್ರೀಕರಣ ನಡೆಸಲು ಕೇಂದ್ರ ಪುರಾತತ್ವ ಇಲಾಖೆ ಅನುಮತಿ ನೀಡಿರುವ ಕ್ರಮ ಸರಿಯಲ್ಲ.

Advertisement

ದೇವಾಲಯದಲ್ಲಿ ಚಿತ್ರೀಕರಣ ಮಾಡುವಾಗ ಸಾರ್ವಜನಿಕರಿಗೆ ಸಮಸ್ಯೆ ಬಾರದ ರೀತಿ ಚಿತ್ರೀಕರಿಸಬೇಕು. ಅನುಮತಿ ಸಿಕ್ಕಿದೆ ಎಂದು ಜನರನ್ನು ದೇವಸ್ಥಾನದೊಳಕ್ಕೆ ಬಿಡದಂತೆ ಶೋಷಣೆ ಮಾಡುವುದು ತಪ್ಪು. ಈ ಹಿಂದೆ ದೇವಾಲಯದ ಒಳಗೆ ಹೊಯ್ಸಳ ಉತ್ಸವ ಮಾಡಲು ಇದೇ ಪುರಾತತ್ವ ಇಲಾಖೆ ಅನುಮತಿ ನೀಡದ್ದರಿಂದ ದೇವಾಲಯದ ಹೊರಭಾಗದಲ್ಲಿ ಉತ್ಸವ ನಡೆಸಲಾಗಿತ್ತು. ಸ್ಥಳೀಯರಿಗೆ ಅವಕಾಶ ನೀಡದ ಇಲಾಖೆ ಹೊರಗಿನವರಿಗೆ ಚಿತ್ರೀಕರಣಕ್ಕೆ ಯಾಕೆ ಅವಕಾಶ ನೀಡಲಾಗಿದೆ ಎಂದು ಪ್ರಶ್ನಿಸಿದರು.

ಸಾರ್ವಜನಿಕರ ಅಸಮಾಧಾನದ ಮಾಹಿತಿ ಪಡೆದ ಬೇಲೂರು ವೃತ್ತ ನಿರೀಕ್ಷಕ ಲೋಕೇಶ್‌ ಚಿತ್ರ ತಂಡದ ಮುಖ್ಯಸ್ಥರ ಜೊತೆ ಮಾತನಾಡಿ, ಸಾರ್ವಜನಿಕರಿಗೆ ಭಕ್ತಾಧಿಗಳಿಗೆ ಮತ್ತು ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಚಿತ್ರೀಕರಿಸಬೇಕು ಎಂದು ಸೂಚನೆ ನೀಡಿದರು. ಈ ದೇವಾಲಯದ ಉಸ್ತುವಾರಿಯನ್ನು ಮುಜರಾಯಿ ಮತ್ತು ಪುರತತ್ವ ಎರಡು ಇಲಾಖೆಗಳು ನಿರ್ವಹಿಸುತ್ತಿವೆ ದೇವರ ಪೂಜೆ ಕೈಂಕರ್ಯ ಮತ್ತು

ಆಡಳಿತವನ್ನು ಮುಜಾರಾಯಿ ಇಲಾಕೆ ನೋಡಿಕೊಂಡರೆ ದೇವಾಲಯದ ವಾಸ್ತುಶಿಲ್ಪಿಕಲೆಗಳ ರಕ್ಷಣೆಯನ್ನು ಪುರತತ್ವ ಇಲಾಖೆ ನೋಡಿಕೊಳ್ಳುತ್ತಿದೆ ಇದರಿಂದ ಸಾರ್ವಜನಿಕರಿಗೆ ತೀವ್ರ ಗೊಂದಲವಿದ್ದು ಸಮಸ್ಯೆಗಳನ್ನು ಯಾರ ಹತ್ತಿರ ಹೇಳಿಕೊಳ್ಳುವುದು ಎನ್ನುವುದೆ ಇಲ್ಲಿನ ಸಮಸ್ಯೆಯಾಗಿದ್ದು ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸುವ ಸುಂದರ ದೇವಾಲಯವನ್ನು ಬೇಕಾ ಬಿಟ್ಟಿ ಉಪಯೋಗಿಸದೆ ಇಲಾಖೆಗೆಳು ದೇವಾಲಯವನ್ನು ಸಂರಕ್ಷಿಸಲು ಮುಂದಾಗುವುದು ಅಗತ್ಯವಾಗಿದೆ.

