ಚಿತ್ರದುರ್ಗ: ಜಿಲ್ಲೆಯಲ್ಲಿ ಹದ ಮಳೆಯಾಗಿದ್ದು ಮುಂಗಾರು ಹಂಗಾಮಿಗೆ ರೈತರು ಭೂಮಿ ಹಸನು ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಜಿಲ್ಲೆಯನ್ನು ಸದಾ ಕಾಡುವ ಸತತ ಬರ, ಬೆಳೆ ಹಾನಿ, ಪ್ರಕೃತಿ ವಿಕೋಪ, ಬೆಲೆ ಇಳಿಕೆ ಮತ್ತಿತರ ಯಾವುದೇ ಸಮಸ್ಯೆ ಎದುರಾದರೂ ಎದೆಗುಂದದ ರೈತರು ಉತ್ತಿ, ಬಿತ್ತಿ, ಬೆಳೆವ ಕಾಯಕವನ್ನು ಎಂದಿಗೂ ಮರೆಯುವುದಿಲ್ಲ. ಅದೇ ರೀತಿ ಈ ವರ್ಷದ ಮುಂಗಾರು ಹಂಗಾಮಿಗಾಗಿ ರೈತರು ಭೂಮಿ ಹಸನು ಮಾಡಲು ಮುಂದಾಗಿದ್ದಾರೆ.
ಪ್ರತಿ ವರ್ಷ ರೈತರು ಯುಗಾದಿ ಹಬ್ಬದ ನಂತರ ಬೀಳುವ ಹದ ಮಳೆಗೆ ಬಿತ್ತನೆಗಾಗಿ ಭೂಮಿ ಉಳುಮೆ ಮಾಡಿ ಮಾಗಿ ಮಾಡುತ್ತಾರೆ. ಬಿತ್ತನೆಗಾಗಿ ಭೂಮಿ ಹಸನು ಮಾಡಲು ತಯಾರಿ ನಡೆಸುವುದು ಸಂಪ್ರದಾಯ. ನಸುಕಿನ ಜಾವ ಹೊಲಗಳಿಗೆ ತೆರಳುವ ರೈತರು ಮಧ್ಯಾಹ್ನದ ಬಿಸಿಲು ಏರುವುದರೊಳಗೆ ಮಾಗಿ ಉಳುಮೆಯಲ್ಲಿ ತೊಡಗಿಕೊಳ್ಳುತ್ತಾರೆ. ಮಾಗಿ ಉಳುಮೆ ಮಾಡಿ ಬಿತ್ತನೆಗೆ ಸಜ್ಜುಗೊಳಿಸಿದ ಹೊಲಗಳಿಗೆ ತಿಪ್ಪೆ ಗೊಬ್ಬರವನ್ನು ಭೂಮಿಗೆ ಚೆಲ್ಲಿ ಮಾಗಿ ಉಳುಮೆ ಮಾಡಿ ಭೂಮಿ ಹಸನು ಮಾಡಿಕೊಳ್ಳುವುದು ವಾಡಿಕೆ.
ಬಿತ್ತನೆ ಗುರಿ: ಏಕದಳ ಬೆಳೆಗಳಾದ ರಾಗಿ, ಸಾವೆ, ಜೋಳ, ಮೆಕ್ಕೆಜೋಳ, ಸಜ್ಜೆ ಇತರೆ ಸಿರಿಧಾನ್ಯಗಳು 1,54,145 ಹೆಕ್ಟೇರ್ ಹೆಕ್ಟೇರ್ ಗುರಿ ಪೈಕಿ 540 ಹೆಕ್ಟೇರ್ ನಲ್ಲಿ ಬಿತ್ತನೆ ಮಾಡಲಾಗಿದೆ. ದ್ವಿದಳ ಧಾನ್ಯಗಳಾದ ತೊಗರಿ, ಹುರುಳಿ, ಹುದ್ದು, ಅಳಸಂದೆ, ಆವರೆ, ಇತರೆ ಬೇಳೆ ಕಾಳು 1,88,605 ಹೆಕ್ಟೇರ್ ಗುರಿಯಲ್ಲಿ 1910 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಎಣ್ಣೆ ಕಾಳುಗಳಾದ ಶೇಂಗಾ, ಸೂರ್ಯಕಾಂತಿ, ಎಳ್ಳು, ಹರಳು, ಹುಚ್ಚೆಳ್ಳು, ಸಾಸಿವೆ, ಸೋಯಾಬಿನ್, 1,55,565 ಹೆಕ್ಟೇರ್ ಗುರಿಗೆ 55 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ವಾಣಿಜ್ಯ ಬೆಳೆಗಳಾದ ಹತ್ತಿ, ತಂಬಾಕು 14,170 ಬಿತ್ತನೆ ಗುರಿಗೆ 657 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಇಡೀ ಜಿಲ್ಲೆಯಲ್ಲಿ ಒಟ್ಟು 3,58,340 ಹೆಕ್ಟೇರ್ ಬಿತ್ತನೆ ಗುರಿಗೆ 2588 ಹೆಕ್ಟೇರ್ ಬಿತ್ತನೆ ಮಾಡಲಾಗಿದ್ದು, ಇದುವರೆಗೆ ಶೇ. 0.7ರಷ್ಟು ಬಿತ್ತನೆ ಆಗಿದೆ.
