Advertisement

ಗೊಣಗನೂರು ಗೋಳಾಟ!

12:09 PM Aug 21, 2019 | Suhan S |

ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರು ರಸ್ತೆಯ ಮೇಲೆ ಸಾಲಾಗಿ ಕುಳಿತು ದಾನಿಗಳು ನೀಡುವ ಆಹಾರ ಬಟ್ಟೆ ಬರೆ ಬ್ರೆಡ್‌ ಬಿಸ್ಕಿಟ್ ತೆಗೆದುಕೊಳ್ಳುವದನ್ನು ನೋಡಿದಾಗ ಎಂಥವರ ಕರುಳೂ ಚುರುಕ್‌ ಎನ್ನದೇ ಇರದು.

Advertisement

ಎಂದೂ ಯಾರ ಬಳಿಯೂ ಕೈ ಎತ್ತಿ ಕೇಳದವರು ಇಂದು ಅನಿವಾರ್ಯವಾಗಿ ಕೈಮುಂದೆ ಮಾಡಿ ಪಡೆದುಕೊಳ್ಳಬೇಕಾಗಿದೆ. ಇದಕ್ಕೆಲ್ಲ ಕಾರಣವಾಗಿದ್ದು ಮಲಪ್ರಭಾ ಜಲಾಶಯದಿಂದ ಹರಿದು ಬಂದ ನೀರು.

ಇಲ್ಲಿ ಧಾರಾಕಾರವಾಗಿ ಮಳೆ ಆಗಿಲ್ಲ. ಸತತವಾಗಿ ಮಳೆಯೂ ಬರುವುದಿಲ್ಲ. ಆದರೆ ರಾತ್ರೋರಾತ್ರಿ ಜಲಾಶಯದಿಂದ ಹರಿದು ಬಂದ ನೀರು ಎಲ್ಲರನ್ನೂ ಬೀದಿಗೆ ತಂದು ನಿಲ್ಲಿಸಿದೆ. ನೆರೆಯ ನೀರು ಇಳಿಯುತ್ತಿದ್ದಂತೆ ನದಿ ತೀರದ ಒಂದೊಂದೇ ಹಳ್ಳಿಯ ಭಯಾನಕ ಚಿತ್ರ ಅನಾವರಣಗೊಳ್ಳುತ್ತಿದೆ. ದಾನಿಗಳು ನೀಡುವ ಬಟ್ಟೆ ಬರೆ ಹಾಗೂ ಆಹಾರ ಇವರ ಜೀವ ಹಿಡಿದಿವೆ.

ಈ ಭೀಕರ ನೆರೆ ಹಾವಳಿಯ ಸಂಕಷ್ಟದಿಂದ ರಾಮದುರ್ಗ ತಾಲೂಕಿನ ಗೊಣಗನೂರ ಗ್ರಾಮದ ಜನರು ಹೊರತಾಗಿಲ್ಲ. ಇನ್ನೂ ದುರ್ದೈವದ ಸಂಗತಿ ಎಂದರೆ ಈ ಗ್ರಾಮದ ಜನರಿಗೆ ಪರಿಹಾರ ಕೇಂದ್ರಗಳಿಲ್ಲ. ಉಳಿದು ಕೊಳ್ಳಲು ಮನೆಗಳಿಲ್ಲ. ಇದ್ದ ಮನೆಗಳು ಮಲಪ್ರಭಾ ನದಿಯ ಪ್ರವಾಹಕ್ಕೆ ನೀರು ಪಾಲಾಗಿವೆ. ಈಗ ಇವರಿಗೆ ನೆಲವೇ ಹಾಸುಗೆ. ಆಕಾಶವೇ ಹೊದಿಕೆ ಎಂಬಂತಾಗಿದೆ.

