ಬಾಗಲಕೋಟೆ: ಊರು ಬಿದ್ರು, ಊರಾನ್ ದೇವರು ಉಳಿತಾನ್ ಎಂಬ ಗಾದೆ ಮಾತು ಹಳ್ಳಗರಲ್ಲಿದೆ. ಆದರೆ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದವರು, ನಮ್ಮನ್ನು ಕಾಪಾಡು ಎಂದು ಕೈ ಮುಗಿದು ಕೇಳಲು ದೇವಸ್ಥಾನಗಳೂ ಉಳಿದಿಲ್ಲ.
ಹೌದು, ಇದು ಹಳ್ಳಿಗರ ಬದುಕು ಬುಡಮೇಲು ಮಾಡಿದ ಪ್ರವಾಹ. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ ಬಾಗಲಕೋಟೆ ಜಿಲ್ಲೆಗೆ, ಪ್ರವಾಹ ಈ ಬಾರಿ ಹೊಸದಾಗೇನು ಬಂದಿಲ್ಲ. 2007, 2009ರಲ್ಲಿ ಪ್ರವಾಹ ಕಂಡಿದ್ದಾರೆ. ಆಗ ಪ್ರವಾಹಕ್ಕೆ ಸಿಲುಕಿದವರೇ ಈಗ ಮತ್ತೆ ಪ್ರವಾಹಕ್ಕೊಳಗಾಗಿದ್ದಾರೆ. ಆದರೆ, ಅಂದಿನ ಪ್ರವಾಹಕ್ಕೂ, ಇಂದಿನ ಭೀಕರತೆಗೂ ಬಹಳಷ್ಟು ವ್ಯತ್ಯಾಸವಿದೆ ಎನ್ನುತ್ತಾರೆ ಸ್ವತಃ ನಿರಾಶ್ರಿತರು.
ಕೈ ಮುಗಿಯಲು ದೇವರೂ ಉಳಿದಿಲ್ಲ: ಮನುಷ್ಯ ತನಗೆ ಯಾವುದೇ ಕಷ್ಟ ಬಂದರೂ ಉಪವಾಸ ವೃತ ಮಾಡಿ, ದೇವರಿಗೆ ಕೈ ಮುಗಿದು ಭಕ್ತಿಯಿಂದ ಕೇಳಿಕೊಳ್ಳುವುದು ನಮ್ಮ ಸಂಪ್ರದಾಯ. ಆದರೆ, ಪ್ರವಾಹಕ್ಕೆ ತುತ್ತಾದ ನೂರಾರು ಹಳ್ಳಿಗಳಲ್ಲಿ ದೇವಸ್ಥಾನಗಳೂ ಉಳಿದಿಲ್ಲ. ಮನೆ, ಮಠ, ದೇವಸ್ಥಾನ, ಬೆಳೆ, ಮನೆಯಲ್ಲಿನ ಕಾಳು-ಕಡಿ ಎಲ್ಲವೂ ಕೊಚ್ಚಿಕೊಂಡು ಹೋಗಿದೆ. ದೇವರ ಎದುರು ನಿಂತು ಕೈ ಮುಗಿದು ಸಂಕಷ್ಟ ಹೇಳಿ, ನಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡು ದೇವರೇ ಎಂದು ಕೇಳಲು, ದೇವಸ್ಥಾನ ಬಿದ್ದಿವೆ, ಅಲ್ಲಿನ ದೇವರೂ ಪಕ್ಕಕ್ಕೆ ಸರಿದು ಕುಳಿತಿದ್ದಾನೆ. ಹೀಗಾಗಿ ನಿರಾಶ್ರಿತರು ಯಾರ ಮೊರೆ ಹೋಗೋಣ ಎಂಬಂತೆ ತಲೆಯ ಮೇಲೆ ಕೈಹೊತ್ತು, ಬಿದ್ದ ಮನೆಯ ಎದುರು ಕಣ್ಣೀರುರಿಡುತ್ತಿದ್ದಾರೆ.
ಮಲಪ್ರಭಾ ಮತ್ತು ಘಟಪ್ರಭಾ ನದಿಗಳು ಮೂರೇ ದಿನ ಹರಿದರೂ, 113 ಹಳ್ಳಿಗರ ಬದುಕು ಛಿದ್ರಗೊಳಿಸಿವೆ. ಇನ್ನು ಕೃಷ್ಣಾ ನದಿಯಂತೂ ಹದಿನೈದು ದಿನಗಳಿಂದ ತನ್ನ ವ್ಯಾಪ್ತಿ ಮೀರಿ ಹರಿಯುತ್ತಿದೆ. ಈ ನದಿಯ ನೀರು 81 ಹಳ್ಳಿಗಳಿಗೆ ನುಗ್ಗಿ, ಅಲ್ಲಿನ ಜನರ ಬದುಕು ಮೂರಾಬಟ್ಟೆ ಮಾಡಿದೆ.
ಹಳ್ಳಿಗರ ಬದುಕು ಅಯೋಮಯ: ಮೂರು ನದಿಗಳ ಪ್ರವಾಹಕ್ಕೆ ಜಿಲ್ಲೆಯ 9 ತಾಲೂಕಿನ 194 ಹಳ್ಳಿಗಳ ಬದುಕು ಮೂರಾಬಟ್ಟೆಯಾಗಿದೆ. ಪ್ರವಾಹಕ್ಕೆ ತುತ್ತಾದ ಯಾವ ಗ್ರಾಮಕ್ಕೆ ಕಾಲಿಟ್ಟರೂ ಶ್ರಾವಣ ಸಂಭ್ರಮವಿಲ್ಲ. ಎಲ್ಲರಲ್ಲೂ ಈ ವರ್ಷ ಶ್ರಾವಣ ನಮಗ್ ಒಳ್ಳೆಯದ್ ಮಾಡ್ಲಿಲ್ರಿ ಎನ್ನುತ್ತಲೇ ಮಾತು ಆರಂಭಿಸುತ್ತಿದ್ದಾರೆ.
ಒಟ್ಟಾರೆ, ಜಿಲ್ಲೆಯ ಗ್ರಾಮೀಣರ ಬದುಕು ಪ್ರವಾಹಕ್ಕೆ ನಲುಗಿ ಹೋಗಿದೆ. ಅವರೆಲ್ಲ ಸಧ್ಯ ಪರಿಹಾರ ಕೇಂದ್ರದಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ. ಅವರು ಪುನಃ ತಮ್ಮೂರಿನ ಮನೆಗೆ ಹೋಗಿ ನೆಲೆಸಲು ಹಲವು ದಿನಗಳೇ ಬೇಕು. ಅದರಲ್ಲೂ ಬಿದ್ದ ಮನೆಗಳ ದುರಸ್ತಿ, ಪುನರ್ ನಿರ್ಮಾಣ ಎಂದು ಬದುಕು ಕಟ್ಟಿಕೊಳ್ಳಬೇಕು. ಅದಕ್ಕೆಲ್ಲ ಸರ್ಕಾರ ಕೊಡುವ ಪರಿಹಾರ ಸಾಲುತ್ತಾ ಎಂಬುದು ಅವರ ಪ್ರಶ್ನೆ.
•ಶ್ರೀಶೈಲ ಕೆ. ಬಿರಾದಾರ