ತಿ.ನರಸೀಪುರ: ಕಾವೇರಿ ಮತ್ತು ಕಪಿಲಾ ನದಿ ನೀರಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಪಟ್ಟಣದ ತ್ರಿವೇಣಿ ಸಂಗಮದ ಎರಡೂ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನದಿ ತೀರದ ಪ್ರದೇಶ ಜಲಾವೃತ್ತಗೊಂಡಿವೆ. ವಿಶ್ವಕರ್ಮ ಬೀದಿ, ದಾವಣೆಗೆರೆ ಕಾಲೋನಿ ಹಾಗೂ ಹೆಮ್ಮಿಗೆ ರಸ್ತೆಯ ಮುಸ್ಲಿಂ ಕಾಲೋನಿಗಳಿಗೆ ನೀರು ನುಗ್ಗಿದ್ದು, ಇಲ್ಲಿನ ಜನರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಕಾವೇರಿ ಮತ್ತು ಕಪಿಲಾ ಸಂಗಮಗೊಳ್ಳುವ ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು, ನದಿ ನೀರು ಗುಂಜಾ ನರಸಿಂಹಸ್ವಾಮಿ ದೇಗುಲವನ್ನು ಸುತ್ತುವರಿದಿದೆ. ಹಳೇ ಸಂತೇಮಾಳದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು, ಹಿಂದುಳಿದ ವರ್ಗಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಿದ್ಯಾರ್ಥಿ ನಿಲಯಗಳು, ಅಗ್ನಿ ಶಾಮಕ ಠಾಣೆ ಹಾಗೂ ಮೂಲ ನಾಥೇಶ್ವರ ದೇವಾಲಯಗಳು ಕೂಡ ಜಲಾವೃತಗೊಂಡಿವೆ.
ರಸ್ತೆಗಳು ಮುಳುಗಡೆ: ಕಳೆದ 1993ರ ಪ್ರವಾಹದಷ್ಟೇ ಭೀಕರ ಪ್ರವಾಹ ಪಟ್ಟಣಕ್ಕೆ ಎದುರಾಗಿದ್ದು, ರಾಷ್ಟ್ರೀಯ ಹೆದ್ದಾರಿ 212ರ ಜಂಕ್ಷನ್‌ನ ತಿರುಮಕೂಡಲು ಫ್ಲೈಓವರ್ ಕೆಳಗಿನ ರಸ್ತೆಗಳು ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗ ರಸ್ತೆಗಳು ನೀರಿನಲ್ಲಿ ಮುಳುಗಿವೆ. ನದಿ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಹಳೇ ತಿರುಮಕೂಡಲು ಭಾರೀ ಪ್ರವಾಹಕ್ಕೆ ಸಿಲುಕುವ ಅಪಾಯ ಎದುರಾಗಿದ್ದು, ಮುನ್ನೆಚ್ಚರಿಕೆಗೆ ತಾಲೂಕು ಆಡಳಿತ ಮುಂದಾಗಿದೆ.
ಜನರನ್ನು ಕದಲಿಸಿದ ಪೊಲೀಸರು: ತ್ರಿವೇಣಿ ಸಂಗಮದಲ್ಲಿ ಕಾವೇರಿ ಮತ್ತು ಕಪಿಲಾ ನದಿಗಳು ಮೈದುಂಬಿ ಹರಿಯುತ್ತಿರುವುದರಿಂದ ನದಿಗಳ ವೈಭವನ್ನು ವೀಕ್ಷಿಸಲು ಗುಂಜಾ ನರಸಿಂಹಸ್ವಾಮಿ ದೇವಾಲಯದ ಬಳಿ ಜನರು ಬೆಳಗ್ಗೆಯಿಂದಲೇ ಜಮಾಯಿಸುತ್ತಿದ್ದರು. ಸಂಜೆಯ ನಂತರ ನದಿಯಲ್ಲಿನ ಪ್ರವಾಹ ಹೆಚ್ಚಾಗಿ, ನದಿಯ ಸೋಪಾನ ಕಟ್ಟೆ ಹಾಗೂ ದೇವಾಲಯ ಮುಂಭಾಗದ ಮಂಟಪವನ್ನೂ ದಾಟಿ ಉಕ್ಕಿ ಹರಿಯಲಾರಂಭಿಸಿದ್ದರಿಂದ ಪೊಲೀಸರು ನದಿ ವೀಕ್ಷಣೆಗೆ ಸೇರಿದ್ದ ಜನರನ್ನು ಚದುರಿಸಿದರು. ಎಸ್‌ಐ ಅಜರುದ್ದೀನ್ ಖುದ್ದಾಗಿ ನಿಂತು ಜನರನ್ನು ಕದಲಿಸಿದರು. ದೇವಾಲಯ ಬಳಸಿದ ಪ್ರವಾಹ ರಾಷ್ಟ್ರೀಯ ಹೆದ್ದಾರಿಯನ್ನೂ ಹತ್ತಲು ಆರಂಭಿಸಿತು.
