Advertisement

ಸರಕಾರದ ನಿಯಮದಿಂದ ಹೊಸ ಸದಸ್ಯರಿಗೆ ಇಕ್ಕಟ್ಟು

01:00 AM Jan 21, 2021 | Team Udayavani |

ಬಂಟ್ವಾಳ: ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಗೆದ್ದ ಅಕ್ಷರ ದಾಸೋಹ ಅಡುಗೆ ಸಿಬಂದಿ ಈಗ ಸರಕಾರದ ನಿಯಮದಿಂದ ಕೆಲಸವೋ ಸದಸ್ಯ ಸ್ಥಾನವೋ ಎಂಬ ಇಕ್ಕಟ್ಟಿನಲ್ಲಿದ್ದಾರೆ. ಅಡುಗೆ ಕೆಲಸವನ್ನೂ ಗ್ರಾ.ಪಂ. ಸದಸ್ಯ ಕರ್ತವ್ಯ ನಿರ್ವಹಣೆಯನ್ನೂ ಏಕಕಾಲದಲ್ಲಿ ನಡೆಸುವುದು ಅಸಾಧ್ಯ ಎಂದು ಸರಕಾರ ಪರಿಗಣಿಸಿರುವುದು ಇದಕ್ಕೆ ಕಾರಣ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 20 ಮಂದಿ ಇದರಿಂದ ಕೆಲಸ ಕಳೆದುಕೊಳ್ಳಲಿದ್ದಾರೆ.

Advertisement

ಗ್ರಾ.ಪಂ. ಮತ್ತು ಅಕ್ಷರ ದಾಸೋಹ ಅಡುಗೆ – ಎರಡೂ ಕಡೆ ಕೆಲಸ ಮಾಡಿದರೆ ಅವರು ತಮ್ಮ ಕೆಲಸಕ್ಕೆ ನ್ಯಾಯ ಕೊಡುವುದಕ್ಕೆ ಸಾಧ್ಯವಿಲ್ಲ ಎಂಬ ನಿಲುವನ್ನು ಸರಕಾರ ತಳೆದಿದೆ.

ಬಂಟ್ವಾಳದಲ್ಲೇ ಹೆಚ್ಚು  :

ಉಭಯ ಜಿಲ್ಲೆಗಳ ಪೈಕಿ ಬಂಟ್ವಾಳ ತಾಲೂಕಿನಲ್ಲೇ ಅತ್ಯಧಿಕ, 7 ಮಂದಿ ಅಡುಗೆ ಸಿಬಂದಿ ಗ್ರಾ.ಪಂ.ಗಳಿಗೆ ಚುನಾಯಿತರಾಗಿದ್ದಾರೆ. ಬೆಳ್ತಂಗಡಿಯಿಂದ 6, ಮೂಡುಬಿದಿರೆ, ಮಂಗಳೂರು, ಸುಳ್ಯದಿಂದ ತಲಾ ಒಬ್ಬರು ಚುನಾಯಿತರಾಗಿದ್ದಾರೆ. ಉಡುಪಿಯ ಬೈಂದೂರು ತಾಲೂಕಿನಿಂದ ಇಬ್ಬರು, ಕಾರ್ಕಳ ಮತ್ತು ಕುಂದಾಪುರದಿಂದ ತಲಾ ಒಬ್ಬರು ಚುನಾಯಿತರಾಗಿದ್ದಾರೆ.

ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾದ ಅಕ್ಷರ ದಾಸೋಹ ಅಡುಗೆ ಸಿಬಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಆದೇಶ ನೀಡಿದೆ. ದ.ಕ. ಜಿಲ್ಲೆಯ ಮೂಡುಬಿದಿರೆ, ಮಂಗಳೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ತಾಲೂಕುಗಳ ಒಟ್ಟು   16 ಸಿಬಂದಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ, ಬೈಂದೂರು ತಾಲೂಕುಗಳ ಒಟ್ಟು ನಾಲ್ವರು ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Advertisement

2011ರಲ್ಲೇ ಸರಕಾರದ ಆದೇಶ :

ಇಂಥ ಒಂದು ಆದೇಶವನ್ನು 2011ರಲ್ಲೇ ಶಿಕ್ಷಣ ಇಲಾಖೆಯ ಆಯುಕ್ತರು ನೀಡಿದ್ದರು. ಅರಸೀಕೆರೆ ತಾಲೂಕಿನಲ್ಲಿ ಶಾಲೆಯ ಎಸ್‌ಡಿಎಂಸಿಯವರು ಗ್ರಾ.ಪಂ.ಗೆ ಆಯ್ಕೆಯಾದ ಅಡುಗೆ ಸಿಬಂದಿಗೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈ ಆದೇಶ ಜಾರಿಯಾಗಿತ್ತು.

ಆದರೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ಈ ವಿಚಾರವನ್ನು ಮುಚ್ಚಿಡಲಾಗಿತ್ತು ಎಂಬುದು ಕೆಲಸ ಕಳೆದುಕೊಳ್ಳಲಿರುವ ಸದಸ್ಯರ ವಾದವಾಗಿದ್ದು ಜನಪ್ರತಿನಿಧಿಗಳಿಂದಲೂ ವಿರೋಧ ವ್ಯಕ್ತವಾಗಿದೆ. ಚುನಾವಣೆ ಸಂದರ್ಭ ಅಡುಗೆ ಸಿಬಂದಿ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾದರೆ ಕೆಲಸ ಬಿಡಬೇಕಾಗಿ ಬರುವುದಿಲ್ಲ ಎಂದು ಚುನಾ ವಣಾಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ.

ಜುಜುಬಿ ಸಿಟ್ಟಿಂಗ್‌ ಫೀಸ್‌! :

ಅಕ್ಷರ ದಾಸೋಹ ಯೋಜನೆಯಲ್ಲಿ ಮುಖ್ಯ ಅಡುಗೆಯವರಿಗೆ 2,700 ರೂ., ಸಹಾಯಕರಿಗೆ 2,600 ರೂ. ವೇತನವಿದೆ. ಆದರೆ ಗ್ರಾ.ಪಂ. ಸದಸ್ಯರಿಗೆ ಒಂದು ಬಾರಿಗೆ 1 ಸಾವಿರ ರೂ. ಸಿಟ್ಟಿಂಗ್‌ ಫೀಸ್‌, 100 ರೂ. ಭತ್ತೆ ಸಿಗುತ್ತದೆ. ವರ್ಷಕ್ಕೆ ಕನಿಷ್ಠ ನಾಲ್ಕು ಬಾರಿ ಗ್ರಾಮ ಸಭೆ ನಡೆಯಬೇಕಿದ್ದು, ಕನಿಷ್ಠ 4,400 ರೂ. ಸಿಗಬಹುದಾಗಿದೆ.

ತ್ಯಜಿಸಿದರೆ ಮರು ಚುನಾವಣೆ ಹೊರೆ! :

ಅಕ್ಷರ ದಾಸೋಹ ಅಡುಗೆ ಸಿಬಂದಿಯ ನೇಮಕಾತಿಯಾಗುವುದು ಗ್ರಾ.ಪಂ. ಮೂಲಕವೇ. ಈಗ ಗ್ರಾ.ಪಂ. ಸದಸ್ಯ ಸ್ಥಾನ ಅಥವಾ ಅಡುಗೆ ಕೆಲಸ – ಇವುಗಳಲ್ಲಿ ಯಾವುದಾದರೊಂದನ್ನು ತ್ಯಜಿಸುವ ಆಯ್ಕೆಯೂ ಈ ಸಿಬಂದಿಯ ಮುಂದಿದೆ. ಆದಾಯ ದೃಷ್ಟಿಯಿಂದ ಅಡುಗೆ ಕೆಲಸವೇ ಆಕರ್ಷಕ ಅನ್ನಿಸಿ ಸದಸ್ಯ ಸ್ಥಾನ ಕೈಬಿಟ್ಟರೆ ಆಯಾ ಸ್ಥಾನಗಳಿಗೆ ಮರುಚುನಾವಣೆ ನಡೆಯಬೇಕು.

ದ.ಕ. ಜಿಲ್ಲೆಯಿಂದ 16 ಮಂದಿ ಅಡುಗೆ ಸಿಬಂದಿ ಗ್ರಾ.ಪಂ.ಗಳಿಗೆ ಆಯ್ಕೆಯಾಗಿದ್ದು, ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವ ಕುರಿತು ಸರಕಾರದಿಂದ ಆದೇಶ ಬಂದಿದೆ. ಆಯ್ಕೆಯಾದವರ ಮಾಹಿತಿ ಸಂಗ್ರಹಿಸಲಾಗಿದೆ. ಅವರ ಸ್ಥಾನಕ್ಕೆ ಬೇರೆಯವರ ಆಯ್ಕೆ ನಡೆಯಲಿದೆ.-ಉಷಾ, ಜಿಲ್ಲಾ ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ, ದ.ಕ.

 

ಉಡುಪಿಯಿಂದ ನಾಲ್ವರು ಅಡುಗೆ ಸಿಬಂದಿ ಗ್ರಾ.ಪಂ.ಗಳಿಗೆ ಆಯ್ಕೆಯಾಗಿದ್ದು, ಅವರ ಮಾಹಿತಿ ಸಂಗ್ರಹಿಸಲಾಗಿದೆ. ಮುಂದೆ ಸಹಾಯಕ ನಿರ್ದೇಶಕರು ಶಾಲೆಗಳ ಮುಖ್ಯಶಿಕ್ಷಕರ ಮೂಲಕ ಅವರ ಜಾಗಕ್ಕೆ ಬೇರೆಯವರನ್ನು ನೇಮಕ ಮಾಡಲಿದ್ದಾರೆ. -ನಾಗೇಂದ್ರಪ್ಪಜಿಲ್ಲಾ ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ, ಉಡುಪಿ

 

-  ಕಿರಣ್‌ ಸರಪಾಡಿ

 

Advertisement

Udayavani is now on Telegram. Click here to join our channel and stay updated with the latest news.

Next