Advertisement

ಶಿಕ್ಷಣಕ್ಕೂ ಬಂತು ಕುತ್ತು

10:37 AM Aug 30, 2019 | Team Udayavani |

ರಾಮದುರ್ಗ: ಪ್ರವಾಹ ಬಂದಿರುವುದು ನಾಲ್ಕು ದಿನ. ಕಳೆದುಕೊಂಡಿರುವುದು ಕೋಟ್ಯಂತರ. ಇಷ್ಟೆಲ್ಲ ನಷ್ಟದ ಮಧ್ಯ ಜನರ ಬದುಕು ಅತಂತ್ರದಲ್ಲಿರುವಾಗಲೇ ಶಾಲೆಗಳ ಪರಿಸ್ಥಿತಿ ನೋಡ ತೀರದಾಗಿದ್ದು, ಹೀಗಾದರೆ ಮಕ್ಕಳ ಶಿಕ್ಷಣ ಹೇಗೆ ಎಂಬ ಚಿಂತೆಗೆ ಕಾರಣವಾಗಿದೆ.

Advertisement

ಪ್ರವಾಹದಿಂದಾಗಿ ರಾಮದುರ್ಗ ಪಟ್ಟಣ ಸೇರಿದಂತೆ ತಾಲೂಕಿನ 29 ಗ್ರಾಮಗಳು ಜಲಾವೃತಗೊಂಡ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡು ನಾಗರಿಕರ ಬದುಕು ಬೀದಿಗೆ ಬಂದಿದೆ. ಅಷ್ಟೇ ಅಲ್ಲದೇ ನೆರೆ ಪೀಡಿತ ಪ್ರದೇಶದ ಮಕ್ಕಳ ವ್ಯಾಸಂಗಕ್ಕೂ ಪ್ರವಾಹದ ಕರಿನೆರಳು ವ್ಯಾಪಿಸಿದ್ದು ಮಾತ್ರ ದುರಂತ.

ಮಲಪ್ರಭಾ ಪ್ರವಾಹದಿಂದ ನದಿ ಪಾತ್ರದ ಪ್ರದೇಶಗಳ ಶಾಲೆಗಳಿಗೂ ನೀರು ನುಗ್ಗಿ, ಕೆಲ ಶಾಲಾ ಕಟ್ಟಡಗಳು ಶಿಥಿಲವಾಗಿವೆ. ಮಕ್ಕಳ ವ್ಯಾಸಂಗಕ್ಕೆ ಪ್ರವಾಹ ಮಾರಕವಾಗಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಕರಿ ನೆರಳು ಬೀಳುವಂತಾಗಿದೆ. ಕೆಲ ಕೊಠಡಿಗಳನ್ನು ನಿರಾಶ್ರಿತರ ಪರಿಹಾರ ಕೇಂದ್ರಕ್ಕಾಗಿ ಬಳಕೆ ಮಾಡಿಕೊಂಡಿದ್ದರಿಂದಲೂ ಮಕ್ಕಳ ಶೈಕ್ಷಣಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗಿದೆ.

41 ಶಾಲೆಗಳಿಗೆ ನುಗ್ಗಿದ ನೀರು: ತಾಲೂಕಿನಲ್ಲಿ ಉಂಟಾದ ಪ್ರವಾಹದಿಂದಾಗಿ ತಾಲೂಕಿನ 2 ಪ್ರೌಢ ಶಾಲೆಗಳು, 39 ಕಿರಿ ಹಿರಿಯ ಪ್ರಾಥಮಿಕ ಶಾಲೆಗಳು ಸೇರಿದಂತೆ ಒಟ್ಟು 41 ಶಾಲೆಗಳು ಪ್ರವಾಹಕ್ಕೆ ತುತ್ತಾಗಿ, 202 ಶಾಲಾ ಕೊಠಡಿಗಳಿಗೆ ನೀರು ನುಗ್ಗಿ ಕೆಲ ಶಾಲಾ ಕೊಠಡಿ ಗಳು ಜಖಂಗೊಂಡು ಶಿಥಿಲಾವಸ್ಥೆ ತಲುಪಿವೆ.

5 ಸಾವಿರಕ್ಕೂ ಹೆಚ್ಚು ಮಕ್ಕಳ ಶಿಕ್ಷಣಕ್ಕೆ ಆತಂಕ: ಪ್ರವಾಹಕ್ಕೆ ತುತ್ತಾದ 41 ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಮಾರು 5449 ವಿದ್ಯಾರ್ಥಿಗಳು ಸುಮಾರು 1 ತಿಂಗಳ ಕಾಲ ಶಿಕ್ಷಣದಿಂದ ದೂರ ಉಳಿಯುವಂತಾಗಿದೆ. ಒಂದೆಡೆ ಕುಟುಂಬದಲ್ಲಿನ ಸಂಕಷ್ಟ ಕಂಡ ಮಕ್ಕಳಿಗೆ ಮುಂದಿನ ಶೈಕ್ಷಣಿಕ ಬದುಕು ಹೇಗೆ ಎಂಬ ಚಿಂತೆಯಾದರೆ, ಹಾನಿಗೊಳಗಾದ ಶಾಲೆಗಳು ಸಂಪೂರ್ಣ ದುರಸ್ತಿ ಕಂಡು ಸುರಕ್ಷಿತವಾಗಿ ಶಿಕ್ಷಣ ಪಡೆಯುವುದು ಯಾವಾಗ ಎಂಬ ಆತಂಕ ದಲ್ಲಿರುವಂತೆ ಮಾಡಿದೆ.

