Advertisement
ಚಿಕ್ಕೋಡಿ ತಾಲೂಕಿನ ಮಾಂಜರಿ, ಅಂಕಲಿ ಗ್ರಾಮಗಳು ಪ್ರವಾಹಕ್ಕೆ ಸಿಕ್ಕು ನಲುಗಿ ಹೋಗಿದ್ದವು. ಈಗ ಪ್ರವಾಹ ಕಡಿಮೆಯಾದ ಮೇಲೆ ಗ್ರಾಮಸ್ಥರ ನೋವಿನ ನುಡಿಗಳಿವು. ಕಳೆದ 20 ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆ ಮತ್ತು ಕೊಯ್ನಾ ಹಾಗೂ ವಿವಿಧ ಜಲಾಶಯಗಳಿಂದ ಹರಿದು ಬಂದಿರುವ ಅಪಾರ ಪ್ರಮಾಣದ ನೀರಿನಿಂದ ಮಾಂಜರಿ, ಅಂಕಲಿ ಗ್ರಾಮಗಳಿಗೆ ನೀರು ನುಗ್ಗಿದೆ. ಇದರಿಂದ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಕಳೆದುಕೊಂಡ ನಿರಾಶ್ರಿತರು ಮರಳಿ ಸ್ವಗ್ರಾಮಗಳಿಗೆ ತೆರಳಿ ಪ್ರವಾಹದಿಂದ ಉಂಟಾದ ಹಾನಿಯನ್ನು ನೋಡಿ ಅತೀ ನೋವಿನಲ್ಲಿದ್ದಾರೆ. ಅವರ ಮಾತುಗಳು ನಿಜಕ್ಕೂ ಹೃದಯ ತಟ್ಟುವಂತಿವೆ.
Related Articles
Advertisement
ಮನೆಗಳಲ್ಲಿ ಹೋಗಲು ಭಯ: ಕಂಡರಿಯದ ಭೀಕರ ಪ್ರವಾಹದಿಂದ ಈ ಮಟ್ಟದ ಪ್ರಹಾರವಾಗುತ್ತಿದೆಯೆಂದು ನಮಗೆ ಲೆಕ್ಕವೇ ಸಿಗಲಿಲ್ಲ, ಹೀಗಾಗಿ ನದಿ ನೀರು ಮನೆ ಬಾಗಿಲು ಬಡಿಯುವ ವೇಳೆಯಲ್ಲಿ ರಾತ್ರೋರಾತ್ರಿ ಮನೆ ಬಿಟ್ಟು ಹೋಗಿದ್ದೆವು. ಈಗ ಮನೆಗೆ ಬಂದಿದ್ದೇವೆ. ಆದರೆ ಮನೆಯಲ್ಲಿ ಹೋಗಲು ಭಯವಾಗುತ್ತಿದೆ. ಒಂದು ವಾರದಿಂದ ಮನೆ ನೀರಿನಲ್ಲಿ ನಿಂತುಕೊಂಡಿದೆ. ಹೀಗಾಗಿ ಹಾವು, ಚೇಳು, ಝರಿ ಹೀಗೆ ವಿಷಕಾರಿ ಕೀಟಗಳು ಮನೆಯೊಳಗೆ ಇರಬಹುದು ಹೀಗಾಗಿ ಮನೆಯೊಳಗೆ ಹೋಗಲು ತುಂಬ ಭಯವಾಗುತ್ತಿದೆಯೆಂದು ಮಾಂಜರಿ ಗ್ರಾಮದ ವಿಜಯ ಬಾಬರ ಹೇಳುತ್ತಾರೆ.
ಸ್ವಚ್ಛತೆ ಕಾರ್ಯ ಜೋರು: ಹಿರಿಹೊಳೆ ಪ್ರವಾಹಕ್ಕೆ ಸಿಕ್ಕು ನಲುಗಿ ಹೋಗಿರುವ ಕೃಷ್ಣಾ ನದಿ ತೀರದ ಮಾಂಜರಿ ಮತ್ತು ಅಂಕಲಿ ಗ್ರಾಮದ ಜನರು ಈಗ ಮನೆಗೆ ತೆರಳಿ ಸ್ವಚ್ಛತೆ ನಡೆಸಿದ್ದಾರೆ. ಗ್ರಾಮದ ಕೆಲ ಕಡೆಗಳಲ್ಲಿ ನೀರು ಹರಿಯುತ್ತಿದೆ. ನೀರು ಇದ್ದ ಕಡೆಗೆ ಹೋಗಿ ಭಾಂಡೆ, ಬಟ್ಟೆ, ಹಾಸಿಗೆ ತೊಳೆಯುವ ಕಾರ್ಯ ಭರದಿಂದ ನಡೆದಿದೆ.
ಸ್ವಗ್ರಾಮಕ್ಕೆ ಮರಳುತ್ತಿರುವ ಗ್ರಾಮಸ್ಥರು:
ಮನೆಗಳಲ್ಲಿರುವ ದಿನಸಿ ವಸ್ತುಗಳು ನೀರಲ್ಲಿ ತೇಲಾಡುತ್ತಿವೆ. ಕಾಳು ಕಡಿಗಳು ಮೊಳಕೆ ಒಡೆದಿವೆ. ಬಟ್ಟೆ, ಬರೆಗಳು ಕೊಳೆತ ವಾಸನೆ ಬರುತ್ತಿವೆ. ಗ್ರಾಮದ ರಸ್ತೆಗಳೆಲ್ಲ, ಹಾಳಾಗಿವೆ. ಗಟಾರು ಕಿತ್ತು ಹೋಗಿವೆ.
ಬೇಸಿಗೆಯಲ್ಲಿ ಕುಡಿಯಲು ನೀರು ಸಿಗಲಿಲ್ಲ, ಈಗ ಅದೇ ನೀರಿನಿಂದ ನಮ್ಮ ಬದುಕು ಕೊಚ್ಚಿಕೊಂಡು ಹೋಗಿದೆ. ಕೊಯ್ನಾ ಮತ್ತು ಆಲಮಟ್ಟಿ ಡ್ಯಾಂದಿಂದ ನಮಗೆ ಯಾವುದೇ ಪ್ರಯೋಜನವಿಲ್ಲ, ಬೇಸಿಗೆಯಲ್ಲಿ ನೀರು ಇದ್ದರೂ ಕೊಯ್ನಾದಿಂದ ನೀರು ಬರಲಿಲ್ಲ, ಈಗ ಆಲಮಟ್ಟಿ ಡ್ಯಾಂದಿಂದ ನೀರು ತಡೆಹಿಡಿದಿದ್ದು ಮತ್ತು ಕೊಯ್ನಾದಿಂದ ಅಪಾರ ಪ್ರಮಾಣದ ನೀರು ಬಿಟ್ಟಿರುವುದರಿಂದ ನಮಗೆ ಇಷ್ಟೊಂದು ಪ್ರಮಾಣದ ಹಾನಿಯಾಗಿದೆ.• ಕುಮಾರ ಬಾಬರ, ಮಾಂಜರಿ ಗ್ರಾಮದ ನಿರಾಶ್ರಿತ
•ಮಹಾದೇವ ಪೂಜೇರಿ