ಬಾಗಲಕೋಟೆ: ಕೋವಿಡ್ 19 ಮಹಾಮಾರಿ ರೋಗದ ಭೀತಿಯನ್ನಷ್ಟೇ ಮೂಡಿಸಿಲ್ಲ. ಬಡವರ ಬದುಕು ದುಸ್ತರಗೊಳಿಸಿದೆ. ಅದರಲ್ಲೂ ಹೊಲದಲ್ಲಿ ಕಷ್ಟುಪಟ್ಟು ವಿವಿಧ ಬೆಳೆ ಬೆಳೆದವರ ಕಣ್ಣಂಚಿನಲ್ಲೀಗ ನೀರು ತರಿಸುತ್ತಿದೆ.
ರೈತರು ತಾವು ಬೆಳೆದ ಬೆಳೆ ಮಾರುಕಟ್ಟೆಗೆ ಕಳುಹಿಸಲು ಆಗುತ್ತಿಲ್ಲ. ಏನೇನೋ ಸರ್ಕಸ್ ಮಾಡಿ, ಮಾರುಕಟ್ಟೆಗೆ ತಂದರೂ, ಆ ಬೆಳೆ ಕೇಳುವವರು ದಿಕ್ಕಿಲ್ಲ. ಹೀಗಾಗಿ ರೈತರು, ಕಳೆದ ವರ್ಷ ಪ್ರವಾಹದಿಂದ ಸಂಕಷ್ಟ ಎದುರಿಸಿದರೆ, ಈಗ ಕೋವಿಡ್ 19 ಭೀತಿ ಬದುಕು ಬರಡುಗೊಳಿಸುತ್ತಿದೆ.
ಕಲ್ಲಂಗಡಿ ಬೆಳೆದವರ ಕಣ್ಣಲ್ಲಿ ನೀರು: ಜಿಲ್ಲೆ, ತೋಟಗಾರಿಕೆ ಬೆಳೆಗೆ ಪ್ರಸಿದ್ಧಿ ಪಡೆದಿದ್ದು, ಸುಮಾರು 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪ್ರತಿವರ್ಷ ವಿವಿಧ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಜನರ ಹೊಟ್ಟೆ ತಂಪಾಗಿಡಲು ಕಲ್ಲಂಗಡಿ ಬೆಳೆಯುವುದು ಜಿಲ್ಲೆಯ ರೈತರ ಪಾರಂಪರಿಕ ಬೆಳೆಯಾಗಿದೆ. ಸಾಳಗುಂದಿ, ಕದಾಂಪುರ, ಛಬ್ಬಿ, ಕಲಾದಗಿ ಹೀಗೆ ವಿವಿಧ ಭಾಗದಲ್ಲಿ ಕಲ್ಲಂಗಡಿ ಅತಿ ಹೆಚ್ಚು ಬೆಳೆಯುತ್ತಾರೆ. ಅದರಲ್ಲೂ ಆಲಮಟ್ಟಿ ಜಲಾಶಯದ ಹಿನ್ನೀರ ಪ್ರದೇಶಕ್ಕೆ ಹೊಂದಿಕೊಂಡಿರುವ ಭೂಮಿಗಳು, ಕಲ್ಲಂಗಡಿ, ದಾಳಿಂಬೆ, ಶೇಂಗಾ ಹೀಗೆ ಹಲವು ಬೆಳೆಗೆ ಪ್ರಸಿದ್ಧಿಯಾಗಿವೆ. ಸಾಳಗುಂದಿ ಮತ್ತು ಕದಾಂಪುರ ಎರಡೇ ಗ್ರಾಮದಲ್ಲಿ ಸುಮಾರು 25 ಎಕರೆಗೂ ಅಧಿಕ ಕಲ್ಲಂಗಡಿ ಬೆಳೆದಿದ್ದು, ಅದೀಗ ಕಟಾವಿಗೆ ಬಂದಿದೆ. ಆದರೆ, ಇಡೀ ಮಾರುಕಟ್ಟೆಯೇ ಸ್ತಬ್ಧಗೊಂಡಿದ್ದರಿಂದ ರೈತ ಕಂಗಾಲಾಗಿ, ಕಣ್ಣೀರು ಹಾಕುವ ಪರಿಸ್ಥಿತಿ ತಲುಪಿದ್ದಾನೆ.