ದೂರವಾಣಿ ಮೂಲಕ ಉದಯವಾಣಿಯೊಂದಿಗೆ ಮಾತನಾಡಿದ ಕೇಂದ್ರ ಪುರಾತತ್ವ ಇಲಾಖೆಯ ಜೂನಿಯರ್‌ ಕನ್ಸ್‌ರ್‌ವೆàಟರ್‌ ಕಾಮತ್‌, ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡದವರು ದೆಹಲಿಯಲ್ಲಿಯೇ ಅನುಮತಿ ಪಡೆದುಕೊಂಡು ಬಂದಿದ್ದಾರೆ. 7 ದಿನ ಚಿತ್ರೀಕರಣ ನಡೆಯಲಿದ್ದು, ಪ್ರತಿ ದಿನ 50 ಸಾವಿರ ರೂ.ನಂತೆ ಚಿತ್ರೀಕರಣ ತಂಡ ಹಣ ಪಾವತಿಸುತ್ತಿದೆ.ಚಿತ್ರೀಕರಣಕ್ಕೆ ಅನುಮತಿ ನೀಡುವಾಗ ಪ್ರವಾಸಿಗರಿಗೆ ಅಡ್ಡಿಯನ್ನುಂಟು ಮಾಡಬಾರದು, ಅಂದಗೆಡಿಸಬಾರದು ಮುಂತಾದ ನಿರ್ಬಂಧಗಳನ್ನು ಹಾಕಿರಲಾಗುತ್ತದೆ. ನಿರ್ಬಂಧವನ್ನು ಉಲ್ಲಂ ಸಿದರೆ ಆ ಬಗ್ಗೆ ವರದಿ ಕಳುಹಿಸಲಾಗುವುದು. ಅವರೇ ಮುಂದಿನ ಕ್ರಮ ಜರುಗಿಸಲಿದ್ದಾರೆ.

ಪುರಾತತ್ವ ಇಲಾಖೆ ಕೇವಲ ಹಣ ಮಾಡುವ ಉದ್ದೇಶ ಹೊಂದಬಾರದು. ನಾಡಿನ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಹೊಯ್ಸಳರ ಕಾಲದ ಗತವೈಭವವನ್ನು ಸಾರುವ ದೇವಾಲಯದ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಸರ್ಕಾರ ಮುಂದಿನ ದಿನಗಳಲ್ಲಿ ಚಿತ್ರೀಕರಣಕ್ಕೆ ದೇವಾಲಯವನ್ನು ನೀಡಿದರೆ ಸಂಘಟನೆಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
-ಐ.ಎನ್‌.ಅರುಣಕುಮಾರ್‌, ತಾಲೂಕಾಧ್ಯಕ್ಷ, ಜಯಕರ್ನಾಟಕ ಸಂಘಟನೆ

ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸುವ ಬಗ್ಗೆ ಇಲ್ಲಿಂದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಪುರಾತತ್ವ ಇಲಾಖೆಯಿಂದ ಅನುಮತಿ ಪಡೆದಿದ್ದರೆ ಸಾಕು. ಆ ಅನುಮತಿ ಆಧಾರದಲ್ಲಿ ಭದ್ರತೆ ನೀಡುವಂತೆ ಸ್ಥಳೀಯ ಪೊಲೀಸರಿಗೆ ಚಿತ್ರತಂಡದವರು ಮನವಿ ಸಲ್ಲಿಸಿ ಅಗತ್ಯ ಹಣ ಪಾವತಿಸಿದರೆ ಭದ್ರತೆ ನೀಡಲಾಗುವುದು. ಚಿತ್ರೀಕರಣದ ವೇಳೆ ಇತರೆ ಸಮಸ್ಯೆಯಾದರೆ ಮಾತ್ರ ನಾವು ಮಧ್ಯಪ್ರವೇಶಿಸುತ್ತೇವೆ.
-ರಾಹುಲ್‌ ಶಹಾಪುರ್‌ವಾಡ್‌, ಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next