Advertisement

ತವರೂರಿನ ಸ್ವಚ್ಛತೆಗೆ ಪೊರಕೆ ಹಿಡಿದ ತ್ರಿವೇಣಿಯರು

01:01 AM May 13, 2019 | Sriram |

ವಿಶೇಷ ವರದಿ- ಸುಳ್ಯಪದವು: ದೂರದ ಊರಿಗೆ ಮದುವೆ ಮಾಡಿಕೊಟ್ಟ ಹೆಣ್ಣುಮಕ್ಕಳು ತವರು ಮನೆಗೆ ಬರುವುದುಂಟು. ತಾಯಿ ಮನೆಯಲ್ಲಿ ಸಂತೋಷದಿಂದ ಕಾಲ ಕಳೆಯ ಬೇಕಾದವರು ಸ್ವಚ್ಛತೆಯ ನೇತೃತ್ವ ವಹಿಸಿ ಊರಿನ ಪೇಟೆಯನ್ನೆಲ್ಲ ಶುಚಿಗೊಳಿಸಿದ ವಿಶಿಷ್ಟ ಕಾರ್ಯಕ್ರಮ ಕೇರಳ – ಕರ್ನಾಟಕ ಗಡಿ ಭಾಗದ ಸುಳ್ಯಪದವಿನಲ್ಲಿ ನಡೆದಿದೆ. ಅವರ ಮಕ್ಕಳೂ ಸಾಥ್‌ ನೀಡಿದ್ದು ವಿಶೇಷ.

Advertisement

ಕೇರಳ – ಕರ್ನಾಟಕದ ಗಡಿಭಾಗದಲ್ಲಿ ರುವ ಕೊಲ್ಯ ಮತ್ತು ಕನ್ನಡ್ಕದ ಶುಭಾ, ಕುಸುಮಾ ಹಾಗೂ ರೇವತಿ ಅವರು ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಯಲ್ಲಿ ಪಡೆದಿದ್ದರು. ಉನ್ನತ ಶಿಕ್ಷಣ ಪಡೆದ ಅವರು ಸದ್ಯ ಪತಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳಿಗೆ ಬೇಸಗೆ ರಜೆ ಇರುವಾಗ ತವರಿಗೆ ಬಂದು ಅಪ್ಪ ಅಮ್ಮ, ಕುಟುಂಬ ಸದಸ್ಯರ ಜತೆಗೆ ಕಾಲ ಕಳೆಯುತ್ತಾರೆ.

ಕೇರಳ ಹಾಗೂ ಕರ್ನಾಟಕದ ಗಡಿಭಾಗದಲ್ಲಿರುವ ಸುಳ್ಯಪದವು ಪೇಟೆ ಕೇಂದ್ರಭಾಗದಲ್ಲಿದೆ.

ಕೇರಳ ಅಥವಾ ಕರ್ನಾಟಕಕ್ಕೆ ಹೋಗ ಬೇಕಾದರೆ ಸುಳ್ಯಪದವು ಪೇಟೆಯ ಮೂಲಕ ಸಂಚರಿಸಬೇಕು. ಬಸ್ಸಿನಲ್ಲಿ ಬಂದರೆ ಸುಳ್ಯಪದವುನಲ್ಲಿ ಇಳಿದು ಬೇರೆ ವಾಹನದಲ್ಲಿ ಕೇರಳಕ್ಕೆ ಸಂಚರಿಸಬೇಕು. ಸಂಜೆ ಹೊತ್ತಿನಲ್ಲಿ ಜನಸಂಖ್ಯೆ ಹೆಚ್ಚು ಇದೆ.

ತವರಿಗೆ ಬಂದ ಅಮ್ಮದಿಂರು ಸುಳ್ಯಪದವು ಪೇಟೆಯ ಅಸ್ವಚ್ಛತೆ ಕಂಡು ದಿಗಿಲುಕೊಂಡರು. ಪೇಟೆಯ ಎಲ್ಲೆಂದರಲ್ಲಿ ಕಸ ರಾಶಿ ಬಿದ್ದಿರುವುದನ್ನು ಗಮನಿಸಿದರು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷಿ ಸ್ವಚ್ಛ ಭಾರತ ಅಭಿಯಾನ ಹಳ್ಳಿಯಲ್ಲಿ ಇಲ್ಲವೇ ಎಂದು ಮರುಗಿದರು. ಇದರ ಬಗ್ಗೆ ಊರವರ ಜೊತೆ ಚರ್ಚಿಸಿದರು. ಸ್ವಚ್ಛ ಅಭಿಯಾನದ ಮೂಲಕ ಪೇಟೆಯನ್ನು ಸ್ವಚ್ಛಗೊಳಿಸುವುದಕ್ಕೆ ನಿರ್ಧರಿಸಿದರು.

