Advertisement

ತ್ರಿವೇಣಿ ಸಂಗಮ: ಉಕ್ಕಿ ಹರಿದ ಕಾವೇರಿ

02:42 PM Sep 10, 2019 | Team Udayavani |

ಮಡಿಕೇರಿ: ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಸೋಮವಾರ ಬೆಳಗ್ಗೆ ತ್ರಿವೇಣಿ ಸಂಗಮ ಉಕ್ಕಿ ಹರಿದಿದೆ. ನಾಪೋಕ್ಲು ರಸ್ತೆ ಮುಳುಗಡೆಯಾಗಿ ಗ್ರಾಮೀಣರು ಹಾಗೂ ವಾಹನ ಚಾಲಕರು ಸಂಕಷ್ಟಕ್ಕೆ ಸಿಲುಕಿದರು.

Advertisement

ನಾಪೋಕ್ಲುವಿಗೆ ಸಂಪರ್ಕ ಕಲ್ಪಿಸುವ ಅಯ್ಯಂಗೇರಿ ರಸ್ತೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿತ್ತು. ತತ್‌ಕ್ಷಣ ಸ್ಪಂದಿಸಿದ ಜಿಲ್ಲಾಡಳಿತ ಗ್ರಾಮೀಣರ ಸಂಚಾರಕ್ಕೆ ಅನುಕೂಲವಾಗುವಂತೆ ಬೋಟ್‌ ವ್ಯವಸ್ಥೆಯನ್ನು ಕಲ್ಪಿಸಿತು.

ಪ್ರವಾಹದಿಂದ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಸ್ಥಳದಲ್ಲಿ ಅಗ್ನಿಶಾಮಕ ಮತ್ತು ಗೃಹರಕ್ಷಕ ದಳದ ಸಿಬಂದಿ ಮೊಕ್ಕಾಂ ಹೂಡಿದ್ದಾರೆ.

ಹವಾಮಾನ ಮುನ್ಸೂಚನೆಯಂತೆ ಈ ಭಾಗಗಳಲ್ಲಿ ಸೋಮವಾರದಿಂದ ಮಳೆ ಕಡಿಮೆಯಾಗುವ ನಿರೀಕ್ಷೆ ಇದ್ದು, ಸಾರ್ವಜನಿಕರು ಮತ್ತು ಸ್ಥಳೀಯ ನಿವಾಸಿಗಳು ಭಯ, ಆತಂಕ ಪಡುವ ಅಗತ್ಯ ಇಲ್ಲವೆಂದು ಜಿಲ್ಲಾಡಳಿತ ತಿಳಿಸಿದೆ.
ವೀರಾಜಪೇಟೆ ತಾಲೂಕಿನ ಹುದಿಕೇರಿ, ಬಾಳೆಲೆ, ಶ್ರೀಮಂಗಲ ವಿಭಾಗಗಳಲ್ಲಿ ಉತ್ತಮ ಮಳೆೆಯಾಗುತ್ತಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಜನಜೀವನ ಇನ್ನೂ ಯಥಾಸ್ಥಿತಿಗೆ ಮರಳಿಲ್ಲ. ಮಡಿಕೇರಿಯಲ್ಲಿ ಮಳೆ ಕಡಿಮೆಯಾಗಿದೆ.

ಪರಿಹಾರ ಪೂರ್ಣ
ಕೊಡಗು ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಶೇ. 15ರಿಂದ 25ರಷ್ಟು ಹಾನಿಗೊಳಗಾದ ಮೂರು ತಾಲೂಕುಗಳ 1,032 ಮನೆಗಳ ಸಂತ್ರಸ್ತ ಕುಟುಂಬಗಳಿಗೆ ಸರಕಾರದ ಆದೇಶದಂತೆ 25 ಸಾವಿರ ರೂ.ಗಳು ಮತ್ತು ವೀರಾಜಪೇಟೆ ತಾಲೂಕಿನಲ್ಲಿ ಹಾನಿಗೊಳಗಾದ 30 ಗುಡಿಸಲುಗಳ ಸಂತ್ರಸ್ತರಿಗೆ ಪ್ರಕೃತಿ ವಿಕೋಪ ಮಾರ್ಗಸೂಚಿಯಂತೆ ಪರಿಹಾರ ವಿತರಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

ಮರೀಚಿಕೆಯಾದ ನೆರೆ ಪರಿಹಾರ: ಸಿಎಂಗೆ ದೂರು
ಕಳೆದ ವರ್ಷದ ಆಗಸ್ಟ್‌ನಲ್ಲಿ ಹಾರಂಗಿ ಅಣೆಕಟ್ಟಿನಿಂದ ಹೆಚ್ಚುವರಿ ನೀರು ಹರಿಸಿದ ಪರಿಣಾಮ ಜಲಾವೃತಗೊಂಡ ಕೂಡಿಗೆಯ ಒಂದನೇ ವಾರ್ಡ್‌ನ ಸುಮಾರು 50ಕ್ಕೂ ಅಧಿಕ ಕುಟುಂಬಗಳಿಗೆ ಇನ್ನೂ ಪರಿಹಾರ ನೀಡದಿರುವ ಅಧಿಕಾರಿಗಳ ವಿರುದ್ಧ ಕೊಡಗು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರ ಮೂಲಕ ಮುಖ್ಯಮಂತ್ರಿಗೆ ದೂರು ನೀಡಲಾಗಿದೆ. ಎರಡು ದಿನಗಳಲ್ಲಿ ಕಡತಗಳನ್ನು ಪರಿಶೀಲಿಸಿ ಶೀಘ್ರ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ಕಣಿವೆ ಸೇತುವೆ ದುರಸ್ತಿ ಶೀಘ್ರ
ಪ್ರವಾಹಕ್ಕೆ ಕೊಚ್ಚಿಹೋಗಿರುವ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಎದುರಿನ ಕಾವೇರಿ ತೂಗು ಸೇತುವೆಯಯನ್ನು ಆದಷ್ಟು ಶೀಘ್ರ ಸರಿಪಡಿಸಲಾಗುವುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next