Advertisement

ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಆಸ್ತಿಕರು

07:28 AM Feb 18, 2019 | |

ಮೈಸೂರು: ಹರಿ -ಹರರ ಸಾಮರಸ್ಯಕ್ಕೆ ಸಾಕ್ಷೀಭೂತವಾಗಿರುವ ತಿರುಮಕೂಡಲು ಶ್ರೀಕ್ಷೇತ್ರದ ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಹನ್ನೊಂದನೆ ಕುಂಭಮೇಳದ ನಿಮಿತ್ತ ಆಸ್ತಿಕರು ಮಹಾ ಮಾಘಸ್ನಾನ ಮಾಡಿ, ಸೂರ್ಯದೇವನಿಗೆ ಅರ್ಘ್ಯ ಅರ್ಪಿಸಿ ಧನ್ಯತೆ ಮೆರೆದರು.

Advertisement

ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾಗಿರುವ ಕನ್ನಡ ನಾಡಿನ ಜೀವನದಿ ಕಾವೇರಿಯನ್ನು ಕಪಿಲೆ ಸಂಗಮಿಸುವ ಕ್ಷೇತ್ರದಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಸ್ಫಟಿಕ ಸರೋವರವು ಮಿಳಿತ ವಾಗುವುದರಿಂದ ಯತಿಗಳು ಈ ಕ್ಷೇತ್ರವನ್ನು ತ್ರಿವೇಣಿ ಸಂಗಮ ಎಂದು ಗುರುತಿಸಿ 1989ರಲ್ಲಿ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ಕುಂಭಮೇಳ ಆರಂಭಿಸಿದ್ದು,

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಕುಂಭಮೇಳದಲ್ಲಿ ನಾಡಿನ ವಿವಿಧ ಮಠಾಧೀಶರು-ಯತಿಗಳು-ಧರ್ಮಾಧಿಕಾರಿಗಳು, ರಾಜಕೀಯ ನಾಯಕರುಗಳು, ಆಸ್ತಿಕ ಬಂಧುಗಳು ದೂರದ ಊರುಗಳಿಂದ ಬಂದು ತ್ರಿವೇಣಿ ಸಂಗಮದಲ್ಲಿ ಮಿಂದು ಭಕ್ತಿಭಾವದಿಂದ ನದಿಯ ಎರಡೂ ದಂಡೆಗಳಲ್ಲಿರುವ ಅತ್ಯಂತ ಪ್ರಾಚೀನಕಾಲದ ಶ್ರೀ ಮಹಾಲಕ್ಷ್ಮೀ ಗುಂಜಾ ನರಸಿಂಹಸ್ವಾಮಿ ಮತ್ತು ಶ್ರೀ ಅಗಸ್ತೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿ ಹೋಗುತ್ತಾರೆ.

ಅಗಸ್ತ್ಯ ಮುನಿಗಳು ಸ್ವತಃ ಇಲ್ಲಿನ ಮರಳಿನಿಂದ ಲಿಂಗವನ್ನು ಮಾಡಿ, ಇಲ್ಲಿಯೇ ಪ್ರತಿಷ್ಠಾಪಿಸಿ ಪೂಜಿಸಿದರೆಂಬುದನ್ನು ಶ್ರೀ ಅಗಸ್ತೇಶ್ವರ ಸ್ವಾಮಿ ದೇವಸ್ಥಾನವು ಉದ್ಘೋಷಿಸುತ್ತಿದೆ. ಶ್ರೀ ನರಸಿಂಹಸ್ವಾಮಿಯ ತೊಡೆಯ ಮೇಲೆ ಮಹಾಲಕ್ಷ್ಮೀ ಕುಳಿತಿದ್ದು, ನರಸಿಂಹಸ್ವಾಮಿಯು ತನ್ನ ಎಡಗೈನಲ್ಲಿ ತಕ್ಕಡಿ ಹಿಡಿದಿದ್ದು, ತಕ್ಕಡಿಯ ಒಂದು ಭಾಗ ವಾಲಿದೆ. ಹೀಗಾಗಿ ಈ ಕ್ಷೇತ್ರ ಕಾಶಿಗಿಂತಲೂ ಒಂದು ಗುಲಗಂಜಿ ತೂಕ ಹೆಚ್ಚು ಎಂಬ ಪ್ರತೀತಿ ಇದೆ.