Advertisement

ತವರಿಗೆ ಬಂದ ಅಮ್ಮದಿಂರು ಮೇ 12ರಂದು ಪೇಟೆಯಲ್ಲಿ ಸ್ವಚ್ಛತೆಗೆ ಚಾಲನೆ ನೀಡಿದರು. ಇವರ ಜೊತೆ ಅವರ ಮಕ್ಕಳು, ಊರಿನವರು ಹೀಗೆ 35ಕ್ಕೂ ಹೆಚ್ಚು ಜನರು ಸೇರಿ ಎರಡು ಗಂಟೆ ಕಾಲ ಪೇಟೆ ಸುತ್ತಮುತ್ತಲ ಪರಿಸರವನ್ನು ಸ್ವಚ್ಛಗೊಳಿಸಿದರು. ಪೇಟೆಯಲ್ಲಿರುವ ಪ್ರಯಾಣಿಕರ ತಂಗುದಾಣವನ್ನು ನೀರು ಹಾಕಿ ಗುಡಿಸಿ ಸ್ವಚ್ಛಗೊಳಿಸಿದರು. ಅಮ್ಮಂದಿರು ಸ್ವಚ್ಛಗೊಳಿಸಿಸುವಾಗ ಮಕ್ಕಳೂ ಪೊರಕೆ ಹಿಡಿದರು. ಪೇಟೆಯ ಸುತ್ತಮುತ್ತ 10ಕ್ಕಿಂತಲೂ ಹೆಚ್ಚು ಗೋಣಿಗಳಲ್ಲಿ ಕಸಕಡ್ಡಿ, ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ, ಪಂಚಾಯತ್‌ ಆಳವಡಿಸಿದ ಕಸದ ತೊಟ್ಟಿಯಲ್ಲಿ ಹಾಕಿ ಬೆಂಕಿ ಹಚ್ಚಿದರು. ಕೊನೆಯಲ್ಲಿ ಬಾಯಾರಿಕೆ ತಣಿಸಲು ಕಲ್ಲಂಗಡಿ ಹಣ್ಣನ್ನು ವಿತರಿಸಲಾಯಿತು.

ಕಸ ವಿಲೇವಾರಿ ವ್ಯವಸ್ಥೆಯೇ ಇಲ್ಲ!
ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಯ ಪಡುವನ್ನೂರು ಗ್ರಾಮದ ಸುಳ್ಯಪದವುನಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸರಿಯಾದ ವ್ಯವಸ್ಥೆಯೇ ಇಲ್ಲ. ಘನ ತ್ಯಾಜ್ಯ ವಿಲೇವಾರಿ ಗುಂಡಿ ಇದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ಕಸ – ಕಡ್ಡಿಗಳಿಂದ ತುಂಬಿದೆ. ಪೊದರುಗಳು ಬೆಳೆದು ಗುಂಡಿ ಮುಚ್ಚಿಹೋಗಿದೆ. ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪಂಚಾಯತ್‌ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಸ್ವಚ್ಛತೆಯಿಂದ ನೆಮ್ಮದಿಬೆಂಗಳೂರಿನಿಂದ ತವರು ಮನೆಗೆ ಬಂದಿದ್ದೆ. ಸುಳ್ಯಪದವು ಪ್ರಯಾಣಿಕರ ಬಸ್‌ ತಂಗುದಾಣದ ಒಳಗೆ ಕಸದ ರಾಶಿ ಕಂಡು ದಂಗಾದೆ. ಕುಳಿತುಕೊಳ್ಳುವ ಪರಿಸ್ಥಿತಿಯೂ ಇರಲಿಲ್ಲ. ಊರವರ ಜತೆ ಮಾತನಾಡಿದೆ. ಅಭಿಯಾನದ ಮೂಲಕ ಸ್ವಚ್ಛಗೊಳಿಸುವ ನಿರ್ಧಾರ ಕೈಗೊಂಡೆವು. ಗ್ರಾಮಸ್ಥರ ಜತೆ ಪೇಟೆ ಸ್ವಚ್ಛಗೊಳಿಸಿದ್ದೇವೆ. ಮನಸ್ಸಿಗೆ ನೆಮ್ಮದಿ ತಂದಿದೆ.
-ಶೋಭಾ ಪ್ರಸನ್ನ ಭಾರದ್ವಾಜ್‌ ಬೆಂಗಳೂರು

ಊರು ಸ್ವಚ್ಛಗೊಂಡರೆ ದೇಶ ಸ್ವಚ್ಛ
ಸ್ವಚ್ಛತೆ ನೇತೃತ್ವ ವಹಿಸಿದ ಬೆಂಗಳೂರಿನ ಅಮ್ಮಂದಿರ ಬಗ್ಗೆ ಹೆಮ್ಮೆ ಎನಿಸುತ್ತದೆ. ಊರಿನ ಬಗ್ಗೆ ಅಭಿಮಾನ ಇಲ್ಲಿಯ ಜನರಿಗೆ ಇಲ್ಲದೇ ಇರುವುದು ಬೇಸರದ ಸಂಗತಿ. ಊರು ಸ್ವಚ್ಛವಾದರೆ ಮಾತ್ರ ದೇಶ ಸ್ವಚ್ಛವಾಗಲು ಸಾಧ್ಯ. ಇದರಿಂದ ಸ್ವಚ್ಛ ಭಾರತದ ಕಲ್ಪನೆ ಸಾಕಾರಗೊಳ್ಳುವುದು.
– ರಾಜೇಶ್‌ ಎಂ., ಅಧ್ಯಕ್ಷರು, ಯುವಶಕ್ತಿ ಕಲಾ ಮತ್ತು ಕ್ರೀಡಾಬಳಗ, ಸುಳ್ಯಪದವು

Advertisement

Udayavani is now on Telegram. Click here to join our channel and stay updated with the latest news.

Next