ಪರಿಹಾರ ಕೇಂದ್ರ ಆರಂಭ: ನದಿಯ ನೀರು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ವಿಶ್ವಕರ್ಮ ಬೀದಿಯಲ್ಲಿನ ಕೆಲವು ಮನೆಗಳು, ದಾವಣೆಗೆರೆ ಕಾಲೋನಿ ಹಾಗೂ ಹೆಮ್ಮಿಗೆ ರಸ್ತೆಯ ಮುಸ್ಲಿಂ ಕಾಲೋನಿಗಳ ಮನೆಗಳಿಗೆ ನುಗ್ಗಿರುವುದರಿಂದ ಇಲ್ಲಿನ ನಿವಾಸಿಗಳು ನಿರಾಶ್ರಿತರಿಗಾಗಿ ಪಟ್ಟಣದ ಪುರಸಭೆ ಸಿಡಿಎಸ್ ಭವನದ ಪಕ್ಕದಲ್ಲಿರುವ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಮುಂಗಾರು ಹಂಗಾಮಿನ ನಾಟಿ ಕಾರ್ಯಕ್ಕೆ ಬಿತ್ತನೆ ಮಾಡಿದ್ದ ಒಟ್ಟಲು ಪಾತಿ ಮತ್ತು ನಾಟಿ ಮಾಡಿದ್ದ ಪೈರುಗಳು ಕೊಚ್ಚಿ ಹೋಗಿವೆ. ಹೆಮ್ಮಿಗೆ ಸೇತುವೆ ಮುಳುಗಡೆ ಆಗಿರುವುದರಿಂದ ತಲಕಾಡು ನರಸೀಪುರ ಮಾರ್ಗವನ್ನು ಬದಲಾಯಿಸಲಾಗಿದೆ.
ಕಲ್ಯಾಣ ಮಂಟಪ ಜಲಾವೃತ – ನಡೆಯುತ್ತಿದ್ದ ಮದುವೆ ಸ್ಥಳಾಂತರ!: ಹಳೇ ತಿರುಮಕೂಡಲು ರಾಷ್ಟ್ರೀಯ ಹೆದ್ದಾರಿ ಮೈಸೂರು ರಸ್ತೆಯವರೆಗೂ ಕಪಿಲಾ ನದಿಯ ಪ್ರವಾಹ ವ್ಯಾಪಿಸಿದ್ದರಿಂದ ಶ್ರೀನಿವಾಸ ಕಲ್ಯಾಣ ಮಂಟಪವೂ ನೀರಿನಲ್ಲಿ ಮುಳುಗಿದ್ದರಿಂದ ನಿಗದಿಯಾಗಿದ್ದ ಮದುವೆ ಮತ್ತೂಂದು ಕಲ್ಯಾಣ ಮಂಟಪಕ್ಕೆ ಸ್ಥಳಾಂತರಗೊಂಡಿತು. ಚಾಮರಾಜನಗರ ರಾಮಸಮುದ್ರದ ವರನಿಗೂ ಹಾಗೂ ತಾಲೂಕಿನ ದೊಡ್ಡಪುರ ಗ್ರಾಮದ ವಧುಗೂ ವಿವಾಹ ನಿಶ್ಚಯವಾಗಿತ್ತು.
ರಾತಿಯಿಡೀ ಕಲ್ಯಾಣ ಮಂಟಪದಲ್ಲಿಯೇ ವಧು-ವರರೂ ಇದ್ದರಾದರೂ ಬೆಳಗಾಗುವ ಹೊತ್ತಿಗೆ ಕಲ್ಯಾಣ ಮಂಟಪಕ್ಕೆ ಪ್ರವಾಹ ನೀರು ನುಗ್ಗಿದ್ದರಿಂದ ಬೆಚ್ಚಿಬಿದ್ದ ಹೆಣ್ಣುಗಂಡಿನ ಕಡೆಯವರಿಬ್ಬರೂ ಕೂಡಲೇ ಎಚ್ಚೆತ್ತುಕೊಂಡು ಜೋಡಿ ರಸ್ತೆಯಲ್ಲಿರುವ ಮಹದೇಶ್ವರ ಕಲ್ಯಾಣ ಮಂಟಪಕ್ಕೆ ವಿವಾಹವನ್ನೇ ಸ್ಥಳಾಂತರಿಸಿದರು. ಮಧ್ಯಾಹ್ನ ವೇಳೆಗೆ ಶ್ರೀನಿವಾಸ ಕಲ್ಯಾಣ ಮಂಟಪ ಸಂಪೂರ್ಣ ಜಲಾವೃತವಾಗಿತ್ತು.