ಮುಂಬೈ-ಹೈದ್ರಾಬಾದ್‌ಗೆ: ಜಿಲ್ಲೆಯಲ್ಲಿ ಬೆಳೆಯುವ ಕಲ್ಲಂಗಡಿ, ದಾಳಿಂಬೆ ಬೆಳೆಗಳನ್ನು ಪುಣೆ, ಮುಂಬೈ ಹಾಗೂ ಹೈದ್ರಾಬಾದ್ ಮಾರುಕಟ್ಟೆಗೆ ಅತಿಹೆಚ್ಚು ಕಳುಹಿಸಲಾಗುತ್ತಿತ್ತು. ಬೇಸಿಗೆ ಆರಂಭಗೊಳ್ಳುವ ಮುಂಚೆಯೇ ರೈತರು, ಕಲ್ಲಂಗಡಿ ಬೆಳೆದು, ಬೇಸಿಗೆ ಅವಧಿಯಲ್ಲಿ ಜನರು ಹೆಚ್ಚಾಗಿ ಇಷ್ಟಪಡುವ ಕಾರಣ, ದೇಶದ ವಿವಿಧೆಡೆ ಕಳುಹಿಸಲಾಗುತ್ತಿತ್ತು. ಜತೆಗೆ ಜಿಲ್ಲೆಯ ವರ್ತಕರೂ, ಮುಂಗಡವಾಗಿ ಬೇಡಿಕೆ ಇಡುತ್ತಿದ್ದರು. ಕೆಲವರು ಬಡಾವಣೆಗೆ ತಿರುಗಿ ಮಾರಾಟ ಮಾಡಿದರೆ, ಇನ್ನೂ ಹಲವರು ರಸ್ತೆಯ ಪಕ್ಕದಲ್ಲಿ ಜ್ಯೂಸ್ ಅಂಗಡಿ ಹಾಕಿಕೊಂಡು ಕಲ್ಲಂಗಡಿ ಜ್ಯೂಸ್ ಮಾರಾಟ ಮಾಡುತ್ತಿದ್ದರು. ಈ ಎಲ್ಲ ಅಂಗಡಿಗಳಿಗೂ ಜಿಲ್ಲೆಯ ರೈತರು ಬೆಳೆದ ಕಲ್ಲಂಗಡಿಯೇ ಬಳಕೆಯಾಗುತ್ತಿತ್ತು. ಆದರೆ, ಇದೀಗ ಕೊರೊನಾ ತಂದ ಲಾಕ್‌ಡೌನ್ ಘೋಷಣೆ, ರೈತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.
2ರಿಂದ 3 ಎಕರೆ ಕಲ್ಲಂಗಡಿ ಬೆಳೆದರೆ, ಅದು ಬೇಸಿಗೆ ಅವಧಿಯಲ್ಲಿ 4ರಿಂದ 5 ಲಕ್ಷ ಆದಾಯ ತಂದು ಕೊಡುತ್ತಿತ್ತು. ವ್ಯಾಪಾರಸ್ಥರು ಒಂದು ಕೆ.ಜಿ. ಕಲ್ಲಂಗಡಿಯನ್ನು 10ರಿಂದ 15 ರೂ.ಗೆ ಪಡೆದು, ಅದರಿಂದ 50ರಿಂದ 60 ರೂ. ಲಾಭ ಮಾಡಿಕೊಳ್ಳುತ್ತಿದ್ದರು. ಇನ್ನು ದಾಳಿಂಬೆ ಅಂತೂ, 4 ಎಕರೆ ಬೆಳೆದಿದ್ದರೆ ಆ ರೈತ, 6ರಿಂದ 7 ಲಕ್ಷ ಗಳಿಸುತ್ತಿದ್ದ. ಅದಕ್ಕೆಲ್ಲ ಈ ಬಾರಿ, ಕೋವಿಡ್ 19 ಬರೆ ಎಳೆದಿದೆ.
ನಾನು 3 ಎಕರೆ ಕಲ್ಲಂಗಡಿ ಬೆಳೆದಿದ್ದೇನೆ. ಬೇಸಿಗೆ ಅವಧಿಯೇ ಈ ಬೆಳೆಗೆ ಹೆಚ್ಚು ಬೇಡಿಕೆ ಇರುತ್ತದೆ. ಪ್ರತಿವರ್ಷ, ಹೈದ್ರಾಬಾದ್, ಮುಂಬೈಗೆಲ್ಲ ಕಳುಹಿಸುತ್ತಿದ್ದೆ. ಬಾಗಲಕೋಟೆಯ ವ್ಯಾಪಾರಸ್ಥರೂ ನಮ್ಮ ತೋಟಕ್ಕೆ ಬಂದು ಖರೀದಿ ಮಾಡುತ್ತಿದ್ದರು. ಈ ಬಾರಿ ಸ್ಥಳೀಯ ಹಾಗೂ ಹೊರ ರಾಜ್ಯದ ವ್ಯಾಪಾರಸ್ಥರೂ ಬರುತ್ತಿಲ್ಲ. ಕೋವಿಡ್ 19 ಎಂಬ ಭೀತಿ, ರೈತರಿಗೆ ಕಣ್ಣೀರು ತರಿಸುತ್ತಿದೆ. ಹಾಕಿದ ಹಣವೂ ಬರಲ್ಲ. ಸುರೇಶ ಬಣಕಾರ, ಸಾಳಗುಂದಿ ರೈತ
-ಶ್ರೀಶೈಲ ಕೆ. ಬಿರಾದಾರ