ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಸೇರಿ ತಾಲೂಕಿನ ಗೋವನಾಳ, ಶಿಗ್ಲಿ, ಸೂರಣಗಿ, ಬಾಲೇಹೊಸೂರ, ಯಳವತ್ತಿ, ಯತ್ನಳ್ಳಿ, ಗೊಜನೂರ, ಅಕ್ಕಿಗುಂದ ಸೇರಿದಂತೆ ಅನೇಕ ಕಡೆಗಳ ಜಿಂಕೆಗಳ ಹಾವಳಿ ಹೆಚ್ಚಿದ್ದು, ಬೆಳೆ ರಕ್ಷಿಸಿಕೊಳ್ಳಲು ರೈತರು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಜಿಂಕೆಗಳ ಹಿಂಡು ಬೆಳಗಿನ ಜಾವ ಮತ್ತು ಸಂಜೆ ಹೊಲದಲ್ಲಿನ ಎಳೆಯ ಪೈರುಗಳನ್ನು ತಿನ್ನುವುದರ ಜತೆಗೆ ಬೆಳೆ ಹಾಳು ಮಾಡುತ್ತಿವೆ. ಸತತ ಬರದಿಂದ ತತ್ತರಿಸಿದ್ದ ರೈತ ಸಮುದಾಯಕ್ಕೆ ಈ ವರ್ಷ ತಡವಾದರೂ ಹದವಾದ ಮಳೆಯಾಗಿದ್ದರಿಂದ ಬಿತ್ತನೆ ಮಾಡಿದ ರೈತರು ಹೊಲದಲ್ಲಿನ ಬೆಳೆ ಕಂಡು ಹರ್ಷಿತರಾಗಿದ್ದಾರೆ. ಆದರೆ ಈಗ ಜಿಂಕೆಗಳು ಬೆಳೆ ಹಾನಿ ಮಾಡುತ್ತಿರುವುದರಿಂದ ರೈತರ ಹರ್ಷಕ್ಕೆ ಕೊಡಲಿ ಪೆಟ್ಟು ಬಿದ್ದಿದೆ.
ಇದೀಗ ತಾನೇ ಭೂ ತಾಯಿಯ ಒಡಲಿನಿಂದ ಚಿಗುರು ಮೊಳಕೆಯೊಡೆದು ಎಲ್ಲೆಡೆ ಹಸಿರು ಕಾಣ ತೊಡಗಿದೆ. ಈ ಹಸಿರನ್ನು ಮೂರ್‍ನಾಲ್ಕು ವರ್ಷಗಳಿಂದ ಕಾಣದ ಜಿಂಕೆಗಳು ಬೆಳೆಗಳಲ್ಲಿ ಚೆಲ್ಲಾಟ ವಾಡುವುದರ ಜತೆಗೆ ಎಳೆಯ ಪೈರನ್ನು ತಿನ್ನುತ್ತಿವೆ. ತಾಲೂಕೊಂದರಲ್ಲಿಯೇ 10 ಸಾವಿರಕ್ಕೂ ಹೆಚ್ಚು ಜಿಂಕೆಗಳಿವೆ ಎಂದು ಅರಣ್ಯ ಇಲಾಖೆ ಅಂದಾಜಿಸಿದ್ದು ಇದೀಗ ಜಿಂಕೆಗಳ ಹಾವಳಿಯಿಂದ ಬೆಳೆ ಹಾಳಾಗುತ್ತಿವೆ ಎಂದು ಅವಲೊತ್ತುಕೊಳ್ಳುತ್ತಿದ್ದರೆ ಅರಣ್ಯ ಅಧಿಕಾರಿಗಳು ಮಾತ್ರ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಇದರಿಂದಾಗಿ ರೈತರು ಬೆಳೆ ರಕ್ಷಿಸಿಕೊಳ್ಳಲು ಮಾರ್ಗೋಪಾಯ ಕಂಡುಕೊಳ್ಳುತ್ತಿದ್ದಾರೆ. ಜಮೀನುಗಳಲ್ಲಿ ಜಿಂಕೆಗಳು ಬರದಂತೆ ಪ್ಲಾಸ್ಟಿಕ್ ಹಾಳೆ, ಬಟ್ಟೆಗಳನ್ನು ಹಾರಾಡುವಂತೆ ಕಟ್ಟುತ್ತಿದ್ದಾರೆ. ಇನ್ನು ಕೆಲವು ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಧ್ವಜಗಳೂ ಅಲ್ಲಲ್ಲಿ ಹಾರಾಡುತ್ತಿವೆ. ಬೆದರು ಬೊಂಬೆಗಳನ್ನೂ ನಿಲ್ಲಿಸುತ್ತಿದ್ದಾರೆ ಜತೆಗೆ ಸಂಜೆ ಮತ್ತು ಬೆಳಿಗ್ಗೆ ಜಮೀನುಗಳಿಗೆ ತಪ್ಪದೇ ಕಾವಲು ಕಾಯುತ್ತಿದ್ದಾರೆ. ಪಟಾಕಿ ಸಿಡಿಸುವ, ತಗಡಿನ ಡಬ್ಬಿ ಬಾರಿಸುವ ಮೂಲಕ ಜಿಂಕೆಗಳು ಜಮೀನಿನ ಹತ್ತಿರ ಸುಳಿಯದಂತೆ ಮುಂಜಾಗ್ರತ ಕ್ರಮ ಕೈಗೊಳ್ಳುತ್ತಿದ್ದಾರೆ.
