Advertisement
ಹೌದು, ರಾಜಕೀಯರಹಿತವಾಗಿದ್ದ ಸಂತ್ರಸ್ತರ ಹೋರಾಟ ಸಮಿತಿ, ದಿ.ವಾಸಣ್ಣ ದೇಸಾಯಿ ಅವರ ನಿಧನದ ಬಳಿಕ ಇಬ್ಭಾಗಗೊಂಡಿವೆ. ಮಾಜಿ ಸಚಿವ ಅಜಯಕುಮಾರ ಸರನಾಯಕ ಅಧ್ಯಕ್ಷತೆಯ ಒಂದು ಸಮಿತಿ ಇದ್ದರೆ, ದಿ.ವಾಸಣ್ಣ ದೇಸಾಯಿ ಅವರ ಪುತ್ರ ಅದೃಶ್ಯಪ್ಪ ದೇಸಾಯಿ ಅವರ ನೇತೃತ್ವದ ಮತ್ತೂಂದು ಸಮಿತಿ ಜಿಲ್ಲೆಯಲ್ಲಿವೆ. ಇವರೆಡರ ಮಧ್ಯೆ ಸಮಾನ ಮನಸ್ಕರ ಮತ್ತೂಂದು ಸಮಿತಿ ಇದ್ದು, ಅವರಿಗೆ ಎಲ್ಲ ರೀತಿಯ ಬಲ ಕಡಿಮೆ ಎಂಬ ಮಾತಿದೆ.
Related Articles
Advertisement
ಭರವಸೆ ಕೊಟ್ಟು ಉಲ್ಟಾ ಪರಂಪರೆ: ಕಳೆದ 2013ರಲ್ಲಿ ಕಾಂಗ್ರೆಸ್‌ನ ಎಲ್ಲಾ ನಾಯಕರು, ಕೂಡಲಸಂಗಮಕ್ಕೆ ಪಾದಯಾತ್ರೆ ಮೂಲಕ ಬಂದು, ಯುಕೆಪಿ ಯೋಜನೆಗೆ ಪ್ರತಿವರ್ಷ 10 ಸಾವಿರ ಕೋಟಿ ಅನುದಾನ ನೀಡಿ, ಐದು ವರ್ಷದಲ್ಲಿ ಎಲ್ಲ ಯೋಜನೆ, ಭೂಸ್ವಾಧೀನ, ಪುನರ್ವಸತಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಗೆದ್ದು, ಸಿದ್ದರಾಮಯ್ಯ ಸಿಎಂ ಕೂಡ ಆದರು. ಅದೇ ವರ್ಷ ಆಲಮಟ್ಟಿಗೆ ಬಾಗಿನ ಅರ್ಪಿಸಲು ಬಂದಾಗ, ಈ ಕುರಿತು ಮಾಧ್ಯಮದವರು ಪ್ರಶ್ನಿಸಿದರೆ, ನಾವು ಯುಕೆಪಿಗೆ 10 ಸಾವಿರ ಕೊಡುತ್ತೇವೆ ಎಂದಿಲ್ಲ, ರಾಜ್ಯದ ನೀರಾವರಿ ಯೋಜನೆಗೆ 10 ಸಾವಿರ ಕೋಟಿ ಎಂದಿದ್ದೇವೆ ಎಂದು ಹೇಳಿಕೊಂಡರು. ಈ ಕುರಿತು ರಾಜಕೀಯ ಆರೋಪ-ಪ್ರತ್ಯಾರೋಪ ನಡೆದವು.
ಬಿಜೆಪಿಯಿಂದಲೂ ಅದೇ ರಾಗ: ಕಾಂಗ್ರೆಸ್ ಬಳಿಕ, ಇದೀಗ ಬಿಜೆಪಿ ನಾಯಕರೂ ಯುಕೆಪಿ ವಿಷಯದಲ್ಲಿ ಉಲ್ಟಾ ಹೊಡೆದಿದ್ದಾರೆ. ಸ್ವತಃ ಯಡಿಯೂರಪ್ಪ ಅವರು, 2018ರ ಚುನಾವಣೆ ವೇಳೆ ನಗರಕ್ಕೆ ಬಂದಾಗ, ಭೂಮಿ ಕಳೆದುಕೊಳ್ಳುವ ರೈತರಿಗೆ ಯೋಗ್ಯ ಬೆಲೆ ನಿಗದಿ ಮಾಡಲು ಭೂ ಬೆಲೆ ನಿರ್ಧರಣಾ ಸಮಿತಿ ಮಾಡುತ್ತೇವೆ ಎಂದಿದ್ದರು. ಆದರೆ, ಇದೀಗ ಡಿಸಿಎಂ ಕಾರಜೋಳರು, ಕಾನೂನು ಪ್ರಕಾರ ಸಂತ್ರಸ್ತರಿಗೆ ಪರಿಹಾರ ದೊರೆಯಲಿದೆ ಎಂದು ಹೇಳುವ ಮೂಲಕ ಉಲ್ಟಾ ಹೊಡೆದಿದ್ದಾರೆ. ಇದೇ ಕಾರಜೋಳರು, 2015ರಲ್ಲಿ ನಡೆದ ಸಂತ್ರಸ್ತರ ಹೋರಾಟದ ವೇಳೆ ಜಿಲ್ಲಾಡಳಿತ ಭವನದ ಎದುರು ಮಾತನಾಡಿದ ಮಾತುಗಳು ಸ್ಮರಿಸಿಕೊಳ್ಳಲಿ ಎಂದು ಹೇಳುವ ಮನಸ್ಥಿತಿಯೂ ಸಂತ್ರಸ್ತರ ಹೋರಾಟ ಸಮಿತಿಗಳು ಮಾಡುತ್ತಿಲ್ಲ ಎಂಬ ಅಸಮಾಧಾನ 3ನೇ ಹೋರಾಟ ಸಮಿತಿ ವ್ಯಕ್ತಪಡಿಸಿದೆ.
ಸಂತ್ರಸ್ತರು ಎಚ್ಚೆತ್ತುಕೊಳ್ಳಲಿ: ಚುನಾವಣೆ ಬಂದಾಗೊಮ್ಮೆ, ಗೆದ್ದ ಬಳಿಕ ಮತ್ತೂಂದು ರೀತಿ ಹೇಳಿಕೆ ಕೊಡುತ್ತ, 50 ವರ್ಷವಾದರೂ ಕೃಷ್ಣಾ ನದಿ ನೀರು ಸದ್ಭಳಕೆ ಹಾಗೂ ನೀರಾವರಿ ಯೋಜನೆ, ಪುನರ್ವಸತಿ, ಭೂಸ್ವಾಧೀನ ಪೂರ್ಣಗೊಳಿಸದ ಎಲ್ಲ ರಾಜಕೀಯ ಪಕ್ಷಗಳ ಧೋರಣೆ ಕುರಿತು ಸಂತ್ರಸ್ತರು ಎಚ್ಚೆತ್ತುಕೊಳ್ಳಬೇಕಿದೆ. ಎರಡು ದಶಕಗಳ ಹಿಂದೆ ನಡೆಯುತ್ತಿದ್ದ ಹೋರಾಟ, ಆ ಒಗ್ಗಟ್ಟು ಪ್ರದರ್ಶನಗೊಳ್ಳಬೇಕಿದೆ ಎಂಬುದು ಪ್ರಜ್ಞಾವಂತರ ಒತ್ತಾಯ.
-ಶ್ರೀಶೈಲ ಕೆ. ಬಿರಾದಾರ