Advertisement

ಸ್ಥಳಾಂತರಕ್ಕೆ ಚಿಂತನೆ: ತಾಲೂಕಿನ ಸುನ್ನಾಳ ಹಾಗೂ ಸುರೇಬಾನ, ಸಂಗಳ ಪ್ರೌಢಶಾಲೆಗಳು ಸಂಪೂರ್ಣ ಜಲಾವೃತ ಗೊಂಡು ಅಲ್ಲಿನ ಪೀಠೊಪ ಕರಣಗಳು ಹಾಳಾಗಿದ್ದು, ಸುನ್ನಾಳ ಹಾಗೂ ಸುರೇಬಾನ ಪ್ರೌಢಶಾಲೆಯ ಕೆಲ ಕಟ್ಟಡಗಳು ಮರು ಕಲಿಕಾ ವಾತಾವರಣಕ್ಕೆ ಬಾರದಂತಾಗಿದ್ದು, ಸುರೇಬಾನ ಪ್ರೌಢ ಶಾಲೆಯನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರ ಮಾಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಚಿಂತಿಸುತ್ತಿದ್ದಾರೆ.

ಎಚ್ಚರಿಕೆ ಅಗತ್ಯ: ನೆರೆ ಪೀಡಿತ ಶಾಲೆಗಳ ಬಹುತೇಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಅವುಗಳಲ್ಲಿ ತರಗತಿ ನಡೆಸಲು ಸಂಬಂಧಪಟ್ಟ ಕಟ್ಟಡ ತಾಂತ್ರಿಕ ಸಲಹೆಗಾರರ ಸಲಹೆಯ ಜೊತೆಗೆ ಕಟ್ಟಡಗಳು ದಿನದಿಂದ ದಿನಕ್ಕೆ ಕುಸಿಯುತ್ತಾ ಸಾಗಿದ್ದು, ಅವುಗಳ ಗುಣಮಟ್ಟದ ಬಗೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕ ಸಮೂಹ ಮೇಲಿಂದ ಮೇಲೆ ನಿಗಾ ವಹಿಸಿ ಜಾಗೃತಿಯಿಂದ ಮರು ತರಗತಿ ನಡೆಸಬೇಕು ಎಂಬುವುದು ತಜ್ಞರ ಅಭಿಮತವಾಗಿದೆ.

ಪ್ರವಾಹ ಸಂದರ್ಭದಲ್ಲಿ ನೀರು ನುಗ್ಗಿದ ಶಾಲೆಗಳನ್ನು ಸ್ವಚ್ಛಗೊಳಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ಸಂಬಂಧಪಟ್ಟ ಕಟ್ಟಡ ವಿಭಾಗದ ಎಂಜಿನಿಯರ್‌ಗಳಿಂದ ಶಾಲಾ ಕಟ್ಟಡಗಳ ಮೌಲ್ಯಮಾಪನ ಮಾಡಿಸಿ, ತರಗತಿ ನಡೆಸಲು ಯೋಗ್ಯವಿದ್ದಲ್ಲಿ ಮಾತ್ರ ನಡೆಸುತ್ತೇವೆ. ಅನುಪಯುಕ್ತವಾಗಿದ್ದರೆ ಅದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ಶಾಲಾ ಕಟ್ಟಡಗಳ ಹಾನಿ ಕುರಿತು ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು.• ಎಂ.ಆರ್‌. ಅಲಾಸೆ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮದುರ್ಗ

ಪ್ರವಾಹ ಬಂದು ಜನರ ಬದುಕಿನ ನಷ್ಟದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದ್ದು, ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಸರಕಾರ ಕೂಡಲೇ ಕ್ರಮ ವಹಿಸಿ ಶಾಲಾ ಕಟ್ಟಡ ಹಾಗೂ ಪೀಠೊಪಕರಣಗಳ ವ್ಯವಸ್ಥೆ ಕಲ್ಪಿಸಿ ಮುಂದಿನ ಶೈಕ್ಷಣಿಕ ವ್ಯವಸ್ಥೆಯನ್ನು ಸರಿಪಡಿಸಬೇಕು.•ಬಸವರಾಜ ಲಕ್ಕನವರ (ಶಿರೂರ),ಹಂಪಿಹೊಳಿ ಗ್ರಾಮಸ್ಥರು

 

• ಈರನಗೌಡ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next