ಶಿವಮೊಗ್ಗ: ನಗರದ ಬಿ.ಎಚ್. ರಸ್ತೆ ಹೊರತುಪಡಿಸಿದರೆ ಬಹುತೇಕ ಎಲ್ಲ ರಸ್ತೆಗಳು ಗುಂಡಿಮಯವಾಗಿವೆ. ಇತ್ತ ಗುಂಡಿ ರಸ್ತೆಗಳು, ಅತ್ತ ಟ್ರಾಫಿಕ್ ಪೊಲೀಸರಿಂದ ದುಬಾರಿ ತಂಡಕ್ಕೆ ವಾಹನ ಸವಾರರು ಹೈರಾಣಾಗಿದ್ದಾರೆ. ಪಾಲಿಕೆಗೆ ನೂತನ ಆಡಳಿತ ಬಂದು ವರ್ಷ ಕಳೆದರೂ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಸಿಕ್ಕಿಲ್ಲ.
ನಗರದ ಎಲ್ಎಲ್ಆರ್ ರಸ್ತೆ, ಕುವೆಂಪು ರಸ್ತೆ, ಲಕ್ಷ್ಮಿ ಟಾಕೀಸ್ ಎದುರು ರಸ್ತೆ, ದುರ್ಗಿಗುಡಿ ಬಡಾವಣೆ, ಪಾರ್ಕ್ ಬಡಾವಣೆ, ಓ.ಟಿ. ರಸ್ತೆ, ಸವಳಂಗ, ಬೊಮ್ಮನಕಟ್ಟೆ, ಗೋಪಾಳ ಬಡಾವಣೆ, ಆಲ್ಕೋಳ ವೃತ್ತ ರಸ್ತೆ ಸೇರಿದಂತೆ ಬಹಳಷ್ಟು ಒಳ ರಸ್ತೆಗಳು ಗುಂಡಿ ಬಿದಿದ್ದು, ಜನರು ಭಯದಲ್ಲಿ ಸಂಚರಿಸುವಂತಾಗಿದೆ. ದಿನದಿಂದ ದಿನಕ್ಕೆ ನಗರದ ಸಾಕಷ್ಟು ಬೆಳೆಯುತ್ತಿದೆ. ಹೀಗಾಗಿ ನಗರದಲ್ಲಿ ವಾಹನ ದಟ್ಟನೆ ಸಾಮಾನ್ಯವಾಗಿದೆ. ಆದರೆ, ನಗರದ ರಸ್ತೆಯಲ್ಲಿ ಸೃಷ್ಟಿಯಾಗಿರುವ ದೊಡ್ಡ ಗುಂಡಿಗಳಿಂದ ಚಾಲಕರು ಜೀವಭಯದಿಂದ ವಾಹನ ಚಾಲನೆ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಅನ್‌ಮೋಲ್ ಹೋಟೆಲ್ ಬಳಿಯ ರಸ್ತೆಯ ಗುಂಡಿಯಲ್ಲಿ ಬೈಕ್ ಸವಾರನೊಬ್ಬ ಬಿದ್ದು ಆಸ್ಪತ್ರೆ ಸೇರಿರುವುದು ಗುಂಡಿಯ ತೀವ್ರತೆ ತೋರಿಸುತ್ತವೆ.