ರಾಮದುರ್ಗ ತಾಲೂಕಿನ ಖಾನಪೇಟದ ಧನಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಹಿಂದಿರುವ ಗೊಣಗನೂರ ಬಳಿಯ ಗುಡ್ಡದಲ್ಲಿ ಗುಡಿಸಲು ಹಾಕಿಕೊಂಡು ನೆಲೆಸಿರುವ ನೂರಾರು ಸಂತ್ರಸ್ತರ ದುಸ್ಥಿತಿ ತೀರಾ ಶೋಚನೀಯವಾಗಿದೆ. ರಾತ್ರಿ ಆದರೆ ಹೆದರಿಕೆ. ನೀರಿನ ಪ್ರವಾಹ ಕಡಿಮೆಯಾದರೂ ಆತಂಕ ಮಾತ್ರ ದೂರವಾಗಿಲ್ಲ. ಪರಿಹಾರ ಕೇಂದ್ರಗಳಿಲ್ಲದೇ ಗುಡ್ಡದ ಕೆಳಗಡೆ ಸಣ್ಣ ಸಣ್ಣ ಗುಡಿಸಲುಗಳನ್ನು ಹಾಕಿಕೊಂಡಿರುವ ನೂರಾರು ಜನರು ಯಾರಾದರೂ ದಾನಿಗಳು ಬಂದರೆ ರಸ್ತೆಗೆ ಓಡೋಡಿ ಬರುತ್ತಾರೆ.

Advertisement

ರಸ್ತೆಯ ಮೇಲೆಯೇ ಸಾಲಾಗಿ ಕುಳಿತು ಅವರು ಕೊಡುವ ವಸ್ತುಗಳನ್ನು ನಯವಾಗಿ ಸ್ವೀಕರಿಸುತ್ತಾರೆ. ಆದರೆ ದಾನಿಗಳ ನೀಡುವ ವಸ್ತುಗಾಗಿ ಅವರು ಕೈಚಾಚುವ ಪರಿ ಎಂಥವರಿಗೂ ಕನಿಕರ ಹುಟ್ಟದೇ ಇರದು.

ಈಗಾಗಲೇ ನಾವು ಬೀದಿಗೆ ಬಂದಿದ್ದೇವೆ. ನೀರಿನಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಜೀವ ಇದೆ ಅಂತ ಇದ್ದೇವೆ. ದೂರದಲ್ಲಿ ಕಾಣುವ ಗುಡ್ಡವೇ ನಮ್ಮ ಮನೆ. ಅಲ್ಲಿ ಕರೆಂಟ್ ಇಲ್ಲ. ನೀರೂ ಇಲ್ಲ. ರಾತ್ರಿಯಾದ ಮೇಲೆ ಹುಳಹುಪ್ಪಡಿಗಳ ಕಾಟ. ಹೀಗಾಗಿ ಮನೆಯ ಮುಂದೆ ಬೆಂಕಿ ಹಾಕಿಕೊಂಡೇ ಮಲಗಬೇಕು. ನಮ್ಮ ಈ ಸ್ಥಿತಿ ಯಾರಿಗೂ ಬರುವುದು ಬೇಡ ಎಂದು ಮೈಮೇಲೆ ಟವಲ್ ಹಾಕಿಕೊಂಡಿದ್ದ ಗ್ರಾಮದ ರೈತ ಬಸಪ್ಪ ಕಣ್ಣೀರು ಒರಸುತ್ತಲೇ ಹೇಳಿದರು.

ನೆರೆ ಹಾವಳಿಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ ಇದುವರೆಗೆ ಕ್ಷೇತ್ರದ ಶಾಸಕರು ಹಾಗೂ ಸಂಸದರು ಇಲ್ಲಿಗೆ ಬಂದಿಲ್ಲ. ನಮ್ಮ ನೋವು ಕೇಳಿ ಪರಿಹಾರ ದೊರಕಿಸಿಕೊಟ್ಟಿಲ್ಲ ಎಂಬ ನೋವು ಇಲ್ಲಿನ ಜನರಲ್ಲಿದೆ. ಜನಪ್ರತಿನಿಧಿಗಳು ಬರದೇ ಇದ್ದರೂ ದೂರದ ಊರುಗಳಿಂದ ಬರುವ ದಾನಿಗಳ ಸಹಾಯ ಇವರನ್ನು ಇನ್ನೂ ಜೀವಂತವಾಗಿಟ್ಟಿದೆ.