ಹೊಸದುರ್ಗ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಪೂರ್ವದಲ್ಲಿ ಹೆಸರು, ಸಾವೆಯನ್ನು ಬಿತ್ತನೆ ಮಾಡಲಾಗುತ್ತದೆ. ಈಗಾಗಲೇ 540 ಹೆಕ್ಟೇರ್ ಸಾವೆ, 1370 ಹೆಕ್ಟೇರ್ ಹೆಸರು, 21 ಹೆಕ್ಟೇರ್ ಎಳ್ಳು, 122 ಹೆಕ್ಟೇರ್ ಹತ್ತಿ ಬಿತ್ತನೆ ಮಾಡಲಾಗಿದೆ. ಒಟ್ಟು ಬಿತ್ತನೆ ಗುರಿ 55,560 ಹೆಕ್ಟೇರ್ ಇದ್ದು, 2053 ಹೆಕ್ಟೇರ್ ಬಿತ್ತನೆ ಗುರಿ ತಲುಪುವ ಮೂಲಕ ಶೇ.3.7ರಷ್ಟು ಬಿತ್ತನೆ ಗುರಿ ಸಾಧಿಸಲಾಗಿದೆ.
ಚಳ್ಳಕೆರೆ ತಾಲೂಕಿನಲ್ಲಿ 1,00,850 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಇನ್ನೂ ಬಿತ್ತನೆಯೇ ಆರಂಭವಾಗಿಲ್ಲ. ಚಿತ್ರದುರ್ಗ ತಾಲೂಕಿನ 65,230 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 70 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಗುರಿ ಸಾಧಿಸುವ ಮೂಲಕ ಶೇ.0.1, ಹಿರಿಯೂರು ತಾಲೂಕಿನಲ್ಲಿ 49,210 ಹೆಕ್ಟೇರ್ ಗುರಿಗೆ 390 ಹೆಕ್ಟೇರ್ ಬಿತ್ತನೆ ಮಾಡಿ ಶೇ. 0.8ರಷ್ಟು ಸಾಧನೆ ಮಾಡಲಾಗಿದೆ.
ಹೊಳಲ್ಕೆರೆ ತಾಲೂಕಿನ 54,990 ಹೆಕ್ಟೇರ್ ಗುರಿಗೆ 50 ಹೆಕ್ಟೇರ್ ಬಿತ್ತನೆ ಮಾಡಿ ಶೇ.0.1, ಮೊಳಕಾಲ್ಮೂರು ತಾಲೂಕಿನಲ್ಲಿ 32,500 ಹೆಕ್ಟೇರ್ ಗುರಿಗೆ 25 ಹೆಕ್ಟೇರ್ ಬಿತ್ತನೆ ಮಾಡುವ ಮೂಲಕ ಶೇ. 0.1 ಸಾಧನೆ ಮಾಡಲಾಗಿದೆ.
ಆಹಾರಧಾನ್ಯಕ್ಕಿಂತ ವಾಣಿಜ್ಯ ಬೆಳೆಗಳಿಗೇ ಒತ್ತು ರೈತರಿಗೆ ಹಾಗೂ ರೈತರ ಜೀವನಾಡಿಗಳಾದ ದನ ಕರುಗಳಿಗೆ ಆಹಾರ ಒದಗಿಸುತ್ತಿದ್ದ ಏಕದಳ ಆಹಾರ ಧಾನ್ಯಗಳಾದ ರಾಗಿ, ಜೋಳ, ಸಜ್ಜೆ, ನವಣೆ, ಹುರುಳಿಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಆಗ ರೈತನ ಹೊಟ್ಟೆ ತುಂಬುವುದರ ಜೊತೆಗೆ ಆತನ ದನ ಕರುಗಳ ಆಹಾರಕ್ಕಾಗಿ ಮೇವು ಬೆಳೆಯಲಾಗುತ್ತಿತ್ತು. ಆದರೆ ಕಳೆದ ಎರಡು ದಶಕದಿಂದ ವಾಣಿಜ್ಯ ಬೆಳೆಗಳಿಗೆ ರೈತರು ಒತ್ತು ನೀಡಿದ್ದು ಬಿಟಿ ಹತ್ತಿ, ಶೇಂಗಾ, ಸೂರ್ಯಕಾಂತಿ, ಈರುಳ್ಳಿ ಇತರೆ ಬೆಳೆಗಳು ಗಣನೀಯವಾಗಿ ಹೆಚ್ಚಿವೆ. ಇದರಿಂದ ಜನರ ಹೊಟ್ಟೆಗೆ ಕಾಳು, ಜಾನುವಾರುಗಳಿಗೆ ಮೇವು ಸಿಗದ ಸ್ಥಿತಿ ನಿರ್ಮಾಣವಾಗಿದೆ.ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ನಾಲ್ಕು ಸಲ ಉತ್ತಮ ಹದ ಮಳೆಯಾಗಿದೆ. ಹಾಗಾಗಿ ಭೂಮಿ ಹಸನು ಮಾಡಿಕೊಳ್ಳುದ್ದೇವೆ.
ಹೇಮಂತ್‌ಕುಮಾರ್, ಬೆಳಗಟ್ಟ ಗ್ರಾಮದ ರೈತ.
ಹರಿಯಬ್ಬೆ ಹೆಂಜಾರಪ್ಪ