ನಗರದ ಕೆಲ ಭಾಗಗಳಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಮಧ್ಯೆ ಗುಂಡಿ ತೆಗೆದು ಪೈಪ್ ಅಳವಡಿಸಿರುವುದು ರಸ್ತೆ ಹಾಳಾಗಲು ಪ್ರಮುಖ ಕಾರಣ. ಕಾಮಗಾರಿ ಪೂರ್ಣಗೊಂಡ ನಂತರ ಸರಿಯಾಗಿ ಮುಚ್ಚದ ಪರಿಣಾಮ ಮಳೆನೀರು ನಿಂತು ಕೆಸರಿನ ಹೊಂಡಗಳಾಗಿ ಮಾರ್ಪಟ್ಟಿದೆ. ಇನ್ನೂ ಕೆಲವಡೆ ಅಪೂರ್ಣ ಕಾಮಗಾರಿ ಸಂಚಾರಕ್ಕೆ ತೊಂದರೆ ಮಾಡಿದೆ. ಮಳೆ ಬರುವ ಮುನ್ನ ಧೂಳಿನ ಆಗರವಾಗಿದ್ದ ರಸ್ತೆಗಳು ಈಗ ಸಂಚರಿಸುವವರಿಗೆ ಕೆಸರಿನ ಮಜ್ಜನ ಮಾಡಿಸುತ್ತಿದೆ.
ನಗರದ ಕೆಲ ಪ್ರಮುಖ ರಸ್ತೆಗಳು ಸೇರಿದಂತೆ ಒಳ ರಸ್ತೆಗಳಲ್ಲಿ ರಸ್ತೆಗಳನ್ನು ಹುಡುಕಿ ವಾಹನ ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ. ರಸ್ತೆ ಹಾಳಾಗಿ ವರ್ಷಗಳೇ ಕಳೆದ ದುರಸ್ತಿಗೆ ಪಾಲಿಕೆ ಅಧಿಕಾರಿಗಳು ಇನ್ನೂ ಮನಸ್ಸು ಮಾಡಿಲ್ಲ. ಹೀಗಾಗಿ ರಸ್ತೆ ಮಧ್ಯೆ ದೊಡ್ಡ ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆ ಅಸಾಧ್ಯದ ಪರಿಸ್ಥಿತಿ ತಂದೊಡ್ಡಿವೆ. ನೀರು ಹರಿದು ಹೋಗಲು ಜಾಗವಿಲ್ಲದೆ ರಸ್ತೆಯಲ್ಲಿಯೇ ನೀರು ನಿಲ್ಲುತ್ತಿದೆ.
ಕಳೆದ ಎಂಎಲ್ಎ ಚುನಾವಣೆ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ನಗರದಲ್ಲಿ ಹದಗೆಟ್ಟು ರಸ್ತೆಯಲ್ಲಿ ತರಾತುರಿಯಾಗಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದರು. ಆದರೆ, ಈ ಕಾಮಗಾರಿ ಕಳಪೆಯಾಗಿದ್ದರಿಂದ ದುರಸ್ತಿ ಮಾಡಿದ ಕೆಲವೇ ಕೆಲವು ದಿನಗಳಲ್ಲಿ ರಸ್ತೆಯ ಮೇಲ್ಪದರಗಳು ಕಿತ್ತು ಮತ್ತೆ ಗುಂಡಿ ಬಿದ್ದಿದ್ದವು. ಇತ್ತೀಚೆಗೆ ಸುರಿದ ಮಳೆಯಿಂದ ಅಲ್ಲಲ್ಲಿ ಗುಂಡಿಗಳಾಗಿದೆ. ಅಧಿಕಾರಿಗಳು ಅವುಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿಲ್ಲ. ನಿತ್ಯ ಈ ರಸ್ತೆಗಳಲ್ಲಿ ಓಡಾಟ ಮಾಡಿದರೂ ದುರಸ್ತಿ ಬಗ್ಗೆ ಪಾಲಿಕೆ ಅಧಿಕಾರಿಗಳು ಇಷ್ಟು ದಿನ ಎಳ್ಳಷ್ಟು ಚಿಂತೆ ಮಾಡಲಿಲ್ಲ. ಈಗ ಗುಂಡಿಗೆ ಇಟ್ಟಿಗೆಪುಡಿ ತಂದು ಹಾಕುತ್ತಿದ್ದಾರೆ. ರಸ್ತೆಯ ದುರಸ್ತಿ ಬಗ್ಗೆ ಜನಪ್ರತಿನಿಧಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ.
•ವಿಶೇಷ ವರದಿ