ಹೂವು ವ್ಯಾಪಾರ ಮುಳ್ಳಾಯಿತು:

ಮಲಪ್ರಭಾ ಜಲಾಶಯದ ನೀರು ನಮ್ಮ ಬದುಕನ್ನೇ ಕಸಿದುಕೊಂಡಿದೆ. ನಾವು ಮೊದಲೇ ಸಣ್ಣ ರೈತರು. ಕಡು ಬಡವರು. ನದಿ ಗುಂಟ ನಮ್ಮದು 10 ಗುಂಟೆ ಜಾಗ ಇದೆ. ಅದರಲ್ಲೇ ಹೂವುಗಳನ್ನು ಬೆಳೆದು ವರ್ಷಕ್ಕೆ ಸುಮಾರು ಒಂದು ಲಕ್ಷ ರೂ ಸಂಪಾದನೆ ಮಾಡುತ್ತೀದ್ದೆ. ಗಣೇಶ ಹಬ್ಬ, ದಸರಾ ಹಾಗೂ ದೀಪಾವಳಿ ಸಮಯದಲ್ಲಿ ನಮ್ಮ ವ್ಯಾಪಾರ ಬಹಳ ಜೋರು. ಬೆಳಗಾವಿ, ಮುಂಬೈ, ಪುಣೆ, ಕೊಲ್ಲಾಪುರ ಮೊದಲಾದ ಕಡೆ ನಮ್ಮ ಹೂವು ಹೋಗುತ್ತಿದ್ದವು. ಆದರೆ ಈಗ ಏನೂ ಇಲ್ಲ. ಹಬ್ಬದ ಸಮಯದಲ್ಲೇ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿದ್ದೇವೆ ಎಂದು ಹಸನಸಾಬ ಹವಾಲ್ದಾರ ನೋವಿನಿಂದ ಹೇಳಿದರು.
ಸುರಕ್ಷಿತ ಸ್ಥಳಕ್ಕೆ ಗ್ರಾಮವನ್ನು ಸ್ಥಳಾಂತರಿಸಿ:

ಸುಮಾರು 600 ಕುಟುಂಬಗಳನ್ನು ಹೊಂದಿರುವ ಗೊಣಗನೂರು ಗ್ರಾಮದ ಜನರು ಮಲಪ್ರಭಾ ಜಲಾಶಯದ ಪ್ರವಾಹದಿಂದ ಕಂಗೆಟ್ಟಿದ್ದಾರೆ. ಈ ಹಿಂದೆ ಯಾವ ವರ್ಷವೂ ಇಷ್ಟು ಪ್ರಮಾಣದ ನೀರು ಕಂಡಿಲ್ಲ. ಜಲಾಶಯದಿಂದ ಎಷ್ಟೇ ನೀರು ಬಿಟ್ಟರೂ ನಮಗೆ ಆತಂಕ ಎದುರಾಗಿರಲಿಲ್ಲ. ಇನ್ನು ಮುಂದೆ ಇಲ್ಲಿ ಇರಲು ಭಯವಾಗುತ್ತದೆ. ನಾಳೆ ಕಳಸಾ ಬಂಡೂರಿ ನೀರು ಬಂದರೆ ಪ್ರತಿ ವರ್ಷ ಇದೇ ಸಮಸ್ಯೆ ನಮಗೆ ಅನಿವಾರ್ಯ. ಹೀಗಾಗಿ ಸರಕಾರ ತಕ್ಷಣ ಸುರಕ್ಷಿತ ಸ್ಥಳ ಗುರುತಿಸಿ ಗ್ರಾಮವನ್ನು ಸ್ಥಳಾಂತರ ಮಾಡಬೇಕು ಎನ್ನುತ್ತಾರೆ ಗ್ರಾಮಸ್ಥರು.
•ಕೇಶವ ಆದಿ
Advertisement

Udayavani is now on Telegram. Click here to join our channel and stay updated with the latest news.

Next