ಜೊತೆಗೆ ಇಲ್ಲಿ ಹರಿಯುವ ತೀರ್ಥ ಗಂಗಾತೀರ್ಥಕ್ಕಿಂತಲೂ ಒಂದು ಗುಲಗಂಜಿ ಪ್ರಮಾಣದಷ್ಟು ಶ್ರೇಷ್ಠವೆಂದು ಶ್ರೀ ಗುಂಜಾ ನರಸಿಂಹಸ್ವಾಮಿಯ ಹಸ್ತದಲ್ಲಿರುವ ತಕ್ಕಡಿ ಸಂಕೇತಿಸುತ್ತಿದೆ. ಜೊತೆಗೆ ಅತ್ಯಂತ ಪ್ರಾಚೀನವಾದ ಇಲ್ಲಿನ ಶ್ರೀ ಭಾರದ್ವಾಜ ಋಷ್ಯಾಶ್ರಮ, ಶ್ರೀ ಚೌಡೇಶ್ವರಿ ದೇವಸ್ಥಾನ, ಶ್ರೀ ಹನುಮಂತೇಶ್ವರ ದೇವಸ್ಥಾನ, ರುದ್ರಪಾದ, ಅಕ್ಷಯ ವಟವೃಕ್ಷ, ಅಶ್ವತ್ಥವೃಕ್ಷ, ಗುಡಿ-ಮಂಟಪಗಳು, ಶ್ರೀವ್ಯಾಸರಾಜ ಮಠ ಈ ಕ್ಷೇತ್ರದ ಪಾವಿತ್ರ್ಯತೆಯನ್ನು ಹೆಚ್ಚಿದೆ.  

Advertisement

ಸಂಗಮದಲ್ಲಿ (ನಡುಹೊಳೆ ಬಸಪ್ಪ) ನಿರ್ಮಿಸಿರುವ ಯಾಗ ಮಂಟಪದಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಗೆ ಅಂಕುರಾರ್ಪಣೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ಕಾರ್ಯಕ್ರಮಗಳೊಂದಿಗೆ 2019ರ ಕುಂಭಮೇಳಕ್ಕೆ ವಿದ್ಯುಕ್ತ ಅಜ್ಞೆನೆ ದೊರೆಯಿತು.

ಕೈಲಾಸಾಶ್ರಮದ ಜಯೇಂದ್ರ ಪುರಿ ಸ್ವಾಮೀಜಿ ಅವರು ಅಗಸ್ತೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಅನುಜ್ಞೆ, ರುದ್ರಹೋಮ ಮಾಡಲಾಯಿತು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಕನಕ ಪೀಠದ ದೊರೆಸ್ವಾಮಿಗಳು ಸೇರಿದಂತೆ ಗಣಪತಿ ಆಶ್ರಮದ ವಟುಗಳು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಜಯೇಂದ್ರ ಪುರಿ ಸ್ವಾಮೀಜಿ ಅವರು ಕಷ್ಟಗಳ ಪರಿಹಾರ, ಪಾಪಗಳ ನಿವಾರಣೆಗಾಗಿ ಅನುಜ್ಞೆ ಮಾಡಲಾಗಿದ್ದು, ಗಣಪತಿ ಹೋಮದೊಂದಿಗೆ ಪೂಜೆ ಪ್ರಾರಂಭಿಸಲಾಗಿದೆ. ನಾಡಿನ ಸುಭಿಕ್ಷೆಗಾಗಿ ಹೋಮ-ಹವನ ಮೊದಲಾದ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಶನಿವಾರವೇ ಕ್ಷೇತ್ರಕ್ಕೆ ಆಗಮಿಸಿ ತಂಗಿದ್ದ ಭಕ್ತಾದಿಗಳು ಮುಂಜಾ® ೆ 4ಗಂಟೆಯಿಂದಲೇ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ಅಗಸ್ತೇಶ್ವರ ಸ್ವಾಮಿ ಮತ್ತು ಗುಂಜಾ ನರಸಿಂಹಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next