Advertisement
ಚುನಾವಣೆ ದಿನಾಂಕ ಅಧಿಕೃತ ಘೋಷಣೆಗೊಂಡ ನಂತರ ಶುರುವಾದ ರಾಜಕೀಯ ಚಟುವಟಿಗಳು, ಚುನಾವಣೆ ಮುಗಿಯುವವರೆಗೂ ಭರದಿಂದ ನಡೆದಿದ್ದವು. ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ತೀವ್ರ ಪೈಪೊಪೋ ನಡೆಸಿ ಪ್ರಚಾರ ಕಾರ್ಯಗಳು ನಡೆಸಿದ್ದವು. ಭಾಲ್ಕಿ ಶಾಸಕರೂ ಆಗಿರುವ ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆ ಹಾಗೂ ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಮಧ್ಯೆ ತುರುಸಿನ ಪೈಪೋಟಿ ನಡೆದಿದೆ. ಈಗ ಒಂದು ತಿಂಗಳ ನಂತರ ಫಲಿತಾಂಶ ಹೊರಬರಲಿದ್ದು, ರಾಜಕೀಯ ಪಕ್ಷಗಳ ಮುಖಂಡರಲ್ಲಿ ಡವ ಡವ ಹೆಚ್ಚಿಸಿದೆ.
Related Articles
Advertisement
ಫಲಿತಾಂಶ ವಿಳಂಬ: ಈ ಬಾರಿ ಲೋಕಸಭೆ ಚುನಾವಣೆಯ ಫಲಿತಾಂಶ ತಡವಾಗಿ ಪ್ರಕಟಗೊಳ್ಳಲಿದೆ. ನ್ಯಾಯಾಲಯದ ಆದೇಶದಂತೆ ಒಂದು ಲೋಕಸಭೆ ಕ್ಷೇತ್ರದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ತಲಾ ಐದು ವಿವಿ ಪ್ಯಾಟ್ ಯಂತ್ರಗಳಲ್ಲಿನ ಮತಗಳ ಎಣಿಕೆ ನಡೆಯಲಿದ್ದು, ಬೀದರ್ ಲೋಕಸಭೆಯ 8 ವಿಧಾನಸಭೆಗಳ ಒಟ್ಟು 40 ವಿವಿಪ್ಯಾಟ್ ಯಂತ್ರಗಳ ಮತ ಎಣಿಕೆ ನಡೆಯಲಿದೆ. ಸಾಮಾನ್ಯವಾಗಿ 12 ಗಂಟೆಗಳ ವರೆಗೆ ಫಲಿತಾಂಶ ಈ ಹಿಂದೆ ಪ್ರಕಟವಾಗುತ್ತಿತ್ತು. ಆದರೆ, ಇದೀಗ ಮಧ್ಯಾಹ್ನ 3ಗಂಟೆ ಬಳಿಕ ಫಲಿತಾಂಶ ನಿಚ್ಚಳವಾಗುವ ನಿರೀಕ್ಷೆಯಿದೆ. ಇವಿಎಂ ಯಂತ್ರಗಳ ಮತ ಎಣಿಕೆ ಹಾಗೂ ವಿವಿಪ್ಯಾಟ್ ಮುದ್ರಿತ ಮತಗಳ ಹೊಂದಾಣಿಕೆ ಈ ಬಾರಿ ನಡೆಯಲಿದೆ.
ಮೊಬೈಲ್ ನಿಷೇಧ: ಮತ ಎಣಿಕೆ ಕೇಂದ್ರಗಳಲ್ಲಿ ಈ ಬಾರಿ ಮೊಬೈಲ್ ಬಳಕೆಗೆ ಸಂಪೂರ್ಣ ನಿಷೇಧ ಹಾಕಲಾಗಿದೆ. ಚುನಾವಣಾ ಅಧಿಕಾರಿಗಳು ಕೂಡ ಮೊಬೈಲ್ ಬಳಕೆಗೆ ನಿಷೇಧ ಹಾಕಲಾಗಿದೆ. ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಮಾಧ್ಯಮ ಕೇಂದ್ರದಲ್ಲಿ ಮೊಬೈಲ್ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ಬರುವ ಸಿಬ್ಬಂದಿಗಳು ಹಾಗೂ ರಾಜಕೀಯ ಪಕ್ಷಗಳ ಏಜೆಂಟರು ಕೂಡ ಮೊಬೈಲ್ ತರದಂತೆ ಈಗಾಗಲೇ ಚುನಾವಣೆ ಆಯೋಗ ಸೂಚಿಸಿದೆ. ಮನೆಯಿಂದ ಮೊಬೈಲ್ ತಂದವರು ಯಾವುದೇ ವಾಹನಗಳಲ್ಲಿ ಇರಿಸದಂತೆ ಕೂಡ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಕಾರಣ ಬಿಸಿಲಿನ ಪ್ರಖರತೆ ಹೆಚ್ಚಿದ್ದು, ಮೊಬೈಲ್ ನ್ಪೋಟಗೊಳ್ಳುವ ಸಾಧ್ಯತೆ ಹೆಚ್ಚಿರುವ ಕಾರಣ ಮನೆಯಿಂದಲೇ ಮೊಬೈಲ್ ತರದಂತೆ ಸೂಚಿಸಿದ್ದಾರೆ.
ಆನ್‌ಲೈನ್‌ಲ್ಲಿ ಫಲಿತಾಂಶ: ಈ ಬಾರಿ ಚುನಾವಣೆಯ ಫಲಿತಾಂಶ ಆನ್‌ಲೈನ್ ಮೂಲಕ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮೂರು ಬಿಎಸ್‌ಎನ್‌ಎಲ್ ಸಂಪರ್ಕ, ಒಂದು ಏರಟೆಲ್ ಇಂಟರ್‌ನೆಟ್ ಸಂರ್ಪಕ ಪಡೆದುಕೊಂಡಿದ್ದಾರೆ. ಅಲ್ಲದೆ, ಯಾವುದೇ ಸಂದರ್ಭದಲ್ಲಿ ಇಂಟರ್‌ನೆಟ್ ಸಮಸ್ಯೆಕಂಡು ಬಂದಲ್ಲಿ ಡೊಂಗಲ್ ಬಳಕ್ಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು 19 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿ ಒಂದು ಹಂತದ ಮತ ಎಣಿಕೆಯ ಮಾಹಿತಿ ಆನ್‌ಲೈನ್‌ಲ್ಲಿ ಲಭ್ಯ ಆಗಲಿದೆ. ಅಲ್ಲದೆ, ಸುವಿಧಾ ಮೊಬೈಲ್ ಆ್ಯಪ್ ಮೂಲಕ ಕೂಡ ಮತ ಎಣಿಕೆಯ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ|ಎಚ್.ಆರ್. ಮಹಾದೇವ ಮಾಹಿತಿ ನೀಡಿದ್ದಾರೆ.
•ದುರ್ಯೋಧನ ಹೂಗಾರ