ಇಷ್ಟಾಗಿಯೂ ಜಿಂಕೆಗಳ ಹಾವಳಿ ತಪ್ಪದ್ದರಿಂದ ಗೋವನಾಳ ಗ್ರಾಮದ ರೈತ ರಾಮನಗೌಡ ಕೊರಡೂರ ತನ್ನ ಒಂದು ಎಕಗೆ ಜಮೀನಿನಲ್ಲಿ ಬೆಳೆದಿರುವ ನೀರಾವರಿ ಮೆಣಸಿನಕಾಯಿ ಬೆಳೆ ರಕ್ಷಿಸಲು ಜಮೀನಿನ ಸುತ್ತಲೂ ಹತ್ತಾರು ಸಾವಿರ ರೂ ಖರ್ಚು ಮಾಡಿ ಜಾಳಗಿ ಪರದೆ ಅಳವಡಿಸುವ ಮೂಲಕ ಬೆಳೆ ರಕ್ಷಣೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ. ನೀರಾವರಿ ಇದ್ದ ರೈತರು ವರ್ಷಕ್ಕೆ ಮೂರ್‍ನಾಲ್ಕು ಬೆಳೆ ಬೆಳೆಯುವುದರಿಂದ ಅವರು ಸಾವಿರಾರು ಖರ್ಚು ಮಾಡಿ ಜಾಳಗಿ ಮತ್ತು ತಂತಿ ಬೇಲಿ ಹಾಕಿಸುತ್ತಾರೆ. ಆದರೆ ಮಳೆಯಾಧಾರಿತ ಖುಷ್ಕಿ ಜಮೀನಿನಲ್ಲಿ ಒಂದು ಬೆಳೆ ಬರುವುದೇ ಕಷ್ಟ. ಇನ್ನು ಸಾವಿರಾರೂ ಖರ್ಚು ಮಾಡಿ ಬೆಳೆ ರಕ್ಷಿಸಿಕೊಳ್ಳುವುದು ಅಸಾಧ್ಯ ಎಂದು ಅವಲೊತ್ತುಕೊಳ್ಳುತ್ತಾರೆ ರೈತರಾದ ರಾಮನಗೌಡ ಕೊರಡೂರ, ನೀಲಪ್ಪಗೌಡ ಮರಿಲಿಂಗನಗೌಡ, ಬಸಮ್ಮ ಕರೆಗೌಡ್ರ, ಶೇಖರಗೌಡ ಕೊರಡೂರ.
ಜಿಂಕೆಗಳ ಹಾವಳಿಯಿಂದ ಬೆಳೆ ಹಾನಿಯಾಗಿದ್ದರೆ ರೈತರು ಸೂಕ್ತ ದಾಖಲೆಗಳೊಂದಿಗೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಇಲಾಖೆ ಸಿಬ್ಬಂದಿ ಬೆಳೆ ಹಾನಿ ಪ್ರದೇಶ ಪರಿಶೀಲಿಸಿ ನಿಯಮಾವಳಿಯಂತೆ ಹಾನಿಗೀಡಾದ ಪ್ರಮಾಣ ಗುರುತಿಸಿ ಅರ್ಜಿ ಅಪ್‌ಲೋಡ್ ಮಾಡುತ್ತಾರೆ. ಬೆಳೆಹಾನಿಗೊಳಗಾದ ರೈತರ ಖಾತೆಗೆ ನೇರವಾಗಿ ಪರಿಹಾರ ಮೊತ್ತ ಜಮೆಯಾಗುತ್ತದೆ ಎನ್ನುತ್ತಾರೆ ತಾಲೂಕು ಅರಣ್ಯಾಧಿಕಾರಿ ಎಸ್.ಎಚ್.ಪೂಜಾರ.
• ಅಸಹಾಯಕತೆ ವ್ಯಕ್ತಪಡಿಸಿದ ಅರಣ್ಯಾಧಿಕಾರಿಗಳು
• ಬೆಳ್ಳಂಬೆಳಿಗ್ಗೆ-ಸಂಜೆ ಹೊಲಗಳಿಗೆ ಇವುಗಳ ದಾಳಿ
• ಹೊಲದಲ್ಲಿನ ಎಳೆಯ ಪೈರು ತಿಂದು ಮಾಡುತ್ತವೆ ಹಾಳು