ಶಿರಸಿ: ಕೋವಿಡ್ ವೈರಸ್ ಆಕ್ರಮಣ, ರಾಜ್ಯ, ಹೊರ ರಾಜ್ಯಗಳಲ್ಲಿ ಲಾಕ್‌ಡೌನ್, ವರ್ಕ್ ಫ್ರಂ ಹೋಂ ಕೆಲಸಗಳ ಕಾರಣದಿಂದ ಊರಿಗೆ ಬಂದ ಉದ್ಯೋಗಸ್ಥರಿಗೆ ಇಂಟರ್ ನೆಟ್ ಸಮಸ್ಯೆಯಿಂದ ಸಂಕಟ ಆಗುತ್ತಿದೆ. ಇದನ್ನು ಹೋಗಲಾಡಿಸಲು ಬೆಟ್ಟದ ಮೇಲೆ ಮಾಳ ಕಟ್ಟಿಕೊಂಡು ಅಲ್ಲಿಯೇ ಕೆಲಸ ಆರಂಭಿಸಿದ್ದಾರೆ.
ಕೆಲವು ಹಳ್ಳಿಗಳಿಗೆ 18-20 ಸಾವಿರ ರೂ. ಕೊಟ್ಟು ಮೊಬೈಲ್ ಬೂಸ್ಟರ್ ಮಾಡಿಕೊಂಡಿದ್ದಾರೆ. ಇನ್ನು ಕೆಲವು ಹಳ್ಳಿಗಳಲ್ಲಿ ಇದೂ ಬರುವುದಿಲ್ಲ. ಊರಿಗೆ ಬಂದರೂ ಸಂಕಷ್ಟ ತಪ್ಪಿಲ್ಲ. ಮೊಬೈಲ್ ಟವರ್ ಕೂಡ ಇಲ್ಲ. ಸಿಗ್ನಲ್ ಮೊದಲೇ ಇಲ್ಲ. ಭಾರತ್ ಸಂಚಾರ ನಿಗಮದ ಬ್ರಾಡ್‌ಬ್ಯಾಂಡ್ ಬಿಡಿ, ಮನೆ ಫೋನ್ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ!
ಹಲವು ಯತ್ನ!: ಕೆಲವು ಹಳ್ಳಿಗಳ ಯುವಕರು ಈಗ ಕೊಟ್ಟಿಗೆ ಮನೆ, ಆಚೆ ಮನೆ ಹಿತ್ತಲು, ಮನೆಯ ಟೆರಸ್, ಬಸ್ ಸ್ಟಾಪ್‌ಗ್ಳಲ್ಲೂ ಕೆಲಸ ಮಾಡುತ್ತಿದ್ದಾರೆ. ಮನೆಯಿಂದ ಬೆಳಗ್ಗೆ 9ಕ್ಕೆ ಹೋದರೆ ಮಧ್ಯಾಹ್ನ ಊಟಕ್ಕೆ ಬರುವಾಗ 2, 3 ಗಂಟೆ ಆಗುತ್ತದೆ. ಮರಳಿ ಕೆಲಸಕ್ಕೆ ಹೋದರೆ ರಾತ್ರಿ 8ಕ್ಕೆ ಬರುತ್ತಾರೆ. ಊರಿನಲ್ಲಿ ನೆಟ್‌ವರ್ಕ್ ಕೊಡುವಂತೆ ಮನವಿ ಮಾಡಿಕೊಂಡರೂ ಬಿಸ್ಸೆನ್ನೆಲ್ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳೂ ನೆರವಾಗುತ್ತಿಲ್ಲ ಎಂದೂ ಹಲವರು ಗೊಣಗುತ್ತಿದ್ದಾರೆ.
ಗಾಳಿಗುಡ್ಡ ವರದಾನ!: ತಾಲೂಕಿನ ಬಾಳಗಾರದ ಯುವಕರಿಗೆ, ವಿದ್ಯಾರ್ಥಿಗಳಿಗೆ, ಮನೆಯಿಂದ ಕೆಲಸ ಮಾಡುವ ಉದ್ಯೋಗಾರ್ಥಿಗಳಿಗೆ ಗಾಳಿ ಗುಡ್ಡವೇ ವರದಾನ. 500 ಅಡಿಗೂ ಎತ್ತರದ ಗಾಳಿ ಗುಡ್ಡದಲ್ಲಿ ಕಳೆದ ಏಪ್ರೀಲ್ ಒಳಗೇ ಒಂದು ಸಣ್ಣ ಮನೆ ಮಾಡಿಕೊಳ್ಳಲಾಗಿತ್ತು. ಆದರೆ, ಲಾಕ್ ಡೌನ್ ಹಾಗೂ ಮನೆಯಿಂದ ಕೆಲಸದ ಆದೇಶ ಮತ್ತೆ ಮುಂದುವರಿದಿದ್ದರಿಂದ ಮಳೆಗಾ ಲಕ್ಕೂ ಅನುಕೂಲಾಗುವ ಮಾಳ ಮಾಡಿಕೊಂಡಿದ್ದಾರೆ. ಈ ಮಾಳದಲ್ಲೇ ಕೆಲಸ ಮಾಡಲು ಇಂಟರ್‌ನೆಟ್ ಸಿಗುತ್ತಿದೆ. ಓದುವ ವಿದ್ಯಾರ್ಥಿಗಳೂ ಇಲ್ಲಿ ಆನ್‌ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ.
ಹೈಟೆಕ್ ಹವಾನಿಯಂತ್ರಿತ ಕಟ್ಟಡದಲ್ಲಿ ಕೆಲಸ ಮಾಡುವ ಉದ್ಯೋಗಸ್ಥರಿಗೆ ಇದೇ ಬ್ರೌಸಿಂಗ್ ಸೆಂಟರ್. ಸರಕಾರ ಶೀಘ್ರ ಇಂಥ ಹಳ್ಳಿಗಳಿಗೆ ನೆಟ್‌ವರ್ಕ್ ಒದಗಿಸಬೇಕು.
-ಡಾ| ಬಾಲಕೃಷ್ಣ ಹೆಗಡೆ, ಇತಿಹಾಸ ತಜ್ಞ
ನಮಗೆ ನೆಟ್‌ವರ್ಕ್ ಸರಿಯಾಗಿ ಒದಗಿಸಿದರೆ ಮನೆಯಿಂದಲೇ ಕೆಲಸ ಮಾಡಲು ಅನುಕೂಲ ಆಗುತ್ತದೆ. ಹಳ್ಳಿಗಳೂ ವೃದ್ಧಾಶ್ರಮ ಆಯ್ತು ಅನ್ನುವುದೂ ತಪ್ಪಿಸಬಹುದು.
-ಗಣಪತಿ ಭಟ್ಟ, ರೈತ
-ರಾಘವೇಂದ್ರ ಬೆಟ್ಟಕೊಪ್ಪ